ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರ್ಪಕ ನೀರು ಪೂರೈಕೆಗೆ ಜಿಲ್ಲಾಡಳಿತ ಬದ್ಧ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಚಕ್ರವರ್ತಿ ಮೋಹನ್
Last Updated 7 ಮಾರ್ಚ್ 2019, 11:08 IST
ಅಕ್ಷರ ಗಾತ್ರ

ಶಿವಮೊಗ್ಗ: ಬೇಸಿಗೆ ಸಮಯದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಚಕ್ರವರ್ತಿ ಮೋಹನ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಸಧ್ಯದ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತೊಂದರೆ ಇಲ್ಲ. ಬೇಸಿಗೆಯಲ್ಲಿ 216 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಉಂಟಾಗಬಹುದು ಎಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಗುರುತಿಸಿವೆ. ಈ ಗ್ರಾಮಗಳಲ್ಲಿ ನೀರು ಸಮರ್ಪಕ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಪೈಪ್‌ಲೈನ್‌ ಅಳವಡಿಕೆ, ಕುಡಿಯುವ ನೀರಿನ ಮೂಲಗಳನ್ನು ಗುರುತಿಸುವ ಕೆಲಸ ಮಾಡಬೇಕು ಎಂದರು.

ಶಿವಮೊಗ್ಗ ನಗರದ ಕೆಲವು ಬಡಾವಣೆಗಳಲ್ಲಿ 24x7 ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಆದರೂ, ಸಮರ್ಪಕವಾಗಿ ನೀರು ಪೂರೈಕೆ ಸಾಧ್ಯವಾಗಿಲ್ಲ. ತಕ್ಷಣ ಲೋಪಗಳನ್ನು ಸರಿಪಡಿಸಿ, ನೀರು ಪೂರೈಕೆ ಮಾಡಬೇಕು ಎಂದು ತಾಕೀತು ಮಾಡಿದರು.

ಬೆಳೆಯುತ್ತಿರುವ ಶಿವಮೊಗ್ಗ ನಗರದ ಭವಿಷ್ಯ ಗಮನದಲ್ಲಿಟ್ಟುಕೊಂಡು ನೀರಿನ ಮರು ಬಳಕೆ, ತ್ಯಾಜ್ಯ ನೀರು ಸಂಸ್ಕರಣೆಯ ಯೋಜನೆ ಸಿದ್ಧಪಡಿಸಬೇಕು. ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿಗಳನ್ನು ಸಮಪರ್ಕವಾಗಿ ಅನುಷ್ಠಾನಗೊಳಿಸಬೇಕು ಎಂದರು.

ಬರ ಪರಿಹಾರ: ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯ ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ಸೊರಬ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿ ತಲಾ ₨ 1 ಕೋಟಿ ಬಿಡುಗಡೆ ಮಾಡಲಾಗಿದೆ. ಈ ತಾಲ್ಲೂಕುಗಳಲ್ಲಿ ಬರ ಪರಿಹಾರ ಕಾಮಗಾರಿ ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಸೂಚಿಸಿದರು.

ಅಂಗನವಾಡಿಗಳಿಗೆ ನಿವೇಶನ:ಎಲ್ಲಾ ಅಂಗನವಾಡಿಗಳು ಸ್ವಂತ ಕಟ್ಟಡದಲ್ಲಿ ನಡೆಯಬೇಕು ಎನ್ನುವುದು ಸರ್ಕಾರದ ಧ್ಯೇಯ. ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ನಿವೇಶನ ಗುರುತಿಸಬೇಕು. ಪ್ರಸ್ತುತ 1902 ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳಿವೆ. 200 ಅಂಗನವಾಡಿಗಳು ನಿರ್ಮಾಣ ಹಂತದಲ್ಲಿವೆ. 252 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. 102 ಅಂಗನವಾಡಿಗಳಿಗೆ ನಿವೇಶನ ಗುರುತಿಸಲಾಗಿದೆ. ಉಳಿದ ಅಂಗನವಾಡಿಗಳಿಗೆ ನಿವೇಶನ ಗುರುತಿಸುವ ಕಾರ್ಯ ಶೀಘ್ರ ಪೂರ್ಣಗೊಳಿಸಬೇಕು ಎಂದರು.

ವೃದ್ಧಾಪ್ಯ ವೇತನ ಇತ್ಯಾದಿ ಸೌಲಭ್ಯಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಅಂಗವಿಕಲ ಅಭ್ಯರ್ಥಿಗಳಿಗೆ ನೆರವು ನೀಡುವಂತೆ ಸೂಚನೆ ನೀಡಿದರು.

33,886 ರೈತರ ಸಾಲಮನ್ನಾಳ:ಜಿಲ್ಲೆಯ 33,886 ರೈತರು ಸಾಲಮನ್ನಾ ಪ್ರಯೋಜನ ಪಡೆಯುತ್ತಿದ್ದಾರೆ. ಇದುವರೆಗೆ 5004 ಫಲಾನುಭವಿಗಳ 21.71 ಕೋಟಿ ಸಾಲ ಮನ್ನಾ ಮಾಡಲಾಗಿದೆ. ಸಂಪೂರ್ಣ ಸಾಲಮನ್ನಾಕ್ಕಾಗಿ ₨ 139.38 ಕೋಟಿ ಅನುದಾನ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪೂರ್ಣಿಮಾ, ಜಿಲ್ಲಾ ಪಂಚಾಯಿತಿ ಸಿಇಒ ಕೆ. ಶಿವರಾಮೇಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT