ಬುಧವಾರ, ನವೆಂಬರ್ 13, 2019
28 °C
ಮತಗಟ್ಟೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶಿವಕುಮಾರ್ ಎಚ್ಚರಿಕೆ

ಮತದಾರರ ಪಟ್ಟಿ ಪರಿಷ್ಕರಣೆ: ವಿಳಂಬ ಮಾಡಿದರೆ ಶಿಸ್ತು ಕ್ರಮ

Published:
Updated:

ಶಿವಮೊಗ್ಗ: ನಗರ ಪಾಲಿಕೆ ವ್ಯಾಪ್ತಿಯ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಒಂದೂವರೆ ತಿಂಗಳಾದರೂ ಶೇ 17ರಷ್ಟು ಮಾತ್ರ ಪ್ರಗತಿ ಕಂಡಿದೆ. ನಿಗದಿತ ಅವಧಿಯ ಒಳಗಾಗಿ ಪರಿಷ್ಕರಣೆ ಕಾರ್ಯ ಪೂರ್ಣಗೊಳಿಸದಿದ್ದರೆ ಮತಗಟ್ಟೆ ಅಧಿಕಾರಿ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಎಚ್ಚರಿಕೆ ನೀಡಿದರು.

ನಗರ ಪಾಲಿಕೆ ಸಭಾಂಗಣದಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಿಎಲ್‍ಒಗಳು ಮನೆ ಮನೆ ಭೇಟಿ ನೀಡಿ ಸಂಗ್ರಹಿಸುವ ಮಾಹಿತಿ ನೇರವಾಗಿ ಬಿಎಲ್‍ಒ ಆ್ಯಪ್‌ನಲ್ಲಿ ನಮೂದಿಸಬೇಕು. ಮತದಾರರ ಸೇವಾ ಕೇಂದ್ರದಲ್ಲಿ ಮಾಹಿತಿ ನಮೂದಿಗೆ ನೀಡಿದರೆ ವಿಳಂಬವಾಗುತ್ತದೆ. ಚುನಾವಣಾ ಆಯೋಗದ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಅಲ್ಲೇ ಮಾಹಿತಿ ದಾಖಲಿಸಬೇಕು ಎಂದು ಸೂಚಿಸಿದರು.

ಜನರು ನೇರವಾಗಿ ಸೇವಾ ಕೇಂದ್ರದಲ್ಲಿ ಮಾಹಿತಿ ನೀಡಬಹುದು. ನೇರವಾಗಿ ಚುನಾವಣಾ ಆಯೋಗದ ವೆಬ್‌ಪೋರ್ಟ್‌ನಲ್ಲಿ ಮಾಹಿತಿ ಅಪ್‌ಡೇಟ್‌ ಮಾಡಬಹುದು. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರಗತಿ 20ನೇ ಸ್ಥಾನದಲ್ಲಿದೆ. ₨ 2.62ಲಕ್ಷ ಮತದಾರರ ಪರಿಶೀಲನೆ ಕಾರ್ಯ ಪೂರ್ಣಗೊಳಿಸಬೇಕಿದೆ ಎಂದರು.

ಮತದಾರರ ಪಟ್ಟಿ ಪರಿಶೀಲನೆ ಕಾರ್ಯ ನವೆಂಬರ್ 18ರವರೆಗೆ ವಿಸ್ತರಿಸಲಾಗಿದೆ. ಇದುವರೆಗೆ ಶಿವಮೊಗ್ಗ ಗ್ರಾಮೀಣ ಶೇ 47, ಭದ್ರಾವತಿ ಶೇ 35, ಶಿಕಾರಿಪುರ ಶೇ 56, ಸೊರಬ ಶೇ 55 ಮತ್ತು ಸಾಗರ ದಲ್ಲಿಶೇ 40ರಷ್ಟು ಪ್ರಗತಿ ಸಾಧಿಸಲಾಗಿದೆ. ಪ್ರತಿಯೊಬ್ಬ ಮತಗಟ್ಟೆ ಅಧಿಕಾರಿ ಕನಿಷ್ಠ 650ರಿಂದ 1,200 ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಬೇಕಾಗಿದೆ. ಈ ತಿಂಗಳ ಅಂತ್ಯದ ಒಳಗೆ ಉತ್ತಮ ಸಾಧನೆ ತೋರಿಸಬೇಕು ಎಂದು ಸಲಹೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಜೆ.ಅನುರಾಧಾ, ನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)