ಭಾನುವಾರ, ಡಿಸೆಂಬರ್ 8, 2019
20 °C

ಬೆಳೆ ವಿಮೆ ತ್ವರಿತ ಪಾವತಿಗೆ ಡಿಸಿ ತಾಕೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಬಾಕಿ ಉಳಿದ ಬೆಳೆ ವಿಮೆಯ ಮೊತ್ತವನ್ನು ರೈತರ ಖಾತೆಗಳಿಗೆ ತ್ವರಿತವಾಗಿ ಪಾವತಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ವಿಮಾ ಕಂಪನಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

2018-19ನೇ ಸಾಲಿನಲ್ಲಿ ಜಿಲ್ಲೆಯ 10,171 ರೈತರಿಗೆ ₹ 20 ಕೋಟಿ ಬೆಳೆ ವಿಮೆ ಮೊತ್ತ ಪಾವತಿಸಲಾಗಿದೆ. 3,386 ಪ್ರಕರಣಗಳು ಬಾಕಿ ಇವೆ. ₹ 6.44 ಕೋಟಿ ವಿಮಾ ಕಂಪೆನಿಗಳು ಪಾವತಿಸಬೇಕಿದೆ. ಅಡಿಕೆ, ಶುಂಠಿ ಮತ್ತು ಕಾಳು ಮೆಣಸು ತೋಟಗಾರಿಕಾ ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆವಿಮೆ ಸೌಲಭ್ಯವಿದೆ. 2018-19ನೇ ಸಾಲಿನಲ್ಲಿ 8,889 ರೈತರು ಬೆಳೆವಿಮೆ ಪಾಲಿಸಿ ಪಡೆದಿದ್ದಾರೆ. ₹  24.99 ಕೋಟಿ ಬೆಳೆ ವಿಮೆ ನೀಡಬೇಕಿದೆ. ಇದುವರೆಗೆ ₹ 9.63 ಕೋಟಿ ಪಾವತಿಸಲಾಗಿದೆ. 2017-18ನೇ ಸಾಲಿನಲ್ಲಿ 450 ಪ್ರಕರಣಗಳಲ್ಲಿ ₹ 1.33 ಕೋಟಿ ಪಾವತಿಸಬೇಕಿದೆ. ಈ ಕುರಿತು ವಿಮಾ ಕಂಪನಿಗಳಿಗೆ ಸೂಚನಾ ಪತ್ರ ಬರೆಯಬೇಕು ಎಂದು ತಾಕೀತು ಮಾಡಿದರು.

ಪ್ರಸ್ತುತ ಹಂಗಾಮಿನಲ್ಲಿ ಶೇ 50ರಷ್ಟು ಪ್ರಾಯೋಗಿಕ ಬೆಳೆ ಕಟಾವು ಕಾರ್ಯ ಪೂರ್ಣಗೊಳಿಸಲಾಗಿದೆ. ಮೆಕ್ಕೆ ಜೋಳ ಪ್ರಾಯೋಗಿಕ ಬೆಳೆ ಕಟಾವು ಬಹುತೇಕ ಪೂರ್ಣಗೊಂಡಿದೆ. ಕೃಷಿ ಇಲಾಖೆ, ಕಂದಾಯ ಇಲಾಖೆ ಪರಸ್ಪರ ಸಮನ್ವಯದ ಮೂಲಕ ಈ ಕಾರ್ಯ ಪೂರ್ಣಗೊಳಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣಕುಮಾರ್, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಯೋಗೀಶ್‌ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)