ಸಮಸ್ಯೆಗಳಿಗೆ ಪರಿಹಾರ ಹುಡುಕುವ ತವಕ

7
ಸಂವಾದ ಕಾರ್ಯಕ್ರಮದಲ್ಲಿ ಮನದಾಳ ತೆರೆದಿಟ್ಟ ಜಿಲ್ಲಾಧಿಕಾರಿ ದಯಾನಂದ್‌

ಸಮಸ್ಯೆಗಳಿಗೆ ಪರಿಹಾರ ಹುಡುಕುವ ತವಕ

Published:
Updated:
Deccan Herald

ಶಿವಮೊಗ್ಗ: ಎಲ್ಲ ಸಮಸ್ಯೆಗಳಿಗೂ ಪರಿಹಾರ ಇರುತ್ತದೆ. ಪರಿಹಾರ ನಾವೇ ಕಂಡುಕೊಳ್ಳಬೇಕು. ಆಡಳಿತದಲ್ಲಿ ಬದಲಾವಣೆ ತಂದರೆ ವ್ಯವಸ್ಥೆಯೂ ಸುಧಾರಣೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಪ್ರತಿಪಾದಿಸಿದರು.

ಪ್ರೆಸ್‌ಟ್ರಸ್ಟ್‌ ಸೋಮವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಭಿನ್ನ ವ್ಯಕ್ತಿತ್ವದ ಜನರು ಸಮಾಜದಲ್ಲಿ ಇದ್ದಾರೆ. ವ್ಯಕ್ತಿ ಯಾವ ರೀತಿ ನಡೆದುಕೊಳ್ಳುತ್ತಾರೆ ಅದರ ಮೇಲೆ ಅವರ ವ್ಯಕ್ತಿತ್ವ ನಿಂತಿರುತ್ತದೆ. ಆಡಳಿತದಲ್ಲಿ ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ಟೀಕೆಗಳು ಸಹಜ. ಅಂತಹ ಟೀಕೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡಾಗ ಇನ್ನಷ್ಟು ಕೆಲಸ ಮಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಆಡಳಿತಾತ್ಮಕ ಸುಧಾರಣೆಗೆ ಪ್ರಥಮ ಆದ್ಯತೆ ನೀಡಲಾಗುವುದು. ನಿಯಮಗಳಲ್ಲಿನ ಲೋಪಗಳನ್ನು ಗುರುತಿಸಿ, ಬದಲಾವಣೆ ಮಾಡಿಕೊಳ್ಳಬೇಕು. ಆಗ ಎಂತಹ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ತಾವು ಕೆಲಸ ಮಾಡಿದ ಎಲ್ಲ ಕಡೆಯೂ ಇದೇ ತತ್ವ ಅನುಸರಿಸಿದ ಫಲವಾಗಿ ಉತ್ತಮ ಫಲಿತಾಂಶ ದೊರಕಿದೆ. ಶಿಕ್ಷಕ, ಉಪ ವಿಭಾಗಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ, ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುವಾಗ ಹಲವು ಪ್ರಯೋಗ ನಡೆಸಿ, ಯಶಸ್ವಿಯಾಗಿರುವೆ. ಜಿಲ್ಲೆಯಲ್ಲೂ ಅದೇ ರೀತಿ ಕೆಲಸ ಮಾಡುವ ಇಚ್ಚೆ ಇದೆ ಎಂದು ಅಧಿಕಾರದ ನಿರ್ಧಾರ ಹಂಚಿಕೊಂಡರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಕೆಲಸ ಮಾಡುವಾಗ ಅಲ್ಲಿನ ಕಡತಗಳೇ ಕಾಣೆಯಾಗುತ್ತಿದ್ದವು. ಭ್ರಷ್ಟಾಚಾರ ನುಸುಳಿತ್ತು. ಹಾಗಾಗಿ, ಕಾಗದ ರಹಿತ ಇ-ಆಡಳಿತ ಜಾರಿಗೆ ತಂದೆ. ಆನ್‌ ಲೈನ್‌ಗೆ ಇತ್ತು ನೀಡಿದೆ. ಜಿಲ್ಲಾಧಿಕಾರಿಯಾಗಿದ್ದಾಗ ನಕಲಿ ಮತದಾರರ ಪಟ್ಟಿ ಗುರುತಿಸಿ ರದ್ದು ಮಾಡಿದೆ. ಹೀಗೆ ಹಲವು ಕೆಲಸ ತೃಪ್ತಿ ತಂದಿದೆ ಎಂದು ಮನದಾಳ ಬಿಚ್ಚಿಟ್ಟರು.

ಜಿಲ್ಲೆಯಲ್ಲಿ ಬಗರ್‌ಹುಕುಂ ಸಮಸ್ಯೆ ಸೇರಿದಂತೆ ಜಿಲ್ಲೆಯಲ್ಲಿ ಹಲವು ಸಮಸ್ಯೆಗಳಿವೆ. ಮಲೆನಾಡು ಪ್ರದೇಶವಾಗಿರುವ ಕಾರಣ ಅರಣ್ಯ ಭೂಮಿ, ಕಂದಾಯ ಭೂಮಿ ನಡುವೆ ಖಚಿತ ಗಡಿ ಗುರುತಿಸಬೇಕಿದೆ. ಬಗರ್‌ಹುಕುಂ ಅಕ್ರಮ ಕುರಿತು ಪರಿಶೀಲಿಸದೇ ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ. ಆದರೆ, ತಹಶೀಲ್ದಾರ್‌ಗಳು ಎಚ್ಚರಿಕೆಯಿಂದ ಕಾನೂನು ಪರಧಿಯಲ್ಲಿ ಕಾರ್ಯನಿರ್ವಹಿಸಿದರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಗೊಂದಲಗಳು, ಕಾನೂನು ಸಮಸ್ಯೆ ಇದ್ದರೆ ಉಪ ವಿಭಾಗಾಧಿಕಾರಿಗೆ ಮೇಲ್ಮನವಿ ಸಲ್ಲಿಸಬೇಕು. ಗೊತ್ತಿದ್ದೂ ತಪ್ಪು ಮಾಡಿದ್ದರೆ ಕ್ರಮ ಅನಿವಾರ್ಯ ಎಂದರು.

ಚಿಕ್ಕಮಗಳೂರು ನನ್ನ ಪ್ರೀತಿಯ ಜಿಲ್ಲೆ. ಅಲ್ಲಿನ ದಟ್ಟವಾದ ಅನುಭವಗಳು ಜತೆಗಿವೆ. ನಕ್ಸಲ್ ಹೋರಾಟ, ಎನ್‌ಕೌಂಟರ್, ಶರಣಾಗತಿ, ಪರಿವರ್ತನೆ ಹಂತಗಳನ್ನು ಹತ್ತಿರದಿಂದ ಕಂಡಿದ್ದೇನೆ. ಸಂತ್ರಸ್ಥ ಮಕ್ಕಳಿಗೆ ನೆರವು ನೀಡಿದ್ದೇನೆ. ಮಲೆನಾಡು ಬದುಕು ಪುಳಕಿತಗೊಳಿಸಿದೆ ಎಂದು ನೆನಪಿನ ಬುತ್ತಿ ಬಿಚ್ಚಿಟ್ಟರು.

ಟ್ರಸ್ಟ್‌ ಅಧ್ಯಕ್ಷ ಎನ್‌. ಮಂಜುನಾಥ್, ಜಿಲ್ಲಾ ವೃತ್ತಿನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸೂರ್ಯನಾರಾಯಣ ಉಪಸ್ಥಿತರಿದ್ದರು.

 

 

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !