ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಾದ, ಕುಂದುಕೊರತೆ ಆಲಿಕೆ, ಸ್ಥಳದಲ್ಲೇ ಸೌಲಭ್ಯ

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ: ಹೊಸ ಮಾಲಂಗಿಯಲ್ಲಿ ಡಾ.ಎಂ.ಆರ್‌.ರವಿ ವಾಸ್ತವ್ಯ
Last Updated 20 ಫೆಬ್ರುವರಿ 2021, 16:01 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಜಮೀನು, ಮನೆ ಖಾತೆ ಮಾಡಿಕೊಡಿ, ಪಿಂಚಣಿ ಸಿಗುತ್ತಿಲ್ಲ, ರಸ್ತೆ ಒತ್ತುವರಿಯಾಗಿದೆ; ತೆರವುಗೊಳಿಸಿ, ಕಷ್ಟಗಳಿಗೆ ಸ್ಥಳೀಯ ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ಊರಿನಲ್ಲೇ ಪಡಿತರ ವಿತರಣೆ ಮಾಡಿ...

ಇಂತಹ ಹತ್ತಾರು ಸಮಸ್ಯೆಗಳ ಸರಮಾಲೆಯನ್ನೇ ಗ್ರಾಮಸ್ಥರು ನೇರವಾಗಿ ಜಿಲ್ಲಾಧಿಕಾರಿ ‌ಡಾ.ಎಂ.ಆರ್‌.ರವಿ ಅವರ ಮುಂದಿಟ್ಟರು. ಪ್ರತಿಯೊಬ್ಬರ ಸಮಸ್ಯೆಯನ್ನು ಆಲಿಸಿದ ಅವರು, ಅದಕ್ಕೆ ಪರಿಹಾರವನ್ನೂ ಸೂಚಿಸಿದರು. ಕೆಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಿದರು.

ಇದಕ್ಕೆಲ್ಲ ವೇದಿಕೆಯಾಗಿದ್ದು ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ. ತಾಲ್ಲೂಕಿನ ಹೊಸ ಮಾಲಂಗಿ ಗ್ರಾಮದಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ವಾಸ್ತವ್ಯ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆಯಿಂದ ಸಂಜೆಯವರೆಗೂ ಅಧಿಕಾರಿಗಳೊಂದಿಗೆ ಗ್ರಾಮದಲ್ಲೇ ಇದ್ದ ಜಿಲ್ಲಾಧಿಕಾರಿ ಅವರು ಜನರ ಕುಂದು ಕೊರತೆ, ಕಷ್ಟ ಸುಖಗಳನ್ನು ಆಲಿಸಿದರು. ರಾತ್ರಿ ಗ್ರಾಮದ ಶಾಲೆಯಲ್ಲೇ ವಾಸ್ತವ್ಯ ಹೂಡಿದರು. ಜಿಲ್ಲಾಧಿಕಾರಿ ಅವರೊಂದಿಗೆ ಉಪವಿಭಾಗಾಧಿಕಾರಿ ಡಾ.ಗಿರೀಶ್‌ ದಿಲೀಪ್‌ ಬದೋಲೆ, ತಹಶೀಲ್ದಾರ್‌ ಕೆ.ಕುನಾಲ್‌ ಅವರು ಕೂಡ ಜೊತೆ ನೀಡಿದರು.

ಬೆಳಿಗ್ಗೆ 10.40ಕ್ಕೆ ಗ್ರಾಮಕ್ಕೆ ಬಂದ ಜಿಲ್ಲಾಧಿಕಾರಿ ಅವರನ್ನು ಸರ್ಕಾರಿ ಪ್ರೌಢ ಶಾಲೆಯ ಮಕ್ಕಳು ಹೂ ನೀಡಿ ಬರಮಾಡಿಕೊಂಡರು. ಕಾರ್ಯಕ್ರಮಕ್ಕಾಗಿ ಶಾಲಾ ಆವರಣವನ್ನು ರಂಗೋಲಿ, ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಡಾ.ಎಂ.ಆರ್‌.ರವಿ ಅವರು ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ಮಕ್ಕಳು ತಯಾರಿಸಿದ, ಸಿದ್ಧಪಡಿಸಿದ ವಸ್ತುಗಳ ಪ್ರದರ್ಶನವನ್ನು ವೀಕ್ಷಿಸಿದರು.ಆರೋಗ್ಯ ಶಿಬಿರವನ್ನು ಉದ್ಘಾಟಿಸಿದರು.

ಮಕ್ಕಳೂಂದಿಗೆ ಸಂವಾದ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಶಾಲೆಯಲ್ಲಿ ಸಿಗುವ ಸೌಲಭ್ಯಗಳು, ಶಿಕ್ಷಕರ ಪಾಠ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಪ್ರಶ್ನಿಸಿದರು. ಕೋವಿಡ್‌–19 ತಡೆಗೆ ಪಾಲಿಸಬೇಕಾದ ನಿಯಮಗಳ ಬಗ್ಗೆಯೂ ತಿಳಿ ಹೇಳಿದರು.

ಕುಂದುಕೊರತೆಗಳ ಆಲಿಕೆ: ಆ ಬಳಿಕ ಸಂಜೆಯವರೆಗೂ ಜಿಲ್ಲಾಧಿಕಾರಿ ಅವರು ಗ್ರಾಮಸ್ಥರ ಕುಂದುಕೊರತೆಗಳನ್ನು ಆಲಿಸಿದರು. ಐದು ಗಂಟೆಗೂ ಹೆಚ್ಚು ಕಾಲ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಕೆಲವುಗಳನ್ನು ತಕ್ಷಣವೇ ಪರಿಹರಿಸಿದರೆ, ಇನ್ನೂ ಕೆಲವು ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹರಿಸುವಂತೆ ಅ‌ಧಿಕಾರಿಗಳಿಗೆ ಸೂಚಿಸಿದರು.

70ಕ್ಕೂ ಹೆಚ್ಚು ಮಂದಿ ಖಾತೆ ಮಾಡಿಸಿಕೊಂಡುವಂತೆ ಮನವಿ ಮಾಡಿದರು. ಜಮೀನು ಹಾಗೂ ನಿವೇಶನಗಳ ಖಾತೆ ಮಾಡಿಸಿಕೊಳ್ಳಲು ಕಚೇರಿಗಳಿಗೆ ಅಲೆದಾಡಿ ಸಾಕಾಗಿದೆ. ನಮಗೆ ಶೀಘ್ರದಲ್ಲಿ ಖಾತೆ ಮಾಡಿಸಿಕೊಡಿ ಎಂದು ಅಲವತ್ತುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು, ಜಮೀನು ಹಾಗೂ ಮನೆಗಳಿಗೆ ಸಂಬಂಧಿಸಿದ ಸರಿಯಾದ ದಾಖಲೆಗಳನ್ನು ನೀಡಿದರೆ ಖಾತೆ ಮಾಡಿಕೊಡುವುದಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದರು.

ಸ್ಥಳದಲ್ಲೇ ಆಧಾರ್‌: ಗ್ರಾಮದ ನಾಗಣ್ಣ ಎಂಬುವವರು, ‘ನಮ್ಮ ಬಳಿ ಆಧಾರ್ ಕಾರ್ಡ್, ಪಡಿತರ ಚೀಟಿ ಇಲ್ಲ. ಮಲಗಲು ಮನೆಯಿಲ್ಲ ದೇವಸ್ಥಾನ ಆವರಣದಲ್ಲಿ ಮಲಗುತ್ತೇನೆ. ನನಗೆ ಸರ್ಕಾರದ ಯಾವ ಸವಲತ್ತುಗಳೂ ಸಿಗುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ಗ್ರಾಮಸ್ಥರಿಂದ ಇವರ ಬಗ್ಗೆ ಮಾಹಿತಿ ಪಡೆದ ಸರ್ಕಾರದಿಂದ ಕೂಡಲೇ ಮನೆಯನ್ನು ನಿರ್ಮಾಣ ಮಾಡಿಕೊಡುತ್ತೇನೆ ಮತ್ತು ಇವರಿಗೆ ಸರ್ಕಾರದ ಸೌಲಭ್ಯಗಳನ್ನು ದೊರಕಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದರಲ್ಲದೆ, ಸ್ಥಳದಲ್ಲೇ ಆಧಾರ್ ಕಾರ್ಡ್ ಮಾಡಿಸಿ ಕೊಟ್ಟರು.

ಸಿಲ್ಕಲ್‍ಪುರದ ರಾಜೇಂದ್ರ ಅವರು ಮಾತನಾಡಿ, ‘ಸರ್ಕಾರದ ವತಿಯಿಂದ ನಮ್ಮ ಗ್ರಾಮಕ್ಕೆ ಆಟದ ಮೈದಾನವನ್ನು ನೀಡಬೇಕು ಮತ್ತು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನವನ್ನು ನಿರ್ಮಾಣ ಮಾಡಿಕೊಡಬೇಕು. ಅನೇಕ ವಿದ್ಯುತ್ ಕಂಬಗಳು ಹಾಳಾಗಿವೆ. ಕೂಡಲೇ ಕಂಬಗಳನ್ನು ಸರಿಪಡಿಸಿಕೊಡಬೇಕು’ ಎಂದು ಹೇಳಿದರು.

‘ಗ್ರಾಮದಲ್ಲಿ ಸರ್ಕಾರಿ ಭೂಮಿ ಇದ್ದರೆ ಅದನ್ನು ಮೈದಾನ ಮಾಡಿ ಹಾಗೂ ವಿದ್ಯುತ್ ಕಂಬಗಳನ್ನು ನಾಳೆಯೇ ಸರಿಪಡಿಸಿ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಕಾಧಿಕಾರಿ ಪ್ರೇಮ್‍ಕುಮಾರ್ ಹಾಗೂ ಸೆಸ್ಕ್‌ ಅಧಿಕಾರಿಗಳಿಗೆ ಅವರಿಗೆ ಸೂಚನೆ ನೀಡಿದರು.

ನಂತರ ಹೊಸ ಐನೂರ್ ಹುಂಡಿ ಗ್ರಾಮದ ಉಮೇಶ್ ಮಾತನಾಡಿ, ‘ಗ್ರಾಮದ ಮುಖ್ಯ ರಸ್ತೆಯ ಎರಡೂ ಬದಿಯಲ್ಲಿ ಜಮೀನು ಇದೆ. ಆದರೆ ಜಮೀನು ಮಾಲೀಕರು ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ಗ್ರಾಮದ ರಸ್ತೆಯು ಕಿರಿದಾಗಿದ್ದು ಗ್ರಾಮಸ್ಥರಿಗೆ ಸಂಚರಿಸಲು ತೊಂದರೆಯಾಗುತ್ತಿದೆ. ಗ್ರಾಮದಲ್ಲಿ ಸ್ಮಶಾನದ ರಸ್ತೆಯನ್ನು ಸರಿಪಡಿಸಿ. ಇದರಿಂದ ಅನೇಕ ಅಪಘಾತಗಳು ಸಹ ಸಂಭವಿಸಿದೆ. ಪಿಡಿಓ ಅವರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನಮ್ಮ ಗ್ರಾಮದವರು ಪಡಿತರ ಅಕ್ಕಿ, ಬೇಳೆಯನ್ನು ಪಡೆಯಬೇಕಾದರೆ ಹೊಸ ಮಾಲಂಗಿ ಗ್ರಾಮಕ್ಕೆ ಬರಬೇಕು ನಮ್ಮ ಗ್ರಾಮದಲ್ಲೇ ಪಡಿತರ ಅಂಗಡಿಯನ್ನು ತೆರೆದು ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಿ’ ಎಂದರು.

‘ರಸ್ತೆಯನ್ನು ಒತ್ತುವರಿ ಮಾಡಿಕೊಂಡವರಿಗೆ ನೋಟಿಸ್‌ ನೀಡಿ, ಇಲ್ಲವಾದರೆ ಕ್ರಿಮಿನಲ್ ಕೇಸ್ ದಾಖಲು ಮಾಡಿ. ಈ ಗ್ರಾಮದ ರಸ್ತೆ, ಪಡಿತರ ಅಂಗಡಿ ಶೀಘ್ರವೇ ತೆರೆಯಬೇಕು’ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಕುಂದು ಕೊರತೆಗಳನ್ನು ಆಲಿಸಿದ ನಂತರ ಜಿಲ್ಲಾಧಿಕಾರಿ ಅವರು ಗ್ರಾಮದಲ್ಲಿ ಸುತ್ತಾಡಿ ಪರಿಶೀಲನೆ ನಡೆಸಿದರು.ಸಂಜೆ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಜಿಲ್ಲಾ ಪಂಚಾಯಿತಿ ಸದಸ್ಯ ಮುಳ್ಳೂರು ನಾಗರಾಜ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸುರೇಶ್‌, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿದ್ಯಾಶ್ರೀ, ಉಪಾಧ್ಯಕ್ಷ ಶಿವಸ್ವಾಮಿ, ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿ ದೇವಿ, ಉಪವಿಭಾಗಾಧಿಕಾರಿ ಡಾ.ಗಿರೀಶ್ ದೀಲಿಪ್ ಬದೋಲೆ, ತಹಶೀಲ್ದಾರ್ ಕೆ.ಕುನಾಲ್, ಡಿವೈಎಸ್ಪಿ ನಾಗರಾಜು ಸೇರಿದಂತೆ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು.

ಅಧಿಕಾರಿಗಳಿಗೆ ತರಾಟೆ

ಗ್ರಾಮಸ್ಥರು ನಿರಂತರವಾಘಿ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸುತ್ತಿದ್ದಂತೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಂಡ ಜಿಲ್ಲಾಧಿಕಾರಿ ಅವರು, ‘ಗ್ರಾಮದಲ್ಲಿ ಅನೇಕಅನೇಕ ಸಮಸ್ಯೆಗಳಿದ್ದು, ಸಮಸ್ಯೆಗಳನ್ನು ಸರಿಯಾಗಿ ಬಗೆಹರಿಸಿಲ್ಲ. ಜಿಲ್ಲಾಧಿಕಾರಿಗಳ ಎದುರೇ ಸಮಸ್ಯೆಗಳ ಸರಮಾಲೆಯೇ ಬರುತ್ತಿದೆ. ಯಾರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ತಾಲ್ಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸ್ಥಳೀಯ ಅಧಿಕಾರಿಗಳ ಕಾರ್ಯವೈಖರಿಗೂ ಅತೃಪ್ತಿ ವ್ಯಕ್ತಪಡಿಸಿದರು.

ಸೌಲಭ್ಯಗಳ ವಿತರಣೆ

ಸಂ‌ಜೆ ಹೊತ್ತಿಗೆ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಎನ್‌.ಮಹೇಶ್‌ ಅವರು ಕಾರ್ಯಕ್ರಮದಲ್ಲಿ ಭಾಗಿಯಾದರು.

ಇದೇ ಸಂದರ್ಭದಲ್ಲಿ ಫಲಾನುಭವಿಗಳೀಗೆ ಆರೋಗ್ಯ ಕರ್ನಾಟಕ ಕಾರ್ಡ್‌, ಪಿಂಚಣಿ ಮಂಜೂರಾತಿ ಪತ್ರ, ಭಾಗ್ಯ ಲಕ್ಷ್ಮಿ ಬಾಂಡ್, ಅಂಗವಿಕಲರಿಗೆ ವಿವಿಧ ಸಲಕರಣೆಗಳು, ಗುರುತಿನ ಚೀಟಿ, ಪೋಡಿ ಮುಕ್ತ ಅಭಿಯಾನದ ಅಡಿ ಆರ್‌ಟಿಸಿ ನಕ್ಷೆ ಸೇರಿದಂತೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT