ಗುರುವಾರ , ನವೆಂಬರ್ 14, 2019
23 °C
ವಿಮೂಲ್ ಜೊತೆ ಒಡಂಬಡಿಕೆ; ಶಾಸಕ ಶಿವಾನಂದ ಪಾಟೀಲ ಅಭಿಮತ

ಉತ್ಪಾದನಾ ಒಕ್ಕೂಟಗಳ ಬಲವರ್ಧನೆ

Published:
Updated:
Prajavani

ವಿಜಯಪುರ: ‘ಜಿಲ್ಲೆಯ ಆಯ್ದ ಹಾಲು ಉತ್ಪಾದನಾ ಸಂಘಗಳಿಗೆ ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ್ ವತಿಯಿಂದ ಉತ್ತೇಜನ ಹಾಗೂ ಪ್ರೋತ್ಸಾಹ ನೀಡಲು ವಿಜಯಪುರ-ಬಾಗಲಕೋಟೆ ಹಾಲು ಉತ್ಪಾದಕರ ಒಕ್ಕೂಟದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ’ ಎಂದು ಶಾಸಕ ಹಾಗೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಹೇಳಿದರು.

ನಗರದ ವೀರಶೈವ ಲಿಂಗಾಯತ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ವಿಜಯಪುರ-ಬಾಗಲಕೋಟೆ ಹಾಲು ಉತ್ಪಾದಕರ ಸಹಕಾರಿ ಒಕ್ಕೂಟದ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲೆಯ ಹಾಲು ಉತ್ಪಾದಕ ಸಂಘಗಳ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಹಾಲು ಉತ್ಪಾದಕ ಸೊಸೈಟಿಗಳು ಆರ್ಥಿಕವಾಗಿ ಸಬಲವಾಗಬೇಕು ಎಂಬುದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಆಶಯವಾಗಿದೆ. ಈ ಕಾರಣಕ್ಕಾಗಿಯೇ ಶತಮಾನೋತ್ಸವ ಸಂದರ್ಭದಲ್ಲಿ ಹಾಲು ಉತ್ಪಾದನಾ ಸಂಘಗಳಿಗೆ ಎಲ್ಲ ರೀತಿಯಿಂದಲೂ ಶಕ್ತಿ ತುಂಬಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಭರವಸೆ ನೀಡಿದರು.

‘ಹೈನುಗಾರಿಕೆ ರೈತರನ್ನು ಯಾವತ್ತೂ ಕೈ ಬಿಡುವುದಿಲ್ಲ. ರಾಜ್ಯ ಸರ್ಕಾರ ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನವನ್ನು ನಿಲ್ಲಿಸಲು ಸಾಧ್ಯವಿಲ್ಲ. ಈ ಪ್ರೋತ್ಸಾಹ ಧನ ಇನ್ನೂ ಹೆಚ್ಚಾಗುತ್ತದೆಯೇ ಹೊರತು ಕಡಿಮೆ ಆಗುವುದಿಲ್ಲ’ ಎಂದು ಹೇಳಿದರು.

‘ಅನೇಕ ಸಂಸ್ಥೆಗಳು ಜನ್ಮತಾಳಿದ ಕೆಲವೇ ದಿನಗಳಲ್ಲಿ ಅಸ್ತಿತ್ವ ಕಳೆದು ಕೊಳ್ಳುತ್ತವೆ. ಇನ್ನು ಕೆಲವು ನಿಂದನೆ, ಸರ್ಕಾರದ ಧೋರಣೆಗಳನ್ನು ಎದುರಿಸದೇ ಅಸ್ತಿತ್ವ ಕಳೆದುಕೊಳ್ಳುತ್ತವೆ. ಈ ರೀತಿ ಯಾವುದೇ ಸಂಘ-ಸಂಸ್ಥೆಗಳು ಅಸ್ತಿತ್ವ ಕಳೆದುಕೊಳ್ಳಬಾರದು ಎಂಬ ಸಹಕಾರ ನಿಲುವನ್ನೇ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ತನ್ನ ಉಸಿರಾಗಿಸಿಕೊಂಡಿದೆ’ ಎಂದರು.

ಕೆಎಂಎಫ್ ರಾಜ್ಯ ಒಕ್ಕೂಟದ ನಿರ್ದೇಶಕ ಶ್ರೀಶೈಲಗೌಡ ಪಾಟೀಲ ನಿಡೋಣಿ, ವಿಜಯಪುರ-ಬಾಗಲ ಕೋಟೆ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸಂಭಾಜಿ ಮಿಸಾಳೆ, ವಿಮೂಲ್ ವ್ಯವಸ್ಥಾಪಕ ನಿರ್ದೇಶಕ ಅಶೋಕ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗುರುಶಾಂತ ನಿಡೋಣಿ, ತಮ್ಮಣ್ಣ ಹಂಗರಗಿ, ಎಂ.ಜಿ.ಪಾಟೀಲ ಇದ್ದರು.

ಪ್ರತಿಕ್ರಿಯಿಸಿ (+)