ಶನಿವಾರ, ಆಗಸ್ಟ್ 24, 2019
23 °C

ಜೋಳದಗುಡ್ಡೆ: ಮೀನು ಹಿಡಿಯಲು ಹೋದ ಮೂವರು ಯುವಕರ ಸಾವು

Published:
Updated:
Prajavani

ಸೊರಬ: ತಾಲ್ಲೂಕಿನ ಚಂದ್ರಗುತ್ತಿ ಸಮೀಪದ ಜೋಳದಗುಡ್ಡೆ ಗ್ರಾಮದ ಹೊಸಮಠ ಕೆರೆಯಲ್ಲಿ ಭಾನುವಾರ ಮೂವರು ಯುವಕರು ಮೀನು ಹಿಡಿಯಲು ಹೋಗಿ, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಸೊರಬ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿಗಳಾದ ಜೋಳದಗುಡ್ಡೆ ಗ್ರಾಮದ ಕಾರ್ತಿಕ್ (16), ಶರತ್ (17) ಹಾಗೂ ಅದೇ ಗ್ರಾಮದ ಗಾರೆ ಕೆಲಸ ಮಾಡುವ ಪ್ರದೀಪ್ (19) ಮೃತಪಟ್ಟವರು.

ಯುವಕರು ಭಾನುವಾರ ಬೆಳಿಗ್ಗೆ ಸ್ನೇಹಿತರೊಂದಿಗೆ ಜೋಳದಗುಡ್ಡೆಯ ಹೊಸಮಠ ಕೆರೆಗೆ ಮೀನು ಹಿಡಿಯಲು ತೆರಳಿದ್ದರು. ಮೀನು ಹಿಡಿಯುವ ವೇಳೆ ಈಜು ಬರದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಇವರ ಜತೆಯಿದ್ದ ಮತ್ತೊಬ್ಬ ಸ್ನೇಹಿತ ಅಭಿಷೇಕ್ ನೀರಿಗೆ ಇಳಿಯದೆ ದಡದಲ್ಲಿಯೇ ನಿಂತಿದ್ದು, ಕೆರೆಗಿಳಿದ ಮೂವರೂ ಮುಳುಗುತ್ತಿರುವುದನ್ನು ಕಂಡು ಚೀರಿದಾಗ ಕೆರೆಯ ಸಮೀಪವಿದ್ದ ಗ್ರಾಮಸ್ಥರು ದೌಡಾಯಿಸಿ ಅಲ್ಲಿಗೆ ಬಂದರು. ನೀರಿಗೆ ಇಳಿದು ಅವರನ್ನು ರಕ್ಷಿಸುವಷ್ಟರಲ್ಲಿ ಯುವಕರು ಮೃತಪಟ್ಟಿದ್ದರು.

ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿ ಶವಗಳನ್ನು ನೀರಿನಿಂದ ಹೊರತೆಗೆದಿದ್ದಾರೆ.

Post Comments (+)