ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ನದಿಗೆ ಸೇತುವೆ ನಿರ್ಮಿಸಲು ನಿರ್ಣಯ

ಲಿಂಗಸುಗೂರು: ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ
Last Updated 4 ಜುಲೈ 2018, 17:46 IST
ಅಕ್ಷರ ಗಾತ್ರ

ಲಿಂಗಸುಗೂರು: ತಾಲ್ಲೂಕಿನ ಕೃಷ್ಣಾ ನದಿಯ ನಡುಗಡ್ಡೆ ಪ್ರದೇಶಗಳಾದ ಕಡದರಗಡ್ಡಿ, ಯರಗೋಡಿ, ಯಳಗುಂದಿ ಸೇರಿದಂತೆ ಇತರೆ ನಡುಗಡ್ಡೆ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ಗೋನವಾಟ್ಲ ಕಡದರಗಡ್ಡಿ ಮಧ್ಯದ ಕೃಷ್ಣಾ ನದಿಗೆ ಸೇತುವೆ ನಿರ್ಮಾಣಕ್ಕೆ ಸರ್ಕಾರ ಮುಂದಾಗುವಂತೆ ಸರ್ವಸದಸ್ಯರ ಒಪ್ಪಿಗೆ ಮೇರೆಗೆ ಗೊತ್ತುವಳಿ ಸ್ವೀಕರಿಸಲಾಯಿತು. ಯಾವುದೇ ವಿರೋಧ ಮತ್ತು ಆಕ್ಷೇಪಣೆಗಳಿಲ್ಲದೆ ಸದಸ್ಯರು ಒಮ್ಮತದ ನಿರ್ಣಯ ಕೈಗೊಂಡರು.

ಬುಧವಾರ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ ಆರಂಭಗೊಳ್ಳುತ್ತಿದ್ದಂತೆ ಸದಸ್ಯರಾದ ಗವಿಸಿದ್ದಪ್ಪ ಹೆಸರೂರು, ಲಿಂಗರಾಜ ಹಟ್ಟಿ, ಬಸಮ್ಮ ಪರಮೇಶಪ್ಪ ಮಾತನಾಡಿ, ‘ಕೃಷ್ಣಾ ನದಿಗೆ ಅಡ್ಡಲಾಗಿ ಗೋನವಾಟ್ಲ ಬಳಿಯೆ ಸೇತುವೆ ನಿರ್ಮಾಣದಿಂದ ಅತ್ಯಂತ ಕಡಿಮೆ ಅಂತರದಲ್ಲಿ ತಾಲ್ಲೂಕು ಕೇಂದ್ರ, ಗ್ರಾಮ ಪಂಚಾಯಿತಿ ಮತ್ತು ನಿತ್ಯ ವ್ಯವಹಾರಕ್ಕೆ ಅನುಕೂಲ ಆಗಲಿದೆ’ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶ್ವೇತಾ ವೆಂಕನಗೌಡ ಪಾಟೀಲ ಮಾತನಾಡಿ, ‘ಹಲವು ವರ್ಷಗಳಿಂದ ಆ ಭಾಗದ ಜನರು ಹೋರಾಟ ನಡೆಸಿದ್ದಾರೆ. ಜನಸಂಖ್ಯೆ, ಅದರಿಂದಾಗುವ ಲಾಭ, ನಷ್ಟ ನೋಡದೆ, ಮಾನವೀಯರ ದೃಷ್ಠಿಯಿಂದ ಗೋನವಾಟ್ಲ ಕಡದರಗಡ್ಡಿ ಮಧ್ಯೆ ಸೇತುವೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಲಿ ತಾಲ್ಲೂಕು ಪಂಚಾಯಿತಿ ಆಡಳಿತ ಮಂಡಳಿ ಸಂಪೂರ್ಣ ಸಹಕಾರ ನೀಡಲಿದೆ’ ಎಂದು ಘೋಷಿಸಿದರು.

ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ ಆರಂಭಗೊಂಡು ಮುಕ್ತಾಯ ಹಂತದವರೆಗೆ ಕೆಲ ಅಧಿಕಾರಿಗಳು ಮೊಬೈಲ್‌ ಫೋನ್‌ನಲ್ಲಿ ತಲ್ಲೀನರಾಗಿರುವುದು ಕಂಡು ಬಂತು. ಅಧಿಕಾರಿಗಳ ಮೊಬೈಲ್‌ ಬಳಕೆ ಮಾಡುತ್ತಿರುವುದನ್ನು ಗಮನಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪುಷ್ಪಾ ಎಂ. ಕಮ್ಮಾರ ಎಚ್ಚರಿಕೆ ನೀಡಿದರು.

‘ಬಹುತೇಕ ಇಲಾಖೆ ಅಧಿಕಾರಿಗಳು ಮೊಬೈಲ್‌ ಸ್ವಿಚ್ಡ್‌ ಆಫ್‌ ಇಡುತ್ತಾರೆ. ಇನ್ನೂ ಕೆಲವರು ಸ್ವೀಕರಿಸುವುದಿಲ್ಲ. ಕೆಲವರು ಸ್ವೀಕರಿಸಿದರೂ ಕೂಡ ಸದಸ್ಯರಿಗೆ ಗೌರವ ಕೊಟ್ಟು ಮಾತನಾಡುವುದಿಲ್ಲ. ಅಂಥವರು ತಾಲ್ಲೂಕು ಅಭಿವೃದ್ಧಿಗೆ ಮಾರಕವಾಗಿದ್ದಾರೆ. ಸದಸ್ಯರ ಮೇಲೆ ರೇಗಾಡುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು’ ಎಂದು ಸದಸ್ಯ ಶಿವರಾಜ ನಾಯಕ ಆಗ್ರಹಿಸಿದರು.

ಜೆಸ್ಕಾಂ, ಜಿಲ್ಲಾ ಪಂಚಾಯತ್‌ ಎಂಜಿನಿಯರಿಂಗ್‌, ಭೂ ಸೇನಾ ನಿಗಮ ಸೇರಿದಂತೆ ಕೆಲ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಮೊಬೈಲ್‌ ಫೋನ್‌ನಲ್ಲಿ ಮಾಹಿತಿ ನೀಡುತ್ತಿಲ್ಲ. ಸದಸ್ಯರಿಗೆ ಅಗೌರವ ತೋರಿದ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುವ ಜೊತೆಗೆ ಎಲ್ಲ ಅಧಿಕಾರಿಗಳು ಸ್ಪಂದಿಸಲು ನಿರ್ದೇಶನ ನೀಡುವಂತೆ ಸದಸ್ಯರಾದ ಹಟ್ಟಿ ಲಿಂಗರಾಜು, ತಿಮ್ಮನಗೌಡ, ಗವಿಸಿದ್ದಪ್ಪ ಹೆಸರೂರು, ಯಂಕೋಬ ಸರ್ಜಾಪುರ ಧ್ವನಿಗೂಡಿಸಿದರು.

ಚುನಾವಣಾ ವೇಳೆ ತಾಲ್ಲೂಕಿನ ಬಹುತೇಕ ಮತಗಟ್ಟೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಆಯೋಗ ಸೂಚಿಸಿದ ಹೆಸರಿನಲ್ಲಿ ಅಧಿಕಾರಿಗಳು ಹಳೆಯ ಶೌಚಾಲಯಗಳಿಗೆ ಸುಣ್ಣ, ಬಣ್ಣ ಬಳಿದು ಹಣ ದುರ್ಬಳಕೆ ಮಾಡಿದ ಉದಾಹರಣೆಗಳಿವೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಚುನಾವಣಾ ಅಧಿಕಾರಿಗಳು ಈ ಪ್ರಕರಣದಲ್ಲಿ ಶ್ಯಾಮೀಲಾಗಿದ್ದು ತನಿಖೆ ನಡೆಸುವಂತೆ ಸದಸ್ಯ ಗವಿಸಿದ್ದಪ್ಪ ಹೆಸರೂರು ಒತ್ತಾಯಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಶಿಥಿಲಗೊಂಡ ವಿದ್ಯುತ್‌ ಕಂಬಗಳ ಬದಲಾವಣೆ ಮಾಡಿಲ್ಲ, ಶುದ್ಧ ಕುಡಿವ ನೀರಿನ ಘಟಕಗಳು ಸ್ಥಗಿತಗೊಂಡಿದ್ದು ದುರಸ್ತಿ ಹೆಸರಿನಲ್ಲಿ ಬಳಕೆ ಆಗುತ್ತಿಲ್ಲ. ರಸ್ತೆಗಳಲ್ಲಿ ಅಕ್ರಮ ಕೇಬಲ್‌ ಹಾಕುತ್ತಿರುವ ಹಾವಳಿಯಿಂದ ಗ್ರಾಮೀಣ ರಸ್ತೆಗಳು ಹಾಳಾಗಿವೆ. ರೈತರಿಗೆ ರೈತ ಸಂಪರ್ಕ ಕೇಂದ್ರಗಳು ಅನುಕೂಲ ನೀಡುತ್ತಿಲ್ಲ ವಿಷಯದ ಕುರಿತು ಚರ್ಚೆಯಾಯಿತು.

‘ಮಸ್ಕಿ ತಾಲ್ಲೂಕಿನ ನಾಗರಬೆಂಚಿ ಗ್ರಾಮದ ಕುಡಿವ ನೀರಿನ ಕೊಳವೆಬಾವಿಯೊಂದರಲ್ಲಿ ಹಸಿರು ಬಣ್ಣ ಮಿಶ್ರಿತ ಕೊಳಚೆ ನೀರು ಬರುತ್ತಿರುವ ಬಗ್ಗೆ ಗ್ರಾಮಸ್ಥರ ದೂರು ನೀಡಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಭೇಟಿ ನೀಡಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಚಿಕ್ಕಯರದಿಹಾಳ ಗ್ರಾಮಕ್ಕೆ ಐದನಾಳ ಶುದ್ಧ ಕುಡಿವ ನೀರಿನ ಘಟಕ ಸ್ಥಳಾಂತರಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶ್ವೇತಾ ವೆಂಕನಗೌಡ ಸೂಚಿಸಿದರು.

ಉಪಾಧ್ಯಕ್ಷೆ ಯಲ್ಲಮ್ಮ ಗದ್ದೆಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಪೂಜಾರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪುಷ್ಪಾ ಎಂ. ಕಮ್ಮಾರ ಸೇರಿದಂತೆ ತಾಲ್ಲೂಕು ಪಂಚಾಯಿತಿ ಸದಸ್ಯರು, ವಿವಿಧ ಇಲಾಖೆ ಮುಖ್ಯಸ್ಥರು ಉಪಸ್ಥಿತರಿದ್ದರು.

ಗ್ರಾಮಸ್ಥರು ಎದುರಿಸುತ್ತಿರುವ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು. ಆಯಾ ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿ, ಅವುಗಳನ್ನು ಪರಿಹರಿಸಲು ಮುಂದಾಗಬೇಕು.
ಶ್ವೇತಾ ವೆಂಕನಗೌಡ ಪಾಟೀಲ, ಅಧ್ಯಕ್ಷೆ, ತಾಲ್ಲೂಕು ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT