ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಒತ್ತಾಯ

ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಮಾಲೀಕರ ಸೇಡಿನ ಕ್ರಮದ ಆರೋಪ
Last Updated 18 ಡಿಸೆಂಬರ್ 2018, 13:06 IST
ಅಕ್ಷರ ಗಾತ್ರ

ರಾಮನಗರ: ಬಿಡದಿ ಕೈಗಾರಿಕಾ ಪ್ರದೇಶದ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೆಂಟರ್‌ ಆಫ್ ಇಂಡಿಯನ್‌ ಟ್ರೇಡ್‌ ಯೂನಿಯನ್ (ಸಿಐಟಿಯು)ನ ಪದಾಧಿಕಾರಿಗಳು ಇಲ್ಲಿನ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕ ಸಂಘಗಳನ್ನು ಮಾನ್ಯ ಮಾಡದ ಮಾಲೀಕರು, ಸಂಘ ರಚಿಸಿದ ಕಾರಣಕ್ಕಾಗಿ ಕಾರ್ಮಿಕರನ್ನು ಅಮಾನತುಗೊಳಿಸಿ, ವಜಾಗೊಳಿಸುವಂತ ಸೇಡಿನ ಕ್ರಮಗಳನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

‘ಮದರ್‌ಸನ್‌ ಆಟೋಮೋಟಿವ್‌ ಟೆಕ್ನಾಲಜೀಸ್ ಅಂಡ್‌ ಎಂಜಿನಿಯರಿಂಗ್‌, ರಿಕಾರೋ ಇಂಡಿಯಾ ಕಾರ್ಖಾನೆ, ಸರ್‌ಕ್ಯೂಟೆಕ್‌ ಇಂಡಿಯಾ ಕಾರ್ಖಾನೆ, ಎಸ್‌ಪಿಎಂ ಕಾರ್ಖಾನೆ, ವಂಡರ್‌ ಲಾ ಮತ್ತಿತರ ಕಂಪನಿಗಳಲ್ಲಿ ಇಂತಹ ಕ್ರಮಗಳನ್ನು ಕಳೆದ ಹಲವು ವರ್ಷಗಳಿಂದ ಮಾಲೀಕರು ಅನುಸರಿಸುತ್ತಿದ್ದಾರೆ. ಗುತ್ತಿಗೆ ಕಾರ್ಮಿಕರನ್ನು ಬಳಸಿಕೊಂಡು ಕಾಯಂ ಕಾರ್ಮಿಕರನ್ನು ಬಲಿಪಶು ಮಾಡುತ್ತಿದ್ದಾರೆ’ ಎಂದು ಆಪಾದಿಸಿದರು.

ಅಸಂಘಟಿತ ಕಾರ್ಮಿಕರಿಗೆ ಅಂಬೇಡ್ಕರ್ ಸಹಾಯಹಸ್ತ ಸ್ಮಾರ್ಟ್‌ ಕಾರ್ಡ್‌, ಭವಿಷ್ಯ ನಿಧಿ, ಕಲ್ಯಾಣ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕ ಸಂಘಗಳನ್ನು ಮಾನ್ಯ ಮಾಡುವಂತೆ ಶಾಸನ ಹಾಗೂ ಗುತ್ತಿಗೆ ಮತ್ತಿತರ ಕಾಯಂಯೇತರ ಕಾರ್ಮಿಕರನ್ನು ಕಾಯಂಗೊಳಿಸಲು ಶಾಸನ ಅಸಂಘಟಿತ ಕಾರ್ಮಿಕರಿಗೆ ಭವಿಷ್ಯ ನಿಧಿಗಾಗಿ ಶಾಸನಗಳ ಕರಡು ಮಸೂದೆಗಳನ್ನು ಕಾರ್ಮಿಕ ಇಲಾಖೆ ರೂಪಿಸಿದೆ. ಈ ಕರಡು ಮಸೂದೆಗಳನ್ನು ಪರಿಗಣನೆಗೆ ತೆಗೆದುಕೊಂಡು ಶಾಸನಗಳಾಗಿ ಅಂಗೀಕರಿಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಬಿಡದಿ ಕೈಗಾರಿಕಾ ಪ್ರದೇಶ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಹಲವು ಬಾರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಮಾಲೀಕರು, ಕಾರ್ಮಿಕ ಸಂಘ ಮತ್ತು ಕಾರ್ಮಿಕ ಅಧಿಕಾರಿಗಳ ಜಂಟಿ ಸಭೆ ಕರೆಯಬೇಕು ಎಂದು ಮನವಿ ಮಾಡಿದರು.

ಸಿಐಟಿಯುನ ಪದಾಧಿಕಾರಿಗಳಾದ ಕೆ.ಎನ್.ಉಮೇಶ್, ಬಿ.ಎನ್. ಮಂಜುನಾಥ್‌, ಎಂ. ಯೋಗೀಶ್, ಬಿ.ಬಿ. ರಾಘವೇಂದ್ರ, ಎನ್. ಬಿ. ಮಹಾಂತೇಶ್, ಟಿ.ಜೆ. ಥಾಮಸ್, ಶರಣಪ್ಪ ಡೆಂಗಿ, ಕಪನಿಗೌಡ, ಶಿವಶಂಕರ್, ಚಂದ್ರಶೇಖರ್, ಸಂತೋಷ್‌ ಕಟ್ಟಿಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT