ದೇಸಾಯಿಗೆ ಆಡಳಿತ ನಡೆಸುವ ಸ್ವಸಾಮರ್ಥ್ಯವಿಲ್ಲ: ಶಶಿಕಾಂತಗೌಡ ಭೀಮನಗೌಡ ಪಾಟೀಲ

7
’ಸಹಕಾರಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ; ಸರಣಿ ಹಗರಣ ನಡೆಸಿದ್ದಾರೆ’

ದೇಸಾಯಿಗೆ ಆಡಳಿತ ನಡೆಸುವ ಸ್ವಸಾಮರ್ಥ್ಯವಿಲ್ಲ: ಶಶಿಕಾಂತಗೌಡ ಭೀಮನಗೌಡ ಪಾಟೀಲ

Published:
Updated:

ವಿಜಯಪುರ: ‘ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಹಾಲಿ ಅಧ್ಯಕ್ಷ ಕುಮಾರ ಚಂದ್ರಕಾಂತ ದೇಸಾಯಿಗೆ ಆಡಳಿತ ನಡೆಸುವ ಸ್ವಸಾಮರ್ಥ್ಯವಿಲ್ಲ’ ಎಂದು ಕಾರ್ಖಾನೆಯ ಮಾಜಿ ಅಧ್ಯಕ್ಷ ಶಶಿಕಾಂತಗೌಡ ಭೀಮನಗೌಡ ಪಾಟೀಲ (ಶಿರಬೂರ) ದೂರಿದರು.

‘ಬೀಳಗಿಯ ಮಾಜಿ ಶಾಸಕ ಜಿ.ಟಿ.ಪಾಟೀಲ ಸಹೋದರ, ಮನಾಲಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಎಸ್‌.ಟಿ.ಪಾಟೀಲ ಅಣತಿಯಂತೆ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ನಡೆಸಿದರು. ಇದೀಗ ಅವರ ನೇತೃತ್ವದಲ್ಲೇ ಪ್ಯಾನಲ್‌ ರಚಿಸಿಕೊಂಡು ಚುನಾವಣಾ ಅಖಾಡಕ್ಕೆ ಧುಮುಕಿರುವುದು ವಿಷಾದನೀಯ’ ಎಂದು ಭಾನುವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಸಹಕಾರ ತತ್ವದ ಆಶಯಗಳನ್ನೇ ಗಾಳಿಗೆ ತೂರಲಾಗಿದೆ. ಈಗಿನ ಆಡಳಿತ ಮಂಡಳಿ ಸರಣಿ ಹಗರಣ ನಡೆಸಿದೆ. ಮನಾಲಿ ಸಕ್ಕರೆ ಕಾರ್ಖಾನೆಗೆ ನಂದಿ ಕಾರ್ಖಾನೆಯ ವಸ್ತುಗಳು ಹೋಗಿವೆ. ಇದು ಅಕ್ಷಮ್ಯ ಅಪರಾಧ’ ಎಂದು ಶಶಿಕಾಂತ ಹಾಲಿ ಮಂಡಳಿ ವಿರುದ್ಧ ಹರಿಹಾಯ್ದರು.

‘ಹಾಲಿ ಆಡಳಿತ ಮಂಡಳಿಯಲ್ಲಿದ್ದ ನಿರ್ದೇಶಕ ಸುಭಾಸ ಸಾಹುಕಾರ ಸದಸ್ಯತ್ವವನ್ನು ಸಕ್ಕರೆ ಆಯುಕ್ತರು ರದ್ದುಗೊಳಿಸಿದ್ದಾರೆ. ₹ 1.09 ಕೋಟಿ ಮೊತ್ತದ ಸಕ್ಕರೆ ಹಗರಣ ನಡೆದಿದೆ. ನಿರ್ದೇಶಕ ದುಂಡಪ್ಪ ದೇವನಾಳ ಪುತ್ರ ಕಾರ್ಖಾನೆಯ ನೌಕರ. ಅಗತ್ಯವಿಲ್ಲದಿದ್ದರೂ ಹಾಲಿ ನಿರ್ದೇಶಕರು ತಮ್ಮ ಸಂಬಂಧಿಕರನ್ನೇ ನೌಕರರನ್ನಾಗಿ ನೇಮಿಸಿಕೊಳ್ಳುವಲ್ಲಿ ತಮ್ಮ ಪ್ರಭಾವ ಬೀರಿದ್ದಾರೆ’ ಎಂದು ದೂರಿದರು.

‘ಕಾರ್ಖಾನೆ ಪ್ರಸ್ತುತ ₹ 102 ಕೋಟಿ ನಷ್ಟದಲ್ಲಿದೆ. ಇನ್ನೊಂದು ಅವಧಿಗೆ ಕುಮಾರ ದೇಸಾಯಿ ಪ್ಯಾನಲ್‌ ಆಯ್ಕೆಯಾದರೆ, ರೈತರ ಸಕ್ಕರೆ ಕಾರ್ಖಾನೆಗೆ ಬೀಗ ಹಾಕುವ ಪರಿಸ್ಥಿತಿ ಬರಲಿದೆ’ ಎಂದು ಶಶಿಕಾಂತ ಆರೋಪಿಸಿದರು.

ಎಚ್‌.ಆರ್‌.ಬಿರಾದಾರ, ವಿ.ಎಚ್‌.ಬಿದರಿ, ಆರ್‌.ಪಿ.ಕೊಡಬಾಗಿ, ಆರ್‌.ಟಿ.ಕಜ್ಜಿಡೋಣಿ, ಡಾ.ಎಲ್‌.ಎಚ್‌.ಬಿದರಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !