ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತ ವಿರೋಧಿ ಅಲೆ; ನೆಲಕಚ್ಚಿದ ಶಾಸಕರು!

ಬಾಬುರಾವ ಚಿಂಚನಸೂರ್‌, ಡಾ.ಎ.ಬಿ.ಮಾಲಕರಡ್ಡಿ, ರಾಜಾ ವೆಂಕಟಪ್ಪ ನಾಯಕ, ಗುರುಪಾಟೀಲ ಶಿರವಾಳ ಸೋಲು
Last Updated 17 ಮೇ 2018, 7:02 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಆಡಳಿತರೂಢ ಸರ್ಕಾರದ ಕಾಂಗ್ರೆಸ್‌ನ ಮೂವರು, ಬಿಜೆಪಿಯ ಒಬ್ಬರು ಸೇರಿ ನಾಲ್ವರು ಶಾಸಕರು ಈ ಬಾರಿಯ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆಯಿಂದಾಗಿ ಅಧಿಕಾರ ಕಳೆದುಕೊಂಡಿದ್ದಾರೆ.

ಗುರುಮಠಕಲ್‌ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಬಾಬುರಾವ ಚಿಂಚನಸೂರ್, ಯಾದಗಿರಿಯ ಕಾಂಗ್ರೆಸ್‌ ಶಾಸಕ ಡಾ.ಎ.ಬಿ.ಮಾಲಕರಡ್ಡಿ, ಸುರಪುರದ ಕಾಂಗ್ರೆಸ್‌ ಶಾಸಕ ರಾಜಾ ವೆಂಕಟಪ್ಪ ನಾಯಕ ಹಾಗೂ ಶಹಾಪುರದಲ್ಲಿ ಕೆಜೆಪಿಯಿಂದ ಗೆದ್ದು ಬಿಜೆಪಿಗೆ ಪಕ್ಷಾಂತರಗೊಂಡಿದ್ದ ಶಾಸಕ ಗುರುಪಾಟೀಲ ಶಿರವಾಳ ಅವರು ಆಡಳಿತ ವಿರೋಧಿ ಅಲೆಗೆ ಸಿಲುಕಿ ಚುನಾವಣೆಯಲ್ಲಿ ನೆಲಕಚ್ಚಿದ್ದಾರೆ.

ಬಾಬುರಾವ ಚಿಂಚನಸೂರ್: ಕಾಂಗ್ರೆಸ್‌ನ ತಂಗುದಾಣ ಅಂತಲೇ ಗುರುತಿಸುವ ಗುರುಮಠಕಲ್‌ನಲ್ಲಿ ಅಷ್ಟೊಂದು ಶೈಕ್ಷಣಿಕವಾಗಿ, ಆರ್ಥಿಕವಾಗಿ ಬಲಿಷ್ಠವಾಗಿರದ ಕೋಲಿ ಸಮುದಾಯದವರು ಹೆಚ್ಚಿದ್ದಾರೆ. ಆದರೆ, ಈ ಸಮುದಾಯ ಜಾತ್ಯತೀತ ಮನಸ್ಥಿತಿಗೆ ಖ್ಯಾತಿ ಪಡೆದಿದೆ. ಜಮೀನ್ದಾರರರ ಶೋಷಣೆಯಿಂದಾಗಿ ನಲುಗಿರುವ ಈ ಸಮುದಾಯದ ಜನರನ್ನು ನಂಬಿದರೆ ಗೆಲುವು ಖಚಿತ ಎಂಬುದಾಗಿಯೂ ರಾಜಕೀಯ ಅನುಭವಿಗಳು ವ್ಯಾಖ್ಯಾನಿಸುತ್ತಾರೆ.

ಈ ಹಿಂದೆ ಇದೇ ಕೋಲಿ ಸಮುದಾಯ ವಿಠಲ ಹೇರೂರ್, ಗಿರೀಶ್ ಮಟ್ಟಣ್ಣನವರ ಅವರು ಇಲ್ಲಿ ಸ್ಪರ್ಧಿಸಿದ್ದರೂ ಕೋಲಿ ಸಮುದಾಯದ ಮುಖಂಡರು ಜಾತಿ ರಾಜಕಾರಣ ಮಾಡಿರಲಿಲ್ಲ. ತಕ್ಷಣ ಸ್ಪಂದಿಸುವ, ದೌರ್ಜನ್ಯ ತಡೆಗಟ್ಟುವ, ಸೌಲಭ್ಯವನ್ನು ಪ್ರಾಮಾಣಿಕವಾಗಿ ಬಡವರಿಗೆ ತಲುಪಿಸುವ ಜನಪ್ರತಿನಿಧಿಗಳ ಹುಡುಕಾಟ ನಡೆಸುವ ಕೋಲಿ ಸಮಾಜದವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಂಟು ಬಾರಿ ಗೆಲ್ಲಿಸಿ ದೇಶದ ನಾಯಕರನ್ನಾಗಿಸಿದ್ದಾರೆ.

ಕ್ಷೇತ್ರ ಪುನರ್‌ ವಿಂಗಡನೆ ನಂತರ ಖರ್ಗೆಯವರ ನೆರಳಿನಲ್ಲಿ ಗುರುಮಠಕಲ್‌ನಲ್ಲಿ ಅಡಿಯಿಟ್ಟ ಬಾಬುರಾವ ಚಿಂಚನಸೂರ್ ಎರಡು ಬಾರಿ ಅಧಿಕಾರ ನಡೆಸಿದರು. ಈ ಎರಡೂ ಅವಧಿಯಲ್ಲಿ ಕ್ಷೇತ್ರದ ಜನರಿಗೆ ಖರ್ಗೆ ಸಮಾಧಾನ ಹೇಳುತ್ತಾ, ಆಡಳಿತ ವಿರೋಧಿ ಅಲೆಯನ್ನು ಹತ್ತಿಕ್ಕಿ ಬಾಬುರಾವ ಅವರನ್ನು ದಡ ಮುಟ್ಟಿಸಿದ್ದರು ಎನ್ನಲಾಗಿದೆ.

ಈಚೆಗೆ ಯರಗೋಳದಲ್ಲಿ ಜೆಸ್ಕಾಂ ಕಚೇರಿ ಉದ್ಘಾಟನೆ ವೇಳೆ ದೆಹಲಿಯಿಂದ ಹಾರಿ ಬಂದ ಮಲ್ಲಿಕಾರ್ಜುನ ಖರ್ಗೆ, ‘ಬಾಬುರಾವ ನೀನು ಇನ್ನು ಮುಂದೆ ಹುಷಾರಾಗಿರಬೇಕು. ಗುರುಮಠಕಲ್‌ ಜನ ಎಂಥವರು ಎಂದು ನಿನಗೆ 2008ರಲ್ಲೇ ಹೇಳಿದ್ದೇನೆ. ಅದಕ್ಕಾ ನಾ ಎಂಟು ಬಾರಿ ಅಲ್ಲಿ ಕಾಪ್ರ ಮಾಡೀನಿ’ ಎಂದು ಎಚ್ಚರಿಸಿದ್ದರು. ಆ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಬಾಬುರಾವ ಚಿಂಚನಸೂರ್ ಅವರ ಅಸ್ತಿತ್ವ ಅಲುಗಾಡುತ್ತಿರುವುದು ಜನರಿಗೆ ಪರೋಕ್ಷವಾಗಿ ಅರ್ಥವಾಗಿತ್ತು. ಮಲ್ಲಿಕಾರ್ಜುನ ಖರ್ಗೆ ಅವರ ಮಾತನ್ನು ಅವರು ಗಂಭೀರವಾಗಿ ಪರಿಗಣಿಸಿದ್ದರೆ ಚುನಾವಣೆಯಲ್ಲಿ ಸೋಲಾಗುತ್ತಿರಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಡಾ.ಎ.ಬಿ.ಮಾಲಕರಡ್ಡಿ: ಸ್ವಯಂಕೃತ ಅಪರಾಧಕ್ಕೆ ತೆತ್ತ ಬೆಲೆ ಎಂದೇ ಕ್ಷೇತ್ರದಲ್ಲಿ ಮಾಲಕರಡ್ಡಿ ಅವರ ಸೋಲನ್ನು ವಿಶ್ಲೇಷಿಸಲಾಗುತ್ತಿದೆ. ಚುನಾವಣೆ ಪೂರ್ವದಲ್ಲಿ ಗಂಟೆಗೊಂದು ಹೇಳಿಕೆ ನೀಡುವ ಮೂಲಕ ಕ್ಷೇತ್ರದ ಜನರ ಗಮನ ಸೆಳೆದಿದ್ದರು. ನಿವೃತ್ತಿ ಘೋಷಿಸಿಯೂ ಬೆಂಬಲಿಗರ ಒತ್ತಾಯದ ಮೇಲೆ ಕಣದಲ್ಲಿ ಇಳಿದು ಅಚ್ಚರಿ ಮೂಡಿಸಿದ್ದ ಮಾಲಕರಡ್ಡಿ ಜನಸಂಪರ್ಕ ಕಡಿದುಕೊಂಡಿದ್ದೇ ಅವರಿಗೆ ಮುಳುವಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ.

ಸ್ವಪಕ್ಷದ ನಾಯಕರುಗಳ ಮೇಲೆ ಮುನಿಸಿಕೊಂಡಿದ್ದ ಮಾಲಕರಡ್ಡಿ ಕ್ಷೇತ್ರ ಪ್ರವಾಸ ಕೈಬಿಟ್ಟಿದ್ದು ದೊಡ್ಡ ಲೋಪ ಎಂಬುದಾಗಿ ಕಾಂಗ್ರೆಸ್‌ ಮುಖಂಡರೇ ಈಗ ಸಿಂಹಾವಲೋಕನ ನಡೆಸಿದ್ದಾರೆ. ಕ್ಷೇತ್ರದಲ್ಲಿನ ಬಹುಭಾಗ ಹಳ್ಳಿಗಳಲ್ಲಿನ ಜನರಿಗೆ ಈಗಲೂ ಕನಿಷ್ಠ ಮೂಲಸೌಕರ್ಯಗಳು ಇಲ್ಲ. ಅಂತಹವರ ಏಳಿಗೆ ಕಡೆಗಣಿಸಿದ್ದಾರೆ ಎಂಬ ಮತದಾರರ ಅಸಮಾಧಾನ ವ್ಯಾಪಕವಾಗಿದೆ. ಅಚ್ಚರಿ ಎಂದರೆ ವಡಗೇರಾ ತಾಲ್ಲೂಕು ರಚನೆಯಲ್ಲಿ ಮಾಲಕರಡ್ಡಿ ಅವರ ಪಾತ್ರ ಪ್ರಧಾನವಾಗಿದ್ದರೂ, ಅಲ್ಲಿನ ಮತಗಟ್ಟೆಗಳಲ್ಲಿಯೇ ಬಿಜೆಪಿ ಹೆಚ್ಚು ಮತಗಳನ್ನು ಪಡೆದಿದೆ. ಇದು ಶಾಸಕರು ಅನುಸರಿಸಿದ ಆಡಳಿತ ವಿರೋಧಿ ನೀತಿಗೆ ಮತದಾರರು ಕೊಟ್ಟ ಉತ್ತರವಾಗಿದೆ ಎಂದೇ ಅಲ್ಲಿನ ಜನರು ಹೇಳುತ್ತಾರೆ.

ರಾಜಾ ವೆಂಕಟಪ್ಪ ನಾಯಕ: ಸುರಪುರದಲ್ಲಿ ರಾಜಾ ವೆಂಕಟಪ್ಪ ನಾಯಕರ ಅಧಿಕಾರಾವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿಯನ್ನು ಅಲ್ಲಿನ ಜನರು ಈ ಹಿಂದೇ ಆಗಿರುವ ಅಭಿವೃದ್ಧಿಗೆ ಹೋಲಿಕೆ ಮಾಡುತ್ತಿದ್ದಾರೆ.

ಕೌಳಿ ಬೆಳೆಯುವ ರೈತ ವರ್ಗ ಒಂದೆಡೆಯಾದರೆ; ಕೌಳಿ ಬೆಳೆಯುವ ಹೊಲದಲ್ಲಿ ಕೂಲಿ ಮಾಡಿ ಬದುಕುವ ಜನರೂ ಇದ್ದಾರೆ. ಅಂಥವರ ಏಳಿಗೆ ಆಗಿದೆಯೇ? ಎಂದು ಅಲ್ಲಿನ ಯುವಕ ನಾಗೇಂದ್ರ ನಾಯಕ ಪ್ರಶ್ನಿಸುತ್ತಾರೆ. ರಾಜ ಪ್ರಭುತ್ವದ ಛಾಯೆ ಈಗಲೂ ಈ ಕ್ಷೇತ್ರದಲ್ಲಿ ಇದೆ ಎಂದೇ ಅವರು ಕ್ಷೇತ್ರದ ವಸ್ತುಸ್ಥಿತಿಯನ್ನು ನಿಷ್ಠುರ ವಾಗಿ ವಿಶ್ಲೇಷಿಸುತ್ತಾರೆ. ಪ್ರಸಕ್ತ ಚುನಾವಣೆ ಯಲ್ಲಿ ಬಡ ವರ್ಗದ ಜನರಿಗೆ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಆಡಳಿತ ವಿರೋಧಿಯಂತೆ ಕಂಡಿದ್ದಾರೆ.

ಗುರುಪಾಟೀಲ ಶಿರವಾಳ: ಅಭಿವೃದ್ಧಿ ಯೋಜನೆಗಳ ಪಟ್ಟಿ ನೀಡುವ ಬಿಜೆಪಿಯ ಶಾಸಕ ಗುರುಪಾಟೀಲ ಶಿರವಾಳ ತಪ್ಪೆಸಗಿದ್ದು ಎಲ್ಲಿ? ಎಂದು ಫಲಿತಾಂಶದ ನಂತರ ಅವರು ಆತ್ಮವಲೋಕಕ್ಕೆ ನಡೆಸಿದ್ದಾರೆ.

ಕಾಂಗ್ರೆಸ್‌ನಿಂದ ಅಮೀನ್‌ ರೆಡ್ಡಿ ಯಾಳಗಿ ಹೊರಬಂದಾಗ ಕ್ಷೇತ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ಆಡಳಿತ ವಿರೋಧಿ ಅಲೆಯ ಮುಂದೆ ಏನೂ ನಿಲ್ಲದು ಎಂಬ ಮಾತನ್ನು ಇಲ್ಲಿನ ಮತದಾರರು ನಿರೂಪಿಸಿದ್ದಾರೆ. ಆಡಳಿತ ವಿರೋಧಿ ಅಲೆ ಇದೆ ಎಂಬುದಾಗಿ ಪಕ್ಷದ ಮುಖಂಡರು ಸೂಕ್ಷ್ಮವಾಗಿ ತಿಳಿಸಿದ್ದರೂ, ಶಿರವಾಳ ಎಚ್ಚೆತ್ತುಕೊಂಡಿದ್ದರೆ ಹೀನಾಯ ಸೋಲು ಆಗುತ್ತಿರಲಿಲ್ಲ ಎಂದೇ ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.

**
ಚುನಾವಣೆಯಿಂದ ಚುನಾವಣೆಗೆ ಮತದಾರರು ಜಾಗೃತರಾಗುತ್ತಿದ್ದಾರೆ ಎಂಬುದಕ್ಕೆ ಪ್ರಸಕ್ತ ಚುನಾವಣೆಯ ಫಲಿತಾಂಶ ಸಾಕ್ಷಿಯಾಗಿದೆ
ಭಾಸ್ಕರ್‌ ರಾವ್‌ ಮುಡಬೂಳ, ಹಿರಿಯ ವಕೀಲ ಶಹಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT