ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟೆಂಪಲ್’ ವಿನ್ಯಾಸಕ್ಕೆ ಮನಸೋತರು

Last Updated 12 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಸಮಾರಂಭ ಯಾವುದೇ ಇರಲಿ ಅದಕ್ಕೆ ತಕ್ಕಂತೆ ಒಡವೆ–ಆಭರಣಗಳನ್ನು ಧರಿಸುವುದು ಹೆಣ್ಣಿಗೆ ಇಷ್ಟದ ಸಂಗತಿ. ಅದರಲ್ಲೂ ಮದುವೆ, ನಿಶ್ಚಿತಾರ್ಥ, ಪೂಜೆ ಸೇರಿದಂತೆ ಶುಭಕಾರ್ಯಗಳಲ್ಲಿ ರೇಷ್ಮೆ ಸೀರೆಯ ಜತೆಗೆ ಅಂದದ ಒಡವೆಗಳನ್ನು ಧರಿಸುವುದನ್ನು ಆಕೆ ಮರೆಯುವುದಿಲ್ಲ. ಕತ್ತಿಗೆ ಸಣ್ಣ ಎಳೆಯ ಸರ, ಕೆಳಗೆ ಮತ್ತೊಂದು ಉದ್ದನೆಯ ಸರ, ಕಿವಿಗೆ ಜುಮುಕಿ, ಕಾಲಿಗೆ ಗೆಜ್ಜೆ ಹಾಕಿಕೊಂಡರೆ ಮುಗಿಯಿತು ಎನ್ನುವ ಕಾಲವಿತ್ತು. ಈಗ ಅವೆಲ್ಲವನ್ನೂ ಹಿಂದಿಕ್ಕಿರುವ ಶ್ರೇಯಸ್ಸು ಟೆಂಪಲ್ (ದೇವಸ್ಥಾನ) ವಿನ್ಯಾಸದ ಆಭರಣಗಳಿಗೆ ಸಲ್ಲುತ್ತದೆ.

ದೇವಸ್ಥಾನಗಳಲ್ಲಿರುವ ಸುಂದರ ಕೆತ್ತನೆಗಳು, ದೇವರ ಸಣ್ಣಸಣ್ಣ ಮಾದರಿಗಳನ್ನಿಟ್ಟುಕೊಂಡು ವಿನ್ಯಾಸಗೊಂಡಿರುವ ಟೆಂಪಲ್ ಜ್ಯುವೆಲ್ಸ್‌ ಈಗ ಹೆಂಗಳೆಯರ ಮನಗೆದ್ದಿವೆ. ಸಮಾರಂಭ ಯಾವುದೇ ಇರಲಿ ಶ್ರೀಮಂತ ನೋಟಕ್ಕಾಗಿ ಈ ವಿನ್ಯಾಸದ ಆಭರಣಗಳನ್ನು ಧರಿಸುವುದು ಈಗ ಫ್ಯಾಷನ್ ಆಗಿದೆ. ದೊಡ್ಡದೊಡ್ಡ ನಟಿಯರಿಂದ ಹಿಡಿದು ಸಾಮಾನ್ಯ ಮಹಿಳೆಯರ ತನಕ ಈ ವಿನ್ಯಾಸದ ಆಭರಣಗಳಿಗೆ ಮಾರುಹೋಗದವರಿಲ್ಲ. ಎರಡು ಮೂರು ಸರಗಳನ್ನು ಹಾಕಿಕೊಳ್ಳುವ ಬದಲು, ಭಾರಿ ವಿನ್ಯಾಸದ ನೋಡಲು ಆಕರ್ಷಕವೆನಿಸುವ ಟೆಂಪಲ್ ಜ್ಯುವೆಲರಿ ಧರಿಸಿದರೆ ಸುತ್ತಲಿನವರ ಗಮನ ಸೆಳೆಯಬಹುದು.

ಆಭರಣಗಳ ವಿನ್ಯಾಸದ ಇತಿಹಾಸದ ಪರದೆ ಸರಿಸಿದಾಗ ಈ ಟೆಂಪಲ್ ಜ್ಯುವೆಲರಿ 9ನೇ ಶತಮಾನದ ಚೋಳರ ಕಾಲದಲ್ಲಿಯೇ ಜನಪ್ರಿಯವಾಗಿತ್ತು ಎನ್ನುವ ವಿವರಗಳು ದೊರೆಯುತ್ತವೆ. ಆ ಕಾಲದಲ್ಲಿ ಪೂಜಿಸುತ್ತಿದ್ದ ದೇವತೆಗಳು ಮತ್ತು ಇತರ ದೇವರ ವಿಗ್ರಹಗಳನ್ನು ಆಭರಣದಲ್ಲಿ ವಿನ್ಯಾಸಗೊಳಿಸುತ್ತಿದ್ದರಂತೆ. ಟೆಂಪಲ್ ಜ್ಯುವೆಲರಿ ವಿನ್ಯಾಸವನ್ನು ಆಭರಣ ಜಗತ್ತಿಗೆ ಪರಿಚಯಿಸಿದ್ದು ದಕ್ಷಿಣ ಭಾರತವೇ. ದೇವಸ್ಥಾನಗಳು ಹೆಚ್ಚಾಗಿರುವ ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಈ ವಿನ್ಯಾಸದ ಆಭರಣಗಳಿಗೆ ಬಹುಬೇಡಿಕೆ ಇದೆ.

ಚಿನ್ನ, ಬೆಳ್ಳಿ ಮತ್ತು ಅಮೂಲ್ಯವಾದ ಹರಳು–ಮುತ್ತುಗಳನ್ನು ಬಳಸಿ ಟೆಂಪಲ್ ಜ್ಯುವೆಲರಿ ಆಭರಣಗಳನ್ನು ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ಲಕ್ಷ್ಮೀ, ಸರಸ್ವತಿ, ಗಣಪತಿ, ಶ್ರೀಕೃಷ್ಣ ಮತ್ತು ತಿರುಪತಿ ವೆಂಕಟರಮಣ ದೇವರ ಚಿತ್ರಗಳನ್ನು ಅಚ್ಚಿನ ಮಾದರಿಯಲ್ಲಿ ಟೆಂಪಲ್ ಜ್ಯುವೆಲರಿ ವಿನ್ಯಾಸದಲ್ಲಿ ಬಳಸಲಾಗುತ್ತದೆ. ಉದ್ದನೆಯ ಹಾರದಲ್ಲಿ ದೇವರ ಚಿತ್ತಾರದ ದೊಡ್ಡ ಡಾಲರ್ ಇರುತ್ತದೆ. ಹಾರದ ಎಳೆಯಲ್ಲೂ ದೇವರ ಸಣ್ಣ ಸಣ್ಣ ಮಾದರಿಗಳನ್ನು ವಿನ್ಯಾಸ ಮಾಡಲಾಗಿರುತ್ತದೆ. ನೆಕ್ಲೆಸ್‌ಗೂ ಇದೇ ಮಾದರಿಯನ್ನು ಬಳಸುವುದುಂಟು.

ಸರವಷ್ಟೇ ಅಲ್ಲ, ಕಿವಿಯೋಲೆ, ಸೊಂಟದ ಪಟ್ಟಿ ಮತ್ತು ಬಳೆಗಳ ವಿನ್ಯಾಸದಲ್ಲೂ ಟೆಂಪಲ್ ಜ್ಯುವೆಲರಿ ಶೈಲಿ ಇತ್ತೀಚೆಗೆ ಸಾಮಾನ್ಯ. ಪುಟ್ಟ ಲಕ್ಷ್ಮಿ, ಶುಭ ಸೂಚಕದ ಗಿಳಿಗಳು ಜುಮುಕಿಯ ಅಂದವನ್ನು ಹೆಚ್ಚಿಸುತ್ತವೆ. ಕೈಬಳೆಗಳಲ್ಲೂ ಇದೇ ಮಾದರಿಯ ಜತೆಗೆ ಮಾವಿನಕಾಯಿ ವಿನ್ಯಾಸ, ಸಪ್ತ ಮಾತೃಕೆಯರು ಇಲ್ಲವೇ ನಾಗರಹಾವಿನ ವಿನ್ಯಾಸವೂ ಜನಪ್ರಿಯವಾಗಿದೆ. ತೋಳುಬಂದಿ, ಕಾಲುಂಗರದಲ್ಲೂ ಈ ವಿನ್ಯಾಸ ಈಗ ಮೂಡಿಬರುತ್ತಿದೆ.

ನೋಡಲು ಭಾರಿ ತೂಕದಂತೆ ಕಾಣುವ ಈ ಆಭರಣಗಳನ್ನು ಲೈಟ್ ವೇಟ್ ಮತ್ತು ಹೆವಿಯಾಗಿಯೂ ತಯಾರಿಸಬಹುದು. ಆದರೆ, ಧರಿಸಲು ತೂಕವಾಗುತ್ತದೆ ಎಂಬ ಕಾರಣಕ್ಕಾಗಿ ಬಹುತೇಕರು ಲೈಟ್‌ವೇಟ್ ಟೆಂಪಲ್ ಜ್ಯುವೆಲರಿ ಆಭರಣಗಳನ್ನೇ ಬಳಸುತ್ತಾರೆ ಅನ್ನುತ್ತಾರೆ ಆಭರಣ ವಿನ್ಯಾಸಕರು.

ಹಿಂದೆ ನೃತ್ಯ ಕಲಾವಿದರಷ್ಟೇ ಈ ವಿನ್ಯಾಸದ ಆಭರಣಗಳನ್ನು ಹೆಚ್ಚಾಗಿ ಬಳಸುತ್ತಿದ್ದರು. ಆದರೆ ಇತ್ತೀಚೆಗೆ ಸಾಮಾನ್ಯ ಮಹಿಳೆಯರೂ ಈ ವಿನ್ಯಾಸಕ್ಕೆ ಮಾರುಹೋಗಿದ್ದಾರೆ. ಮದುವೆ, ನಿಶ್ಚಿತಾರ್ಥ, ಮಗುವಿನ ನಾಮಕರಣ ಸೇರಿದಂತೆ ಮತ್ತಿತರ ಶುಭ ಸಮಾರಂಭಗಳಲ್ಲಿ ಟೆಂಪಲ್ ಜ್ಯುವೆಲರಿ ಧರಿಸುವುದು ಪ್ರತಿಷ್ಠೆಯ ಸಂಗತಿಯಾಗಿದೆ. ಈ ವಿನ್ಯಾಸದ ಒಂದೇ ಒಂದು ಸರ ಧರಿಸಿದವರು ನಾಲ್ಕು ಜನರಲ್ಲಿ ಎದ್ದು ಕಾಣುತ್ತಾರೆ. ಅದುವೇ ಈ ಆಭರಣದ ವಿಶೇಷ.

**

ಎಲ್ಲೆಡೆ ಸಿಗುವುದಿಲ್ಲ

ಟೆಂಪಲ್ ಜ್ಯುವೆಲ್ಲರಿಯ ವಿನ್ಯಾಸ ಎಲ್ಲರಿಗೂ ಸಾಧ್ಯವಿಲ್ಲ. ಈ ಶೈಲಿಯ ಆಭರಣ ರೂಪಿಸುವ ಕುಶಲಕರ್ಮಿಗಳ ಸಂಖ್ಯೆಯೂ ಕಡಿಮೆ. ಎಲ್ಲೆಡೆ ಇಂಥ ಆಭರಣಗಳು ಸಿಗುವುದಿಲ್ಲ. ಕೆಲ ಆಭರಣ ಮಳಿಗೆಗಳವರು ಆಭರಣಗಳ ಚಿತ್ರ ತೋರಿಸಿ ಕುಶಲಕರ್ಮಿಗಳಿಂದ ಒಡವೆಗಳನ್ನು ಮಾಡಿಸುತ್ತಿದ್ದಾರೆ. ನಾವು ಮೈಸೂರು ಮಹಾರಾಜರ ವಂಶಸ್ಥರಿಗೆ ಆಭರಣಗಳನ್ನು ತಯಾರಿಸಿಕೊಡುತ್ತಿದ್ದ ಕುಶಲಕರ್ಮಿಗಳ ನೆರವಿನಿಂದ ಟೆಂಪಲ್ ಶೈಲಿಯ ಆಭರಣಗಳನ್ನು ಮಾಡಿಸುತ್ತಿದ್ದೇವೆ.

–ಗೌತಮ್‌ಚಂದ್, ನವರತನ್ ಜ್ಯುವೆಲರ್ಸ ಮಾಲೀಕ

**

‘ಟೆಂಪಲ್ ಜ್ಯುವೆಲರಿ ಈಗ ಟ್ರೆಂಡ್ ಆಗಿದೆ. ರೇಷ್ಮೆಸೀರೆ ಮತ್ತು ಕಾಟನ್ ಸೀರೆಗಳಿಗೆ ಈ ವಿನ್ಯಾಸದ ಆಭರಣಗಳು ತುಂಬಾ ಚೆನ್ನಾಗಿ ಒಪ್ಪುತ್ತವೆ. ದೇವರ ವಿಗ್ರಹ, ಗೋಪುರ ವಿನ್ಯಾಸದ ಆಭರಣಗಳು ನೋಡಲು ಆಕರ್ಷಕವೆನಿಸುತ್ತವೆ.

–ಸುಮಾ ರೆಡ್ಡಿ, ಸ್ಟೈಲಿಸ್ಟ್‌, ಫ್ಯಾಷನ್ ಡಿಸೈನರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT