ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರ: ಮುನಿಯಪ್ಪ

ಅರಸು ಜಯಂತಿಯಲ್ಲಿ ಸಂಸದ ಬಣ್ಣನೆ: ಮೌನಕ್ರಾಂತಿ ಮೂಲಕ ಬದಲಾವಣೆ
Last Updated 31 ಆಗಸ್ಟ್ 2018, 13:57 IST
ಅಕ್ಷರ ಗಾತ್ರ

ಕೋಲಾರ: ‘ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರು ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಕಲ್ಪಿಸಿದ ಸಾಮಾಜಿಕ ಹರಿಕಾರರು’ ಎಂದು ಸಂಸದ ಕೆ.ಎಚ್.ಮುನಿಯಪ್ಪ ಬಣ್ಣಿಸಿದರು.

ಜಿಲ್ಲಾಡಳಿತವು ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ದೇವರಾಜ ಅರಸು ಜಯಂತಿ ಉದ್ಘಾಟಿಸಿ ಮಾತನಾಡಿ, ‘ಸರ್ವರಿಗೂ ಸಮಬಾಳು ಮತ್ತು ಸರ್ವರಿಗೂ ಸಮಪಾಲು ಕಲ್ಪಿಸಲು ಅರಸು ಸಾಕಷ್ಟು ಶ್ರಮಿಸಿದರು. ಅವರು ಅನುಷ್ಠಾನಗೊಳಿಸಿದ ಯೋಜನೆಗಳು ಸಮಾಜಕ್ಕೆ ದಾರಿದೀಪ’ ಎಂದು ಅಭಿಪ್ರಾಯಪಟ್ಟರು.

'ಈ ಹಿಂದೆ ಬಡವರು ಬೆಳೆದ ಬೆಳೆಯನ್ನು ಶ್ರೀಮಂತರು ದೋಚಿಕೊಂಡು ಹೋಗುತ್ತಿದ್ದರು. ಇದನ್ನು ಸಹಿಸದ ಅರಸು ಉಳುವವನಿಗೆ ಭೂಮಿ ಯೋಜನೆ ಜಾರಿಗೊಳಿಸಿದರು. ಅವರ ಸೇವೆಯನ್ನು ರೈತರು ಎಂದಿಗೂ ಮರೆಯಬಾರದು. ಹಿಂದುಳಿದ ವರ್ಗಗಳ ಶೈಕ್ಷಣಿಕ ಅಭಿವೃದ್ಧಿಗೆ ರಾಜ್ಯದಲ್ಲಿ ವಿದ್ಯಾರ್ಥಿನಿಲಯ ಸ್ಥಾಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದು ಶ್ಲಾಘಿಸಿದರು.

‘ಅರಸು ಅವರು ಜೀತದಾಳು ಹಾಗೂ ಮಲಹೊರುವ ಪದ್ಧತಿ ನಿಷೇಧಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ಅರ್ಥ ಕಲ್ಪಿಸಿದರು. ಅವರು ಎಲ್ಲಾ ಬಡವರಿಗೂ ವಸತಿ ಸೌಲಭ್ಯ, ಶಿಕ್ಷಣದಲ್ಲಿ ಸಮಾನತೆ ಕಲ್ಪಿಸುವ ಮೂಲಕ ಸಮಾಜಮುಖಿಯಾಗಿ ಕೆಲಸ ಮಾಡಿದರು. ಜನಸಂಖ್ಯೆ ಅಧಾರದಲ್ಲಿ ಮೀಸಲಾತಿ ಕಲ್ಪಿಸಿ ಸಹಾಯಧನದ ನೆರವು ನೀಡಿದರು. ಮೌನಕ್ರಾಂತಿ ಮೂಲಕ ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಿದರು’ ಎಂದು ಸ್ಮರಿಸಿದರು.

ಹೊಸ ಅಧ್ಯಾಯ: ‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅರಸು ಅವರಂತೆಯೇ ಹಿಂದುಳಿದ ವರ್ಗಗಳ, ಪರಿಶಿಷ್ಟರ ಹಾಗೂ ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿ ಹಣ ಖರ್ಚಾಗದೆ ಸರ್ಕಾರಕ್ಕೆ ವಾಪಸ್‌ ಹೋಗದಂತೆ ತಡೆದು ಅಭಿವೃದ್ಧಿ ಕೆಲಸಕ್ಕೆ ಬಳಸಿಕೊಳ್ಳಲು ಹೊಸ ಕಾನೂನು ಜಾರಿಗೊಳಿಸಿದರು. ಬಜೆಟ್‌ನಲ್ಲಿ ₹ 27 ಸಾವಿರ ಕೋಟಿ ಮೀಸಲಿಟ್ಟು ಹೊಸ ಅಧ್ಯಾಯ ಆರಂಭಿಸಿದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಕಾಂಗ್ರೆಸ್‌ ಸರ್ಕಾರದ ಆಡಳಿತಾವಧಿಯಲ್ಲಿ ಸಿದ್ದರಾಮಯ್ಯ ಅವರು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಆರಂಭಿಸಿ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಪರಿಶಿಷ್ಟರ ಜತೆಗೆ ಶೇ 25ರಷ್ಟು ಮುಂದುವರಿದ ವರ್ಗಗಳ ಬಡವರಿಗೂ ಶಿಕ್ಷಣದ ಅವಕಾಶ ಕಲ್ಪಿಸುವ ಮೂಲಕ ಎಲ್ಲಾ ವರ್ಗಗಳಿಗೆ ಉನ್ನತ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ’ ಎಂದು ಗುಣಗಾನ ಮಾಡಿದರು.

ಉದಾತ್ತ ಚಿಂತನೆ: ‘ಅರಸು ಅವರು ಅಸಮಾನತೆ ತೊಡೆದು ಹಾಕಲು ಹೆಚ್ಚು ಶ್ರಮ ವಹಿಸಿ ಅಹಿಂದ ವರ್ಗಗಳಿಗೆ ಹಲವು ಪ್ರಗತಿಪರ ಯೋಜನೆಗಳನ್ನು ಜಾರಿಗೊಳಿಸಿದರು. ಅವರ ಯೋಜನೆಗಳು ಇಂದಿಗೂ ಮುಂದುವರಿಯುತ್ತಿವೆ. ಅವರ ಉದಾತ್ತ ಚಿಂತನೆ ಎಲ್ಲರಿಗೂ ಆದರ್ಶವಾಗಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಕಿವಿಮಾತು ಹೇಳಿದರು.

‘ಜಿಲ್ಲೆಯಲ್ಲಿ 59 ವಸತಿನಿಲಯಗಳಿದ್ದು, 4,500 ವಿದ್ಯಾರ್ಥಿಗಳ ದಾಖಲಾತಿಗೆ ಅವಕಾಶವಿದೆ. ಆದರೆ, 3,800 ವಿದ್ಯಾರ್ಥಿಗಳು ಮಾತ್ರ ದಾಖಲಾಗಿದ್ದಾರೆ. ವಿದ್ಯಾಸಿರಿ ಯೋಜನೆಯಡಿ ಅರ್ಹ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ತಲಾ ₹ 1,500 ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಸರ್ಕಾರದ ಸೌಲಭ್ಯಗಳನ್ನು ಎಲ್ಲಾ ವರ್ಗದವರು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪಲ್ಲಕ್ಕಿ ಮೆರವಣಿಗೆ: ಹಿಂದುಳಿದ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಅರಸು ಅವರ ಭಾವಚಿತ್ರಗಳ ಪಲ್ಲಕ್ಕಿ ಮೆರವಣಿಗೆ ನಡೆಸಲಾಯಿತು.

ಜಿಲ್ಲಾ ಪಂಚಾಯಿ ಅಧ್ಯಕ್ಷೆ ಗೀತಮ್ಮ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಸ್‌.ಲತಾಕುಮಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾದಿಕಾರಿ ರೋಹಿಣಿ ಕಟೋಚ್ ಸೆಪಟ್‌, ನಗರಸಭೆ ಸದಸ್ಯರಾದ ಪ್ರಸಾದ್‌ಬಾಬು, ರೌತ್ ಶಂಕರಪ್ಪ, ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಪಾಲ್ಗೊಂಡಿದ್ದರು.

* ₹ 9 ಕೋಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿಕೆ
* ₹ 8 ಕೋಟಿ ಸಮುದಾಯ ಭವನಗಳಿಗೆ ಬಿಡುಗಡೆ
* ₹ 3.50 ಲಕ್ಷ ಕೊಳವೆ ಬಾವಿಗೆ ಆರ್ಥಿಕ ನೆರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT