ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡದಿ: ದೇವೇಗೌಡರ 6.9 ಅಡಿ ಎತ್ತರದ ಪ್ರತಿಮೆ ಸಿದ್ಧ

ಇದೇ 24ರಂದು ಚನ್ನಪಟ್ಟಣ–ಮಳವಳ್ಳಿ ಗಡಿಭಾಗದಲ್ಲಿ ಪ್ರತಿಷ್ಠಾಪನೆ
Last Updated 9 ನವೆಂಬರ್ 2018, 15:44 IST
ಅಕ್ಷರ ಗಾತ್ರ

ಬಿಡದಿ: ಇಲ್ಲಿನ ಕೇತಗಾನಹಳ್ಳಿ ರಸ್ತೆಯಲ್ಲಿರುವ ಚಂದ್ರಿಕಾ ಲೋಹ ಶಿಲ್ಪಕಲಾ ಕೇಂದ್ರ ಹಾಗೂ ಜಿ.ಎಸ್ ಕ್ರಿಯೆಷನ್ಸ್ ನ ಲೋಹ ಶಿಲ್ಪಿ ಸುನೀಲ್ ಕುಮಾರ್ ಮತ್ತು ತಂಡದವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ 6.9 ಅಡಿ ಎತ್ತರದ ಕಂಚಿನ ಲೋಹದ ಪ್ರತಿಮೆ ಮನಮೋಹಕವಾಗಿ ಕೆತ್ತನೆ ಮಾಡಿದ್ದಾರೆ.

ಪ್ರತಿಮೆ ನಿರ್ಮಾಣಕ್ಕೆ ₹36ಲಕ್ಷ ವೆಚ್ಚವಾಗಿದ್ದು, ಪಂಚಲೋಹದಿಂದ ವಿಗ್ರಹವನ್ನು ನಿರ್ಮಿಸಲಾಗಿದೆ. 15ಮಂದಿ ತಂಡವು ಈ ಪ್ರತಿಮೆಯನ್ನು ನಿರ್ಮಿಸಿದೆ. ಈ ಪ್ರತಿಮೆಯನ್ನು ಶುಕ್ರವಾರ ಬಿಡದಿಯಿಂದ ಚನ್ನಪಟ್ಟಣಕ್ಕೆ ರವಾನಿಸಲಾಯಿತು. ದೇವೇಗೌಡರ ಈ ಕಂಚಿನ ಪ್ರತಿಮೆಯನ್ನು ರಾಮನಗರ ಹಾಗೂ ಮಂಡ್ಯ ಜಿಲ್ಲೆಯ ಗಡಿಭಾಗದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.

ಕಾವೇರಿ ಕಣಿವೆ ಮೂಲದಿಂದ ಚನ್ನಪಟ್ಟಣ ತಾಲ್ಲೂಕು ಕೆರೆಗಳಿಗೆ ಇಗ್ಗಲೂರು ಜಲಾಶಯ (ಎಚ್.ಡಿ ದೇವೇಗೌಡ ಬ್ಯಾರೇಜ್) ಸ್ಥಾಪನೆಗೆ ಎಚ್.ಡಿ ದೇವೇಗೌಡರು ಕಾರಣಭೂತರಾಗಿದ್ದಾರೆ ಎಂದು ಹೇಳಲಾಗಿದೆ. ಇಗ್ಗಲೂರು ಜಲಾಶಯಕ್ಕೆ 2 ಕಿ..ಮಿ ದೂರದಲ್ಲಿರುವ ಸಾವಂದಿಪುರ ಅವಳಿ ಗ್ರಾಮಗಳ ನಡುವಿನ ವೃತ್ತದಲ್ಲಿ ದೇವೇಗೌಡರ 6.9 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಪ್ರತಿಷ್ಟನೆ ಮಾಡಲು ಊರಿನ ಅಭಿಮಾನಿ ಬಳಗವು ಸಕಲ ಸಿದ್ಧತೆ ಮಾಡಿಕೊಂಡಿದೆ.

ಇಗ್ಗಲೂರು ಅಣೆಕಟ್ಟೆ ಯೋಜನೆಯು ಆರಂಭದಲ್ಲಿಯೇ ನೆನೆಗುದ್ದಿಗೆ ಬಿದ್ದಿತ್ತು. 1979 ರಲ್ಲಿ ವಿರೇಂದ್ರ ಪಾಟೀಲರ ಅವಧಿಯಲ್ಲಿ ಕನಕಪುರ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಎಂ.ವಿ ರಾಜಶೇಖರನ್ ಅವರ ಒತ್ತಡದಿಂದ ಈ ಯೋಜನೆ ಮರುಜೀವ ಪಡೆಯಿತು. ಆದರೂ ಸಹ ಕಾರ್ಯಗತವಾಗಲಿಲ್ಲ.

1983 ರಲ್ಲಿ ರಾಜ್ಯದ ನೀರಾವರಿ ಮತ್ತು ಲೋಕೋಪಯೋಗಿ ಸಚಿವರಾಗಿದ್ದ ದೇವೇಗೌಡರು ಹಾಗೂ ಸ್ಥಳೀಯ ಶಾಸಕರಾಗಿದ್ದ ಎಂ.ವರದೇಗೌಡರು ಈ ನೀರಾವರಿ ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.

‘ಇಂದು ಈ ಪ್ರದೇಶದ ಬಹುಭಾಗ ಹಚ್ಚ ಹಸಿರಾಗಿರಲು, ಜನ ಜಾನುವಾರುಗಳಿಗೆ ನೀರು ಸಿಗಲು ಅತ್ಯಂತ ಕಾರಣ ಭೂತರಾಗಿದ್ದರು. ಇದನ್ನು ಗಮನಿಸಿದ ಅಕ್ಕಪಕ್ಕದ ಹಳ್ಳಿ ಜನರು ಇವರ ಶಿಲ್ಪಿ ತಯಾರಿಸಿ ಶಾಶ್ವತವಾಗಿ ಇವರ ಸೇವೆಯನ್ನು ನೆನೆಯುವ ಸಲುವಾಗಿ ಈ ಪ್ರತಿಮೆ ನಿರ್ಮಿಸಿದ್ದೇವೆ. ಇದನ್ನು ಇದೇ 24 ರಂದು ಪ್ರತಿಷ್ಠಾಪಿಸಲಿದ್ದೇವೆ’ ಎಂದು ಚನ್ನಪಟ್ಟಣ ತಾಲ್ಲೂಕಿನ ನಾಗರಿಕರು ತಿಳಿಸಿದರು.

ಇದೇ 24ರಂದು ಸಾವಂಧಿಪುರ ಗ್ರಾಮದಲ್ಲಿ ನಡೆಯಲಿರುವ ಕಂಚಿನ ಪ್ರತಿಮೆಯ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು, ಚುನಾಯಿತ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ಶುಕ್ರವಾರ ನಡೆದ ಪ್ರತಿಮೆ ಸಾಗಾಣಿಕೆ ಕಾರ್ಯಕ್ರಮದಲ್ಲಿ ಚನ್ನಪಟ್ಟಣ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಜೈಮುತ್ತು ಭಾಗವಹಿಸಿದ್ದರು. ವಿವಿಧ ಜನಪದ ಕಲಾ ತಂಡಗಳು ಪ್ರದರ್ಶನ ನೀಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT