ಹುಬ್ಬಳ್ಳಿ: ‘ಕಾರ್ಮಿಕರಿಗೆ ಸಲ್ಲಬೇಕಾಗಿರುವ ಬಾಕಿ ವೇತನವನ್ನು ಆಗಸ್ಟ್ 15ರೊಳಗೆ ಪಾವತಿಸುವುದಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಉಮೇಶ ಕುಸುಗಲ್ ಭರವಸೆ ನೀಡಿದ್ದಾರೆ’ ಎಂದು ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಲದ ಮುಖ್ಯ ಉಪಾಧ್ಯಕ್ಷ ಎನ್.ಆರ್. ಕಾನಗೋ ತಿಳಿಸಿದ್ದಾರೆ.
ಕಾರ್ಮಿಕರಿಗೆ ಸಲ್ಲಬೇಕಾಗಿರುವ ಬಾಕಿ ವೇತನ ತಕ್ಷಣ ಬಟವಡೆ ಮಾಡಬೇಕು ಸಹಿತ ವಿವಿಧ ಬೇಡಿಕೆ ಮುಂದಿಟ್ಟು ಹಿರಿಯ ಕಾರ್ಮಿಕ ಮುಖಂಡ ಡಾ.ಕೆ.ಎಸ್. ಶರ್ಮಾ ಸಾರಥ್ಯದಲ್ಲಿ ಸಂಸ್ಥೆಯ ಕೇಂದ್ರ ಕಚೇರಿಯ ಮುಂಭಾಗದಲ್ಲಿ ಮಹಾಮಂಡಲದ ಆಶ್ರಯಲ್ಲಿ ಶುಕ್ರವಾರ ಪ್ರತಿಭಟನೆ ನಡೆದ ಸಂದರ್ಭದಲ್ಲಿ ಮಾತುಕತೆಗೆ ಆಹ್ವಾನಿಸಿದ ಕುಸುಗಲ್, ಬಹುತೇಕ ಬೇಡಿಕೆಗಳನ್ನು ಶೀಘ್ರದಲ್ಲೇ ಈಡೇರಿಸುವ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ
‘ಬಸ್‌ಗಳ ಓಡಾಟ ಸಮಯಕ್ಕೆ ಸಂಬಂಧಿಸಿದಂತೆ ಫಾರ್ಮ್– 4ರಲ್ಲಿರುವ ಅವೈಜ್ಞಾನಿಕ ಅಂಶಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸರ್ವೆ ಮಾಡಿ ವಾಸ್ತವಕ್ಕೆ ಅನುಗುಣವಾಗಿ ಬದಲಾವಣೆ ಮಾಡಲು 5 ಮಂದಿಯ ಸಮಿತಿ ರಚಿಸಲು ಕುಸುಗಲ್ ಒಪ್ಪಿದ್ದಾರೆ. ಸಮಿತಿಯಲ್ಲಿ ಆಡಳಿತ ಮಂಡಳಿ ಸದಸ್ಯರು ಮತ್ತು ಮಹಾಮಂಡಲದ ಇಬ್ಬರು ಸದಸ್ಯರು ಇರುತ್ತಾರೆ. 15 ದಿನಗಳ ಒಳಗೆ ಈ ಸಮಿತಿ ವರದಿ ನೀಡಲಿದ್ದು, ಬಳಿಕ ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ’
‘ಮೊಬೈಲ್ ಇಂದಿನ ದಿನಗಳಲ್ಲಿ ಮನುಷ್ಯನ ಅವಿಭಾಜ್ಯ ಅಂಗವಾಗಿದೆ. ಕರ್ತವ್ಯದ ಅವಧಿಯಲ್ಲಿ ಏನಾದರೂ ಸಮಸ್ಯೆ ಉಂಟಾದರೆ ತಕ್ಷಣ ಮನೆಯವರನ್ನು ಸಂಪರ್ಕಿಸದಲು ಮೊಬೈಲ್ ಅಗತ್ಯವಾಗಿದೆ. ಹೀಗಾಗಿ ಕಂಡಕ್ಟರ್‌ಗಳು ಮೊಬೈಲ್ ಬಳಸಬಾರದಂತೆ ಹೊರಡಿಸಿದ ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಮಹಾಮಂಡಲ ಇಟ್ಟಿದ್ದ ಬೇಡಿಕೆಯನ್ನೂ ಈಡೇರಿಸುವುದಾಗಿ ಕುಸಗಲ್ ಒಪ್ಪಿದ್ದಾರೆ.
ಮಹಾಮಂಡಲದ ಮುಂದಿಟ್ಟ ವಿವಿಧ ಬೇಡಿಕೆಗಳ ಕುರಿತು ಸುಮಾರು ಮೂರು ಗಂಟೆ ಸೌಹಾರ್ದಯುತವಾಗಿ ನಡೆದ ಮಾತುಕತೆ ಸಂದರ್ಭದಲ್ಲಿ ಕಾರ್ಮಿಕರ ಹೆಚ ಬಹುತೇಕ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ. ಮುಖ್ಯ ಸಂಚಾರ ಪ್ರಬಂಧಕರು, ಮಹಾಮಂಡಲದ ಅಧ್ಯಕ್ಷ ಕೆ.ಎಸ್.ಶರ್ಮಾ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಮೂರ್ತಿ ಸಹಿತ ಎಲ್ಲ ಆರು ವಿಭಾಗಗಳ ಪ್ರತಿನಿಧಿಗಳು ಮಾತುಕತೆಯಲ್ಲಿ ಭಾಗವಹಿಸಿದ್ದರು’ ಎಂದು ಕಾಂಗೋ ತಿಳಿಸಿದ್ದಾರೆ.
ಮಾತುಕತೆಗೂ ಮುನ್ನ ಗೋಕುಲ ರಸ್ತೆಯ ವಿಶ್ವಶ್ರಮ ಚೇತನದಿಂದ ಮೆರವಣಿಗೆ ಹೊರಟು ಕೇಂದ್ರ ಕಚೇರಿಗೆ ಬಂದ ಪ್ರತಿಭಟನಕಾರರು, ಕಚೇರಿ ಮುಂಭಾಗದಲ್ಲಿ ಧರಣಿ ಕುಳಿತು ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆಗಳನ್ನು ಕೂಗಿದರು. ಫಾರ್ಮ್– 4ರಲ್ಲಿರುವ ಕಾನೂನುಬಾಹಿರ ಅಂಶಗಳನ್ನು ಸರಿಪಡಿಸಬೇಕು, ರಜೆ ಮಂಜೂರಾತಿಯಲ್ಲಿನ ಅನ್ಯಾಯ, ತಾರತಮ್ಯ, ಕಿರುಕುಳ ಪರಿಹರಿಸಬೇಕು, ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಸಿಬ್ಬಂದಿ ಕೊರತೆ ನಿವಾರಿಸಬೇಕು, ಮೊಬೈಲ್ ಬಳಕೆ ನಿಷೇಧವನ್ನು ರದ್ದುಗೊಳಿಸಬೇಕು ಎಂದು ಪ್ರತಿಭಟನೆಕಾರರು ಬೇಡಿಕೆ ಮುಂದಿಟ್ಟರು.
ಡಬಲ್ ಡ್ಯೂಟಿ, ಬಾರ್ ಡ್ಯೂಟಿ ರದ್ದಾಗಬೇಕು, ಡಿಪೋಗಳಲ್ಲಿ ಕುಡಿಯುವ ನೀರು ಮತ್ತಿತರ ಮೂಲಸೌಲಭ್ಯಗಳನ್ನು ಒದಗಿಸಬೇಕು, ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ವಿಶ್ರಾಂತಿ ಗೃಹಗಳನ್ನು ಒದಗಿಸಬೇಕು, ರಾತ್ರಿ ತಂಗಬೇಕಾದ ಸಂದರ್ಭದಲ್ಲಿ ಸಿಬ್ಬಂದಿಗೆ ರೆಸ್ಟ್ ಹೌಸ್ ಒದಗಿಸಬೇಕು, ಭವಿಷ್ಯನಿಧಿಯ ಬಾಕಿಯನ್ನು ತಕ್ಷಣ ತುಂಬಬೇಕು, ಮಹಿಳೆಯರಿಗೆ ಜನರಲ್ ಶಿಫ್ಟ್‌ನಲ್ಲಿ ಮಾತ್ರ ಕೆಲಸ ಕೊಡಬೇಕು, ಕೆಲಸದ ಜಾಗದಲ್ಲಿ ಮಹಿಳೆಯರಿಗೆ ಕಿರುಕುಳ ಆಗದಂತೆ ತಡೆಯಬೇಕು, ಹುಬ್ಬಳ್ಳಿಯ ಪ್ರಾದೇಶಿಕ ಕಾರ್ಯಾಗಾರದಲ್ಲಿ ಹೊಸ ಬಾಡಿಬಿಲ್ಡಿಂಗ್ ಕೆಲಸ ಹೆಚ್ಚಿಸಬೇಕು ಮತ್ತಿತರ 23 ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಕಾರರು ಆಗ್ರಹಿಸಿದರು.
ಮಹಾಮಂಡಲದ ಮುಖ್ಯ ಉಪಾಧ್ಯಕ್ಷ ಎನ್.ಆರ್. ಕಾನಗೋ, ಪ್ರಧಾನ ಕಾರ್ಯದ್ರಶಿ ಪ್ರಕಾಶ ಮೂರ್ತಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಚಿಕ್ಕೋಡಿ, ಗದಗ, ಹಾವೇರಿ, ಶಿರಸಿ, ಕೇಂದ್ರ ಕಚೇರಿ ಹಾಗೂ ಹುಬ್ಬಳ್ಳಿ ಪ್ರಾದೇಶಿಕ ಕಾರ್ಯಾಗಾರದ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.