ಸೋಮವಾರ, ಮೇ 16, 2022
22 °C
ಜೋಡಿ ಮಾರ್ಗ ನಿರ್ಮಾಣ, ಟ್ರ್ಯಾಕ್‌ ನವೀಕರಣ ಕಾರ್ಯಕ್ಕೆ ಹೆಚ್ಚು ಅನುದಾನ

ಬೆಳಗಾವಿ–ಧಾರವಾಡ ರೈಲು ಮಾರ್ಗಕ್ಕೆ ₹50 ಕೋಟಿ ಮೀಸಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿವಂಗತ ಸುರೇಶ ಅಂಗಡಿ ಅವರು ಕಿತ್ತೂರು ಮೂಲಕ ಬೆಳಗಾವಿ–ಧಾರವಾಡಕ್ಕೆ ಘೋಷಿಸಿದ್ದ ನೇರ ರೈಲು ಮಾರ್ಗಕ್ಕೆ ಈ ಸಲದ ಕೇಂದ್ರ ಬಜೆಟ್‌ನಲ್ಲಿ ₹50 ಕೋಟಿ ಮೀಸಲಿಡಲಾಗಿದೆ.

ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಈ. ವಿಜಯಾ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಧಾರವಾಡ–ಬೆಳಗಾವಿ ಮಾರ್ಗಕ್ಕೆ ಒಟ್ಟು 827 ಎಕರೆ ಭೂಮಿ ಅಗತ್ಯವಿದ್ದು, ಧಾರವಾಡ ಜಿಲ್ಲೆಯಲ್ಲಿ 225 ಮತ್ತು ಬೆಳಗಾವಿ ಜಿಲ್ಲೆಯಲ್ಲಿ 602 ಎಕರೆ ಭೂಮಿ ಬೇಕಾಗಿದೆ’ ಎಂದರು.

‘ಬಾಗಲಕೋಟೆ– ಕುಡಚಿ ನಡುವಿನ 142 ಕಿ.ಮೀ. ಅಂತರದ ಮಾರ್ಗಕ್ಕೆ ₹25 ಕೋಟಿ, ಗದಗ–ವಾಡಿ ನಡುವಿನ 252 ಕಿ.ಮೀ, ಶಿವಮೊಗ್ಗ–ಶಿಕಾರಿಪುರ–ರಾಣೆಬೆನ್ನೂರು ಮಾರ್ಗದ 103 ಕಿ.ಮೀ ಮಾರ್ಗಗಳಿಗೆ ತಲಾ ₹100 ಕೋಟಿ ಅನುದಾನ ಒದಗಿಸಲಾಗಿದೆ’ ಎಂದು ವಿವರಿಸಿದರು.

ಜೋಡಿ ಮಾರ್ಗ ನಿರ್ಮಾಣಕ್ಕೆ ₹236 ಕೋಟಿ ಮತ್ತು ಟ್ರ್ಯಾಕ್‌ಗಳ ನವೀಕರಣ ಕಾರ್ಯಕ್ಕೆ ₹480 ಕೋಟಿ ಮೀಸಲಿಡಲಾಗಿದೆ. ಹೋದ ವರ್ಷಕ್ಕೆ ಹೋಲಿಸಿದರೆ ಈ ಸಲ ಜೋಡಿ ಮಾರ್ಗಕ್ಕೆ ಶೇ 17ರಷ್ಟು, ರಸ್ತೆ ಸುರಕ್ಷತಾ ಕಾರ್ಯ ಮತ್ತು ಲೆವೆಲ್‌ ಕ್ರಾಸಿಂಗ್‌ಗಳ ಕೆಲಸಕ್ಕೆ ಶೇ 67ರಷ್ಟು ಮತ್ತು ಪ್ರಯಾಣಿಕರ ಸೌಲಭ್ಯಗಳಿಗೆ ಶೇ 25ರಷ್ಟು ಹೆಚ್ಚಿನ ಅನುದಾನ ಲಭಿಸಿದೆ ಎಂದರು.   

ರಸ್ತೆ ಸುರಕ್ಷತೆ ಮತ್ತು ಲೆವೆಲ್‌ ಕ್ರಾಸಿಂಗ್‌ ಕಾಮಗಾರಿಗೆ ₹35 ಕೋಟಿ, ರೈಲ್ವೆ ಸೇತುವೆಗಳ ನಿರ್ಮಾಣಕ್ಕೆ ₹174 ಕೋಟಿ, ಸಿಗ್ನಲ್‌ ಹಾಗೂ ಟೆಲಿ ಕಮ್ಯುನಿಕೇಷನ್‌ ಕೆಲಸಕ್ಕೆ ₹69 ಕೋಟಿ, ವಿದ್ಯುತ್‌ಗೆ ಸಂಬಂಧಿಸಿದ ಇತರೆ ಕೆಲಸಕ್ಕೆ ₹17 ಕೋಟಿ, ಪ್ರಯಾಣಿಕರಿಗೆ ಸೌಲಭ್ಯಗಳನ್ನು ಕಲ್ಪಿಸಲು ₹153 ಕೋಟಿ ನೀಡಲಾಗಿದೆ ಎಂದು ತಿಳಿಸಿದರು.

ಹಿಂದಿನ ಎಲ್ಲ ಬಜೆಟ್‌ಗಳಿಗೆ ಹೋಲಿಸಿದರೆ ಈ ಬಾರಿ ನೈರುತ್ಯ ರೈಲ್ವೆಗೆ ಹೆಚ್ಚು ಅನುದಾನ ಬಂದಿದೆ. ನಾವು ಸಲ್ಲಿಸಿದ್ದ ಎಲ್ಲ ಪ್ರಸ್ತಾವಗಳಿಗೂ ಅನುಮೋದನೆ ಲಭಿಸಿದ್ದು, ಇದರಿಂದ ಕಾಮಗಾರಿಗಳನ್ನು ಚುರುಕುಗೊಳಿಸಲು ಅನುಕೂಲವಾಗಲಿದೆ. ಹೊಸದಾಗಿ ಕೆಳ ಹಾಗೂ ಮೇಲ್ಸೆತುವೆಗಳ ನಿರ್ಮಾಣಕ್ಕೆ ರಾಜ್ಯದ ಶೇ 12ರಷ್ಟು ಅನುದಾನ ₹1,223 ಕೋಟಿ ಬರುವ ನಿರೀಕ್ಷೆ ಹೊಂದಲಾಗಿದೆ ಎಂದರು.

ಬಜೆಟ್‌ನಲ್ಲಿ ಹೊಸ ಯೋಜನೆಗಳನ್ನು ಘೋಷಿಸಿಲ್ಲವಾದರೂ, ಹಿಂದಿನ ಯೋಜನೆಗಳನ್ನು ತ್ವರಿತಗತಿಯಲ್ಲಿ ಮುಗಿಸಲು ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ.

‘ಭೂ ಸ್ವಾಧೀನವೇ ಸವಾಲು’
ಹುಬ್ಬಳ್ಳಿ: ಹಳಿಗಳ ನಿರ್ಮಾಣಕ್ಕೆ ಅಗತ್ಯವಾಗಿರುವ ಭೂಮಿಯ ಸ್ವಾಧೀನ ಕೆಲಸವೇ ಸವಾಲಾಗಿ ಪರಿಣಮಿಸಿದೆ ಎಂದು ವಿಜಯಾ ಹೇಳಿದರು.

ತುಮಕೂರು–ದಾವಣಗೆರೆ–ಗದಗ ಮಾರ್ಗಕ್ಕೆ ಅಗತ್ಯವಿರುವ 2,298 ಎಕರೆ ಭೂಮಿಯಲ್ಲಿ 130 ಎಕರೆ ಜಾಗ ಮಾತ್ರ ನೀಡಲಾಗಿದೆ.  ಭೂ ಸ್ವಾಧೀನ ಕೆಲಸವನ್ನು ರಾಜ್ಯ ಸರ್ಕಾರ ಮಾಡಿಕೊಡಬೇಕಿದೆ. ಗದಗ–ವಾಡಿ ಯೋಜನೆಗೆ 1,600 ಹೆಕ್ಟೇರ್‌ ಅಗತ್ಯವಿದ್ದು, 615 ಹೆಕ್ಟೇರ್  ರೈಲ್ವೆ ಇಲಾಖೆ ಸುಪರ್ದಿಗೆ ಬಂದಿದೆ. ಪ್ರಥಮ ಹಂತದಲ್ಲಿ ತಳಕಲ್‌–ಕುಷ್ಟಗಿ ಮತ್ತು ಎರಡನೇ ಹಂತದಲ್ಲಿ ಶಹಾಪುರ–ವಾಡಿ ಕಾಮಗಾರಿ ನಡೆಯಲಿದೆ ಎಂದು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು