ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ನೂರು ಟ್ರ್ಯಾಕ್ಟರ್‌

7

ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ನೂರು ಟ್ರ್ಯಾಕ್ಟರ್‌

Published:
Updated:

ಧಾರವಾಡ: ‘ಪ್ರಸಕ್ತ ಸಾಲಿನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೂ ನೂರಕ್ಕೂ ಹೆಚ್ಚು ರೈತರಿಗೆ ಟ್ರಾಕ್ಟರ್ ನೀಡುವ ಯೋಜನೆ ಇದ್ದು, ಫಲಾನುಭವಿಗಳ ಸಂಖ್ಯೆಯನ್ನು ಹೆಚ್ಚಿಸಲು ಬೇಡಿಕೆ ಇದೆ’ ಎಂದು ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ ಹೇಳಿದರು.

ಇಲಾಖೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಭೇಟಿ ನೀಡಿದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಈ ಬಾರಿ ಬಜೆಟ್‌ನಲ್ಲಿ ಇಲಾಖೆಗೆ ₹400ಕೋಟಿ ನೀಡಲಾಗಿದೆ. ಇದರಲ್ಲಿ ₹16.5ಕೋಟಿ ಧಾರವಾಡಕ್ಕೆ ಮೀಸಲಿಡಲಾಗಿದೆ. ಟ್ರ್ಯಾಕ್ಟರ್‌ಗೆ ಸ್ಥಳಿಯ ಶಾಸಕರು ಹಾಗೂ ಉಸ್ತುವಾರಿ ಸಚಿವರ ಶಿಫಾರಸು ಮಾಡುವ ರೈತರಿಗೆ ಟ್ರ್ಯಾಕ್ಟರ್ ನೀಡಲಾಗುವುದು’ ಎಂದರು.

‘ಮೆಣಸಿನಕಾಯಿ ಬೆಳೆಗೆ 2016ರ ಹಿಂಗಾರಿನ ಹಣ ಬಾರದಿರುವ ಕುರಿತು ಕಳೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಯಿತು. ಇರುವ ಗೊಂದಲ ನಿವಾರಿಸಿಕೊಂಡು ರೈತರಿಗೆ ಶೀಘ್ರದಲ್ಲಿ ಹಣ ಬಿಡುಗಡೆ ಮಾಡುವಂತೆ ವಿಮಾ ಕಂಪೆನಿಗೆ ಪತ್ರ ಬರೆಯಲು ನಿರ್ಧರಿಸಲಾಗಿದೆ’ ಎಂದರು.

ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ಮುಖ್ಯಮಂತ್ರಿ ಬೇಸರ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮನಗೂಳಿ, ‘ಎಲ್ಲಾ ಮುಖ್ಯಮಂತ್ರಿಗಳ ಕಾಲದಲ್ಲೂ ಉತ್ತರ ಕರ್ನಾಟಕಕ್ಕೆ ಅನುದಾನ ಬಂದಿದೆ. ಯಾವುದೇ ಸರ್ಕಾರದಲ್ಲಿ ಉತ್ತರ ಹಾಗೂ ದಕ್ಷಿಣ ಎಂಬ ತಾರತಮ್ಯ ಆಗಿಲ್ಲ. ಆದರೆ ಬಂದ ಹಣವನ್ನು ಅಧಿಕಾರಿಗಳು ಸರಿಯಾಗಿ ಬಳಸಿಲ್ಲ. ಇದರಿಂದ ಅಭಿವೃದ್ಧಿಯಾಗದೆ ಹಿಂದೆ ಉಳಿದಿದೆ. ಆದರೆ ಇನ್ನು ಹಾಗಾಗದು’ ಎಂದರು. 

‘ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಂತಃಕರಣ ಇರುವ ವ್ಯಕ್ತಿ. ಅವರಿಗೆ ಬಡವರು, ರೈತರ ಕುರಿತು ಅತೀವ ಕಾಳಜಿ. ಹೀಗಾಗಿ ಅವರನ್ನು ನೆನೆದು ಕಣ್ಣಿರು ಹಾಕಿದ್ದಾರೆ. ಅಂತಃಕರಣ ಇಲ್ಲದವರಿಗೆ ಕಣ್ಣೀರು ಬರುವುದಿಲ್ಲ. ಅಂಥವರ ಹೃದಯ ಕಲ್ಲಾಗಿರುತ್ತದೆ. ಸದ್ಯ ಸಮ್ಮಿಶ್ರ ಸರ್ಕಾರದಲ್ಲಿ ಹತ್ತು ಜನ ಜೆಡಿಎಸ್ ಮತ್ತು 20 ಕಾಂಗ್ರೆಸ್ ಸಚಿವರು ಅವರ ಇಲಾಖೆಯ ಕೆಲಸಗಳನ್ನು ಸಮರ್ಪಕವಾಗಿ ಮಾಡಿಕೊಂಡು ಹೋಗುತ್ತಿದ್ದಾರೆ. ಯಾವುದೇ ಊಹಾಪೋಹಕ್ಕೆ ಕಿವಿಗೊಡುವ ಅಗತ್ಯವಿಲ್ಲ. ಬರುವ ದಿನಗಳಲ್ಲಿ ರೈತರ ಪರವಾಗಿ ಇನ್ನಷ್ಟು ಯೋಜನೆಗಳು ಬರಲಿವೆ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !