ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ರಥವೇರಿ ಬಂದ ಸೂರ್ಯನಿಗೆ ‘ಯೋಗ’ ನಮನ

Last Updated 29 ಜನವರಿ 2023, 6:25 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೆಳಕು ಹರಿಯುವ ಮುನ್ನವೇ ಪೂರ್ವ ದಿಕ್ಕಿನತ್ತ ಮುಖ ಮಾಡಿ ನಿಂತಿದ್ದ ನೂರಾರು ಜನ… ಸೂರ್ಯ ರಶ್ಮಿ ಭುವಿಯನ್ನು ಸ್ಪರ್ಶಿಸುವ ವೇಳೆ ಯೋಗ ನಮಸ್ಕಾರದ ಮೂಲಕ ಆತ್ಮೀಯ ಸ್ವಾಗತ… ಯೋಗಮಂತ್ರ ಪಠಣದ ನಾದ, ಹಕ್ಕಿಗಳ ಚಿಲಿಪಿಲಿ ನಿನಾದ…

ನಗರದ ಮೂರು ಸಾವಿರ ಮಠದ ಆವರಣದಲ್ಲಿ ರಥಸಪ್ತಮಿ ಅಂಗವಾಗಿ ಶನಿವಾರ ಆಯೋಜಿಸಿದ್ದ ಸಾಮೂಹಿಕ ಸೂರ್ಯನಮಸ್ಕಾರ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯವಿದು.

ಯೋಗ ಸ್ಪರ್ಶ ಪ್ರತಿಷ್ಠಾನ ಹಾಗೂ ಎಸ್‍ಪಿವೈಎಸ್‍ಎಸ್‍ ಪತಂಜಲಿ ಯೋಗ ಶಿಕ್ಷಣ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಂಜಾನೆ 5.30ಕ್ಕೆ ಅಗ್ನಿಹೋತ್ರ ಹೋಮ ನೆರವೇರಿಸಲಾಯಿತು. 6 ಗಂಟೆಯಿಂದ ನಿರಂತರವಾಗಿ 108 ಸೂರ್ಯನಮಸ್ಕಾರದ ಯೋಗಾಭ್ಯಾಸ ಮಾಡಲಾಯಿತು.

ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವರ್ಣ ಸಂಸ್ಥೆಯ ಮಾಲೀಕ ವಿ.ಎಸ್.ವಿ. ಪ್ರಸಾದ್, ‘ಭಾರತೀಯ ಪರಂಪರೆಯಲ್ಲಿ ಸೂರ್ಯನಿಗೆ ವಿಶೇಷ ಗೌರವವಿದೆ. ನಿತ್ಯ ಸೂರ್ಯನಮಸ್ಕಾರ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಹಲವಾರು ಪ್ರಯೋಜನಗಳಿವೆ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ’ ಎಂದು ಹೇಳಿದರು.

ಎಸ್‍ಪಿವೈಎಸ್‍ಎಸ್‍ ವಲಯ ಚಿಂತನಾಕೂಟದ ಪ್ರಮುಖ ಕೈಲಾಸ್ ಹಿರೇಮಠ, ನಿತ್ಯ ಯೋಗಭ್ಯಾಸ ಮಾಡುವಂತೆ ಸಲಹೆ ನೀಡಿದರು.

ಮಹದೇವ ಹೊಳೆಯಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‍ಪಿವೈಎಸ್‍ಎಸ್‍ ಸಂಚಾಲಕ ಗೋಪಾಲ ಜೋಶಿ, ಸಂಚಾಲಕಿ ಅಮರಾವತಿ ಗಾಣಿಗಿ, ರಘುನಾಥ ಪಾಟೀಲ, ದ್ರಾಕ್ಷಾಯಣಿ ತೋರಗಲಮಠ, ಯೋಗಸ್ಪರ್ಶ ಪ್ರತಿಷ್ಠಾನದ ಅಧ್ಯಕ್ಷ ದಯಾನಂದ ಮಗಜಿಕೊಂಡಿ, ಪ್ರಸನ್ನ ದೀಕ್ಷಿತ್, ಸುಧಾಕರ ದಿವಟೆ, ವಿಶ್ವನಾಥ್ ಗುಡ್ಡದ, ಸದಾನಂದ ನಡಕಟ್ಟಿನ್, ದೀಪಕ್ ಕೋನಾ, ರಶ್ಮಿ ಬೆಳ್ಳೂರ್ , ರಾಧಾ ರಾಮದುರ್ಗ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT