ಮತದಾನಕ್ಕೆ ಗುರುತಿನ ಚೀಟಿ ಇಲ್ಲವಾದಲ್ಲಿ ಪರ್ಯಾಯವಾಗಿ 11 ದಾಖಲೆ

ಸೋಮವಾರ, ಮೇ 27, 2019
23 °C

ಮತದಾನಕ್ಕೆ ಗುರುತಿನ ಚೀಟಿ ಇಲ್ಲವಾದಲ್ಲಿ ಪರ್ಯಾಯವಾಗಿ 11 ದಾಖಲೆ

Published:
Updated:

ಧಾರವಾಡ: ಲೋಕಸಭಾ ಸಾರ್ವತ್ರಿಕ ಚುನಾವಣೆಯ ಧಾರವಾಡ ಕ್ಷೇತ್ರಕ್ಕೆ ಮತದಾನ ಏ. 23ರಂದು ಜರುಗಲಿದ್ದು, ಚುನಾವಣಾ ಆಯೋಗ ನೀಡಿರುವ ಭಾವಚಿತ್ರ ಇರುವ ಗುರುತಿನ ಚೀಟಿ ಇಲ್ಲವಾದಲ್ಲಿ, ಪರ್ಯಾಯವಾಗಿ 11 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಿ ಮತದಾನ ಮಾಡಬಹುದಾಗಿದೆ.

ಈ ವಿಷಯವನ್ನು ಶುಕ್ರವಾರ ತಿಳಿಸಿದ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ದೀಪಾ ಚೋಳನ್, ‘ಪಾಸ್‌ಪೋರ್ಟ್‌, ಚಾಲನಾ ಪರವಾನಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಸ್ವಾಮ್ಯ ಕಂಪನಿಗಳು ನೀಡಿರುವ ಭಾವಚಿತ್ರ ಇರುವ ಗುರುತಿನ ಸೇವಾ ಕಾರ್ಡ್‌, ಸರ್ಕಾರ ವಲಯದ ಬ್ಯಾಂಕ್ ಅಥವಾ ಅಂಚೆ ಕಚೇರಿಯಿಂದ ನೀಡಲಾದ ಭಾವಚಿತ್ರ ಇರುವ ಪಾಸ್‌ಬುಕ್‌, ಪಾನ್‌ ಕಾರ್ಡ್‌, ರಾಷ್ಟ್ರಿಯ ಜನಸಂಖ್ಯಾ ನೋಂದಣಿಯಿಂದ ನೀಡಲಾದ ಸ್ಮಾರ್ಟ್ ಕಾರ್ಡ್‌, ನರೇಗಾ ಜಾಬ್‌ಕಾರ್ಡ್‌, ಕಾರ್ಮಿಕ ಸಚಿವಾಲಯದಿಂದ ನೀಡಲಾದ ಆರೋಗ್ಯ ಜೀವ ವಿಮೆ ಸ್ಮಾರ್ಟ್‌ ಕಾರ್ಡ್‌ ತೋರಿಸಬಹುದು’ ಎಂದಿದ್ದಾರೆ.

‘ಪೆನ್ಷನ್‌ ದಾಖಲಾತಿ, ಮಾಜಿ ಸೈನಿಕ ಪಿಂಚಣಿ ಪುಸ್ತಕ ಪಿಂಚಣಿ ಪಾವತಿ ಆದೇಶ, ಮಾಜಿ ಸೈನಿಕರ, ವಿಧವೆ, ಅವಲಂಬಿತರ ದೃಢೀಕರಣ ಪತ್ರ, ವೃದ್ಧಾಪ್ಯ ವಿರಾಮ ವೇತನ ಆದೇಶ, ವಿಧವಾ ವೇತನ ಆದೇಶ, ಸ್ವಾತಂತ್ರ‍್ಯ ಯೋಧರ ಭಾವಚಿತ್ರವಿರುವ ಗುರುತಿನ ಚೀಟಿ, ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಸರ್ಕಾರದಿಂದ ನೀಡಿರುವ ಅಧಿಕೃತ ಗುರುತಿನ ಚೀಟಿ ಮತ್ತು ಆಧಾರ್‌ಕಾರ್ಡ್ ಇದರಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಮತದಾರರು ತಪ್ಪದೇ ಏಪ್ರಿಲ್ 23 ರಂದು ಮತದಾನ ಮಾಡಬೇಕು’ ಎಂದು ತಿಳಿಸಿದ್ದಾರೆ.

‘ಬೂತ್ ಮಟ್ಟದ ಅಧಿಕಾರಿಗಳು (ಬಿ.ಎಲ್.ಓ)ಗಳು ಸಂಬಂಧಿಸಿದ ಮತಗಟ್ಟೆಯ ಮತದಾರರ ಭಾವಚಿತ್ರವಿರುವ ಮತದಾರ ಚೀಟಿಗಳನ್ನು ಮತದಾರರ ಮನೆಗೆ ತಲುಪಿಸಲು ಕ್ರಮ ಕೈಗೊಂಡಿದ್ದಾರೆ. ಈ ಚೀಟಿಗಳನ್ನು ಬಿ.ಎಲ್.ಓ. ಗಳಿಂದ ಪಡೆದು ಏ. 23 ರಂದು ಮತದಾನ ಮಾಡಬಹುದಾಗಿದೆ. ಆದರೆ ಮತದಾರರ ಗುರುತಿನ ಚೀಟಿ ಅಥವಾ ಪರ್ಯಾಯ 11 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆ ಹಾಜರುಪಡಿಸುವುದು ಕಡ್ಡಾಯವಾಗಿದೆ’ ಎಂದು ಸೂಚಿಸಿದ್ದಾರೆ.

‘ಮತಗಟ್ಟೆಯೊಳಗೆ ಮತದಾರರು ಮೊಬೈಲ್, ಕ್ಯಾಮರಾ, ಲೇಸರ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಚುನಾವಣೆಗೆ ಸಂಬಂಧಿಸಿದ ಯಾವುದೇ ಮಾಹಿತಿ, ದೂರುಗಳಿಗೆ ಉಚಿತ ಸಹಾಯವಾಣಿ 1950 ಸಂಪರ್ಕಿಸಬಹುದು. ಚುನಾವಣಾ ಮಾದರಿ ನೀತಿಸಂಹಿತೆ ಉಲ್ಲಂಘನೆಯಾದಲ್ಲಿ ಸಿ–ವಿಜಿಲ್ ಮೊಬೈಲ್ ಆ್ಯಪ್‌ ಮೂಲಕ ದೂರು ಸಲ್ಲಿಸಬಹುದಾಗಿದೆ’ ಎಂದು ಚೋಳನ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !