ಲೋಕಸಭಾ ಕ್ಷೇತ್ರ: ಅಂತಿಮ ಕಣದಲ್ಲಿ 19 ಅಭ್ಯರ್ಥಿಗಳು

ಸೋಮವಾರ, ಏಪ್ರಿಲ್ 22, 2019
31 °C
ನಾಮಪತ್ರ ವಾಪಸ್ ಪಡೆದ 4 ಅಭ್ಯರ್ಥಿಗಳು; ತಿರಸ್ಕೃತಗೊಂಡ 3 ಅಭ್ಯರ್ಥಿಗಳ ನಾಮಪತ್ರ

ಲೋಕಸಭಾ ಕ್ಷೇತ್ರ: ಅಂತಿಮ ಕಣದಲ್ಲಿ 19 ಅಭ್ಯರ್ಥಿಗಳು

Published:
Updated:

ಧಾರವಾಡ: ಲೋಕಸಭಾ ಚುನಾವಣೆಯ ಧಾರವಾಡ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದವರಲ್ಲಿ ನಾಲ್ವರು ಅಭ್ಯರ್ಥಿಗಳು ನಾಮಪತ್ರ ಸೋಮವಾರ ಹಿಂಪಡೆದಿದ್ದರಿಂದಾಗಿ ಅಂತಿಮ ಕಣದಲ್ಲಿ 19 ಅಭ್ಯರ್ಥಿಗಳು ಉಳಿದಿದ್ದಾರೆ.

ಕ್ಷೇತ್ರದಲ್ಲಿ ಒಟ್ಟು 26 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಏ. 5ರಂದು ನಡೆದ ಪರಿಷ್ಕರಣೆಯಲ್ಲಿ ಒಟ್ಟು ಮೂವರ ನಾಮಪತ್ರ ತಿರಸ್ಕೃತಗೊಂಡಿದ್ದವು. 

ಭ್ರಷ್ಟಾಚಾರ ಮಿಟಾವೊ ಪಕ್ಷದ ಪ್ರಕಾಶ ದೊಡ್ಡವಾಡ, ಪಕ್ಷೇತರ ಅಭ್ಯರ್ಥಿಗಳಾದ ಗುರಪ್ಪ ತೋಟದ, ಆರ್‌.ಡಿ.ಕೊಮಾರದೇಸಾಯಿ ಮತ್ತು ರಾಜಶೇಖರ ಕಂತಿಮಠ ಅವರು ನಾಮಪತ್ರ ವಾಪಾಸ್ ಪಡೆದಿದ್ದಾರೆ. ಜೆಡಿಯು ಪಕ್ಷದಿಂದ ಗುರಪ್ಪ ತೋಟದ ಅವರು ನಾಮಪತ್ರ ಸಲ್ಲಿಸಿದ್ದರು. ಆದರೆ ಅವರು ಪಕ್ಷದ ಬಿ–ಫಾರ್ಮ್ ಸಲ್ಲಿಸಿರಲಿಲ್ಲ. ಹೀಗಾಗಿ ಅವರನ್ನು ಪಕ್ಷೇತರ ಅಭ್ಯರ್ಥಿ ಎಂದು ಪರಿಗಣಿಸಲಾಗಿತ್ತು.

ನಾಮಪತ್ರ ಹಿಂಪಡೆಯಲು ಮಧ್ಯಾಹ್ನ 3ರವರೆಗೆ ಅವಕಾಶವಿತ್ತು. ಹಾಜರಿದ್ದ ಅಭ್ಯರ್ಥಿಗಳು ಹಾಗೂ ಅವರ ಏಜೆಂಟರ ಸಮ್ಮುಖದಲ್ಲಿ ಮಧ್ಯಾಹ್ನ 3ರ ನಂತರ ಕ್ರಮಸಂಖ್ಯೆ ಹಾಗೂ ಚಿಹ್ನೆಗಳನ್ನು ಹಂಚಿಕೆ ಮಾಡಿ, ಅನುಮೋದನೆಗಾಗಿ ಮುಖ್ಯ ಚುನಾವಣಾಧಿಕಾರಿಗೆ ಜಿಲ್ಲಾ ಚುನಾವಣಾಧಿಕಾರಿ ಕಳುಹಿಸಿದರು.

ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಮಾರ್ಚ್ 4ರಂದು 15 ಜನ ನಾಮಪತ್ರ ಸಲ್ಲಿಸಿದ್ದರು. ರಾಜಶೇಖರ ಕಂತಿಮಠ ಅವರು 2018ರ ವಿಧಾನಸಭಾ ಚುನಾವಣೆಗೂ ಸ್ಪರ್ಧಿಸಿ ನಂತರ ನಾಮಪತ್ರ ಹಿಂಪಡೆದಿದ್ದರು. ಈಬಾರಿಯೂ ನಾಮಪತ್ರ ಸಲ್ಲಿಸಿ ಹಿಂಪಡೆದರು. 

ಬಿಜೆಪಿಯಿಂದ ಸ್ಪರ್ಧಿಸಿರುವ ಪ್ರಹ್ಲಾದ ಜೋಶಿ ಅವರು ಸತತ ಮೂರು ಬಾರಿ ಗೆಲುವು ದಾಖಲಿಸಿದ್ದು, ನಾಲ್ಕನೇ ಬಾರಿ ಆಯ್ಕೆ ಬಯಸಿ ಸ್ಪರ್ಧಿಸಿದ್ದಾರೆ. ವಿನಯ ಕುಲಕರ್ಣಿ 2014ರಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಈ ಬಾರಿ ಮತ್ತೊಮ್ಮೆ ಸ್ಪರ್ಧಿಸಿದ್ದಾರೆ. ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ಈ ಇಬ್ಬರ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

ಈ ಬಾರಿ ಕಣದಲ್ಲಿ 9 ಮಂದಿ ಪಕ್ಷೇತರರು ಇದ್ದಾರೆ. ವಿದ್ಯುನ್ಮಾನ ಮತಯಂತ್ರದಲ್ಲಿ ಪ್ರತಿ 16 ಮಂದಿಗೆ ಒಂದು ಬ್ಯಾಲೆಟ್‌ ಪೇಪರ್ ಇರುತ್ತದೆ. ಈ ಬಾರಿ 19 ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಎರಡು ಯಂತ್ರಗಳು ಇರಲಿವೆ. ಇದರಲ್ಲಿ ಪ್ರಹ್ಲಾದ ಜೋಶಿ ಮತ್ತು ವಿನಯ ಕುಲಕರ್ಣಿ ಅವರಿಗೆ ಕ್ರಮವಾಗಿ 2 ಮತ್ತು 3ನೇ ಕ್ರಮ ಸಂಖ್ಯೆ ಲಭಿಸಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !