ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್ ಜಾರಿಯಾಗುತ್ತಿದ್ದಂತೆ ಆರಕ್ಷಕರಿಗೆ ‘ಕಷಾಯ’ ಕುಡಿಸುವ ಯುವಕರು

Last Updated 21 ಜುಲೈ 2020, 19:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದಲ್ಲಿ ಮಧ್ಯಾಹ್ನ 12ರ ಹೊತ್ತಿಗೆ ಲಾಕ್‌ಡೌನ್ ಜಾರಿಯಾಗುತ್ತಿದ್ದಂತೆ, ಆ ಇಬ್ಬರು ಗೆಳೆಯರು ಸ್ಕೂಟರ್‌ನಲ್ಲಿ ಕಷಾಯದ ಫಿಲ್ಟರ್‌ ಇಟ್ಟುಕೊಂಡು ಮನೆಯಿಂದ ಹೊರಡುತ್ತಾರೆ. ಮುಖ್ಯ ರಸ್ತೆಗಳು, ಬೀದಿ ಹಾಗೂ ಪ್ರಮುಖ ವೃತ್ತಗಳಲ್ಲಿ ಸಂಚರಿಸುವ ಅವರು, ಕರ್ತವ್ಯನಿರತ ಪೊಲೀಸರು ಹಾಗೂ ಗೃಹ ರಕ್ಷಕರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಷಾಯವನ್ನು ಉಚಿತವಾಗಿ ವಿತರಿಸುತ್ತಾರೆ.

ಲಾಕ್‌ಡೌನ್‌ ನಡುವೆಯೂ ಆರಕ್ಷಕರಿಗೆ ನಾಲ್ಕೈದು ದಿನದಿಂದ ಕಷಾಯ ಸೇವೆ ಒದಗಿಸುತ್ತಿರುವವರು ದೇಶಪಾಂಡೆ ನಗರದ ಅನ್ವರ್ ನಾಗನೂರ ಮತ್ತು ಆನಂದನಗರದ ಸಂತೋಷ ಹಡ್ಲಿ. ರೆಸ್ಟೊರೆಂಟ್‌ನಲ್ಲಿ ಮ್ಯಾನೇಜರ್ ಆಗಿದ್ದ ಅನ್ವರ್ ಸ್ವಂತ ಹೋಟೆಲ್ ತೆರೆಯುವ ಸಿದ್ಧತೆಯಲ್ಲಿದ್ದರೆ, ಸಂತೋಷ್ ಎಲೆಕ್ಟ್ರಿಷಿಯನ್ ಆಗಿದ್ದಾರೆ.

‘ಹುಬ್ಬಳ್ಳಿಯ ಬಹುತೇಕ ಠಾಣೆಗಳ ಕೆಲ ಪೊಲೀಸರಿಗೆ ಕೋವಿಡ್ ಬಂದಿದೆ. ಆದರೂ, ತಮ್ಮ ಜೀವ ಲೆಕ್ಕಿಸದೆ ರಸ್ತೆ, ವೃತ್ತಗಳಲ್ಲಿ ನಿಂತು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಕಷಾಯ ಹಂಚುವ ಮೂಲಕ ಕೃತಜ್ಞತೆ ಸಲ್ಲಿಸೋಣ. ಆ ಮೂಲಕ, ಅಳಿಲು ಸೇವೆ ಮಾಡೋಣ ಎಂದು ನಿರ್ಧರಿಸಿದೆವು’ ಎಂದು ಚನ್ನಮ್ಮನ ವೃತ್ತದಲ್ಲಿ ಪೊಲೀಸರಿಗೆ ಕಷಾಯ ವಿತರಿಸುತ್ತಿದ್ದ ಅನ್ವರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ರೋಗ ನಿರೋಧಕ ಶಕ್ತಿಯುಳ್ಳ ಶುಂಠಿ, ಬೆಳ್ಳುಳ್ಳಿ, ಕಾಳು ಮೆಣಸು, ಅರಿಶಿಣ ಹಾಗೂ ಲವಂಗವನ್ನು ನೀರಿನಲ್ಲಿ ಕುದಿಸುತ್ತೇವೆ. ಬಳಿಕ, ಅದಕ್ಕೆ ಜೇನುತುಪ್ಪ ಬೆರೆಸುತ್ತೇವೆ. ವಿದ್ಯಾನಗರ, ಗೋಕುಲ ರಸ್ತೆ, ದೇಶಪಾಂಡೆ ನಗರ, ಕೇಶ್ವಾಪುರ, ಚನ್ನಮ್ಮನ ವೃತ್ತ, ಕೋರ್ಟ್ ವೃತ್ತ, ಅಂಬೇಡ್ಕರ್ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ವಿತರಿಸುತ್ತೇವೆ’ ಎಂದು ಸಂತೋಷ ಹೇಳಿದರು.

‘ಕಷಾಯ ಕೊಡುವುದಕ್ಕೂ ಮುಂಚೆ ಕೈಗೆ ಸ್ಯಾನಿಟೈಸರ್ ಸಿಂಪಡಿಸುತ್ತೇವೆ. ಮಧ್ಯಾಹ್ನ 12ಕ್ಕೆ ಹೊರಟರೆ, 2ರ ಹೊತ್ತಿಗೆ ಒಂದು ಫಿಲ್ಟರ್ ಕಷಾಯ ಖಾಲಿಯಾಗುತ್ತದೆ. ನಿತ್ಯ ಕನಿಷ್ಠ 150 ಮಂದಿಗೆ ವಿತರಿಸುತ್ತೇವೆ. ಇದಕ್ಕಾಗಿ ನಿತ್ಯ ₹ 500 ಖರ್ಚಾಗುತ್ತದೆ. ಬುಧವಾರದಿಂದ ವಿದ್ಯಾನಗರ ಮತ್ತು ಕಾಟನ್‌ ಮಾರ್ಕೆಟ್‌ನಲ್ಲಿರುವ ಸಂಚಾರ ಪೊಲೀಸ್ ಠಾಣೆಗೂ ಕೊಡುತ್ತೇವೆ. ಲಾಕ್‌ಡೌನ್ ಮುಗಿಯುವವರೆಗೆ ವಿತರಿಸಲು ನಿರ್ಧರಿಸಿದ್ದೇವೆ. ನಮ್ಮ ಈ ಸೇವೆಗೆ ಪೊಲೀಸರೂ ಮೆಚ್ಚುಗೆ ವ್ಯಕ್ತಪಡಿಸಿ, ಬೆನ್ನು ತಟ್ಟಿದ್ದಾರೆ’ ಎಂದು ಇಬ್ಬರೂ ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT