ಹುಬ್ಬಳ್ಳಿ: ಹಿಂದುಳಿದ ಮುಸ್ಲಿಂ ಸಮುದಾಯದ 2ಬಿ ಮೀಸಲಾತಿಯನ್ನು ರದ್ದುಪಡಿಸಿ, ಇಡಬ್ಲ್ಯೂಎಸ್ ಗೆ ಸೇರಿಸಿರುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧದ ಹೋರಾಟದ ನೇತೃತ್ವವನ್ನು ಕೂಡಲಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ, ಹರಿಹರ ಪೀಠದ ವಚನಾನಂದ ಸ್ವಾಮೀಜಿ ಹಾಗೂ ಆದಿಚುಂಚನಗಿರಿಯ ನಿರ್ಮಲಾನಂದ ಸ್ವಾಮೀಜಿ ವಹಿಸಿಕೊಳ್ಳಬೇಕು ಎಂದು ಮುಸ್ಲಿಂ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಮುಸ್ತಫಾ ಕುನ್ನಿಭಾವಿ ಮನವಿ ಮಾಡಿದರು.
ನಗರದಲ್ಲಿ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಂ ಸಮುದಾಯವು ಲಿಂಗಾಯತರು ಮತ್ತು ಒಕ್ಕಲಿಗರೊಂದಿಗೆ ಸಹೋದರ ಸಂಬಂಧ ಹೊಂದಿದೆ. ಅವರ ಮೀಸಲಾತಿ ಬೇಡಿಕೆ ನ್ಯಾಯೋಚಿತವಾಗಿದೆ. ಆದರೆ, ನಮ್ಮ ಮೀಸಲಾತಿ ಕಿತ್ತು ಹಾಕಿ, ಅವೆರಡೂ ಸಮುದಾಯಗಳಿಗೆ ಹಂಚಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹೋದರರ ನಡುವೆ ಜಗಳ ಹಚ್ಚುವ ಪ್ರಯತ್ನ ಮಾಡಿದ್ದಾರೆ. ಅದು ಎಂದಿಗೂ ಸಾಧ್ಯವಿಲ್ಲ ಎಂದು ಹೇಳಿದರು.
ರಾಜಕೀಯ ಕಾರಣಕ್ಕಾಗಿ ಸಮುದಾಯಗಳ ನಡುವೆ ದ್ವೇಷ ಭಾವನೆ ಹುಟ್ಟಿಸುವ ಸರ್ಕಾರದ ಈ ನಡೆಯನ್ನು ಎರಡೂ ಸಮುದಾಯಗಳ ಶ್ರೀಗಳು ಖಂಡಿಸಿ, ಸರ್ಕಾರದ ಕಿವಿ ಹಿಂಡಬೇಕು. ತಮಗೆ ಕೊಟ್ಟಿರುವ ಮೀಸಲಾತಿಯನ್ನು ತಿರಸ್ಕರಿಸಿ, 2ಬಿ ಮೀಸಲಾತಿ ಮುಂದುವರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಸಂದಿಗ್ಧ ಪರಿಸ್ಥಿತಿಯಲ್ಲಿರುವ ಮುಸ್ಲಿಂ ಸಮುದಾಯದ ಜೊತೆ ನಿಂತು ಹೋರಾಟಕ್ಕೆ ಮಾರ್ಗದರ್ಶನ ಮಾಡಬೇಕು ಎಂದು ಪ್ರಾರ್ಥಿಸಿದರು.
ಆಧಾರವೇನು?: ಮುಸ್ಲಿಮರ ಮೀಸಲಾತಿ ತೆಗೆಯುವುದಕ್ಕೆ ಆಧಾರವೇನು? ಇಡಬ್ಲ್ಯೂಎಸ್ ಗೆ ಸೇರಿಸುವ ಕುರಿತು ಯಾವುದಾದರೂ ಅಧ್ಯಯನ ನಡೆಸಲಾಗಿದೆಯೇ? ಮೀಸಲಾತಿಯನ್ನು ಕೈಬಿಡಬೇಕು ಎಂದು ಹಿಂದುಳಿದ ವರ್ಗಗಳ ಆಯೋಗವೇನಾದರೂ ವರದಿ ಕೊಟ್ಟಿದೆಯೇ? ಎಂಬುದರ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರಿಸಬೇಕು ಎಂದು ಒತ್ತಾಯಿಸಿದರು.
ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ, ಸದ್ಯದಲ್ಲೇ ಮೂವರು ಶ್ರೀಗಳನ್ನು ಮುಸ್ಲಿಮರ ನಿಯೋಗ ಭೇಟಿ ಮಾಡಲಿದೆ. ಹೋರಾಟದ ನೇತೃತ್ವ ವಹಿಸುವಂತೆ ಸ್ವಾಮೀಜಿಗಳಿಗೆ ಮನವಿ ಮಾಡಲಿದೆ. ಎರಡನೇ ಹಂತದಲ್ಲಿ ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಗೆ ಪತ್ರ ಚಳವಳಿ ನಡೆಸಲಾಗುವುದು. ರಂಜಾನ್ ಬಳಿಕ, ರಾಜ್ಯದಾದ್ಯಂತ ಮೀಸಲಾತಿ ರಥಯಾತ್ರೆ ಆರಂಭಿಸಲಾಗುವುದು. ಉತ್ತರ ಭಾಗದ ಕೂಡಲಸಂಗಮದಲ್ಲಿ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ದಕ್ಷಿಣದಲ್ಲಿ ಆದಿಚುಂಚನಗಿರಿಯಿಂದ ನಿರ್ಮಲಾನಂದ ಸ್ವಾಮೀಜಿ ಅವರು ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದರು.
ವಕೀಲ ಜೀವನ್ ಮುಳ್ಳೋಳ್ಳಿ ಮಾತನಾಡಿ, ಸಂವಿಧಾನದ ಅನುಚ್ಛೇದ 15(4) ಹಾಗೂ 16(4)ರಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ದೇಶದ ನಾಗರಿಕರಿಗೆ ಮೀಸಲಾತಿ ನೀಡಬೇಕು ಎಂದು ಉಲ್ಲೇಖಿಸಲಾಗಿದೆ. ಆದರೆ, ಧಾರ್ಮಿಕ ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ ಸರ್ಕಾರ ಹಿಂದುಳಿದ ವರ್ಗಗಳ ಪಟ್ಟಿಯಿಂದ ಮುಸ್ಲಿಮರನ್ನು ಕೈಬಿಟ್ಟಿರುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೀಸಲಾತಿಯನ್ನೇ ರದ್ದುಪಡಿಸಬೇಕು ಎಂಬ ಹುನ್ನಾರದ ಭಾಗವಾಗಿ ಮುಸ್ಲಿಮರ 2ಬಿ ಮೀಸಲಾತಿ ರದ್ದುಪಡಿಸಿ ಇಡಬ್ಲ್ಯೂಎಸ್ ನಡಿ ಅವರನ್ನು ತರಲಾಗಿದೆ. ಇದಕ್ಕೆ ಹಿಂದಿನ ಶೇ 4ಕ್ಕಿಂತ ಈಗ ಶೇ 10 ರಷ್ಟು ಮೀಸಲಾತಿ ಕೊಡಲಾಗಿದೆ ಎಂದು ಮುಖ್ಯಮಂತ್ರಿ ಸಮಜಾಯಿಷಿ ನೀಡಲಾಗುತ್ತಿದೆ. ಬೇರೆಯವರ ತಟ್ಟೆಯ ಅನ್ನವನ್ನು ಕಸಿದುಕೊಂಡು ಇನ್ನೊಬ್ಬರಿಗೆ ಕೊಡುವುದು ಎಷ್ಟು ಸರಿ? ಈಗ ಮುಸ್ಲಿಮರ ಮೀಸಲಾತಿ ಕಿತ್ತುಕೊಂಡಿರುವ ಸರ್ಕಾರ, ಮುಂದೆ ಮತ್ತೊಂದು ಸಮುದಾಯದ ಮೀಸಲಾತಿ ಕಿತ್ತುಕೊಳ್ಳುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ. ಈ ಅನ್ಯಾಯದ ವಿರುದ್ಧ ಮೀಸಲಾತಿ ಪಡೆಯುತ್ತಿರುವ ಎಲ್ಲಾ ಸಮುದಾಯಗಳು ದನಿ ಎತ್ತಬೇಕು ಎಂದು ಒತ್ತಾಯಿಸಿದರು.
ಸಮಿತಿಯ ನದಿಮುಲ್ಲಾ, ಅಲ್ಲಾಸಾಬಾ ತಹಸೀಲ್ದಾರ, ಇಮಾಮಸಾಬ, ಮಕಬುಲ್ ಮುಲ್ಲಾ ಹಾಗೂ ನಾಸಿರ್ ಹುಸೇನ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.