ಶನಿವಾರ, ಡಿಸೆಂಬರ್ 7, 2019
22 °C

3 ಟೆಸ್ಲಾ ಎಂಆರ್‌ಐ ಯಂತ್ರದ ಉದ್ಘಾಟನೆ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನಗರದ ಕ್ಲಬ್‌ ರಸ್ತೆಯಲ್ಲಿರುವ ಎನ್‌ಎಂಆರ್‌ ಸ್ಕ್ಯಾನ್‌ ಸೆಂಟರ್‌ನಲ್ಲಿ ಸೆ. 21ರಂದು ಸಂಜೆ 6.30ಕ್ಕೆ 3 ಟೆಸ್ಲಾ (ಆಯಸ್ಕಾಂತದ ಮಾಪಕ ಘಟಕ) ಎಂಆರ್‌ಐ ಯಂತ್ರದ ಉದ್ಘಾಟನೆ ಜರುಗಲಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ಕ್ಯಾನ್‌ ಸೆಂಟರ್‌ನ ಆಡಳಿತ ಮಂಡಳಿ ನಿರ್ದೇಶಕ ಡಾ. ರವಿ ಕಲಘಟಗಿ ‘ಎಂಆರ್‌ಐ ಬಂದ ಆರಂಭದ ವರ್ಷಗಳಲ್ಲಿ 0.6 ಟೆಸ್ಲಾ ಯಂತ್ರದ ಪರೀಕ್ಷೆಯೇ ಬಹಳ ದೊಡ್ಡದು ಎಂದು ಭಾವಿಸಲಾಗುತ್ತಿತ್ತು. ಈಗ ಹೊಸ ಆವಿಷ್ಕಾರಗಳಾಗಿವೆ. 3 ಟೆಸ್ಲಾ ಬಂದಿದ್ದು, ಇದನ್ನು ನಮ್ಮ ಕೇಂದ್ರದಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ’ ಎಂದರು.

‘ಹೊಸ ಯಂತ್ರಕ್ಕೆ ₹10ಕೋಟಿ ವೆಚ್ಚವಾಗಿದೆ. ದಿನಕ್ಕೆ ಗರಿಷ್ಠ 60 ರೋಗಿಗಳನ್ನು ಪರೀಕ್ಷಿಸಬಹುದು. ರೋಗ ಪತ್ತೆ ಹಚ್ಚುವಿಕೆ ಮತ್ತು ವೇಗವಾಗಿ ಚಿಕಿತ್ಸೆ ಆರಂಭಿಸಲು ಇದರಿಂದ ಸಾಧ್ಯವಾಗಲಿದೆ’ ಎಂದರು.

ಆಡಳಿತ ಮಂಡಳಿ ನಿರ್ದೇಶಕ ಡಾ. ಸುರೇಶ ಎಂ. ದುಗ್ಗಾಣಿ ‘3 ಟೆಸ್ಲಾ ಎಂಆರ್‌ಐ ಅತ್ಯಂತ ಶಕ್ತಿಶಾಲಿ ಯಂತ್ರವಾಗಿದ್ದು, ಶರೀರದ ಎಲ್ಲ ಭಾಗಗಳ ರೋಗ ನಿರ್ಣಯ, ಸೂಕ್ಷ್ಮತೆ, ನಿಖರತೆಯ ಸ್ಪಷ್ಟವಾದ ಚಿತ್ರಣ ನೀಡಲಿದೆ. ಪಾರ್ಶ್ವವಾಯು ಪ್ರಾರಂಭದ ಲಕ್ಷಣಗಳನ್ನು ತಿಳಿಯಬಹುದು’ ಎಂದರು.

ಹುಬ್ಬಳ್ಳಿಯಲ್ಲಿರುವ 1.5 ಟೆಸ್ಲಾ ಯಂತ್ರವನ್ನು ಧಾರವಾಡದ ಪಿ.ಬಿ. ರಸ್ತೆಯಲ್ಲಿರುವ ಎನ್‌ಎಂಆರ್‌ ಕೇಂದ್ರಕ್ಕೆ ಸ್ಥಳಾಂತರಿಸಲಾಗುವುದು. ಇಷ್ಟು ದಿನ ಅಲ್ಲಿ ಈ ಸೌಲಭ್ಯ ಇರಲಿಲ್ಲ ಎಂದು ಹೇಳಿದರು. ಇದರ ಉದ್ಘಾಟನೆ 21ರಂದೇ ಬೆ. 11 ಗಂಟೆಗೆ ಜರುಗಲಿದೆ.

ಹುಬ್ಬಳ್ಳಿಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಉದ್ಘಾಟಿಸಲಿದ್ದಾರೆ. ಸಚಿವರಾದ ಜಗದೀಶ ಶೆಟ್ಟರ್‌, ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಬೊಮ್ಮಾಯಿ, ಶಾಸಕ ಪ್ರಸಾದ ಅಬ್ಬಯ್ಯ ಮತ್ತು ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಸಚಿವ ಡಾ. ಸಚ್ಚಿದಾನಂದ ಪಾಲ್ಗೊಳ್ಳಲಿದ್ದಾರೆ. ಕೇಂದ್ರದ ಚೇರ್ಮನ್‌ ಡಾ. ಎಂ.ಎಂ. ಜೋಶಿ ಅಧ್ಯಕ್ಷತೆ ವಹಿಸಲಿದ್ದಾರೆ.

ಆಡಳಿತ ಮಂಡಳಿ ನಿರ್ದೇಶಕರಾದ ಡಾ. ಎ.ಬಿ. ಕಲಮದಾನಿ, ಡಾ. ರಾಘವೇಂದ್ರ ತೋಫಖಾನೆ, ವೀಣಾ ಮಂಗಳವೇಡೆ ಮತ್ತು ಡಾ. ನರೇಂದ್ರಕುಮಾರ ಎಂ. ಷಾ ಇದ್ದರು.

ಪ್ರತಿಕ್ರಿಯಿಸಿ (+)