ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿಗೆ ಬಂದ 50 ಅಂತರರಾಜ್ಯ ಕಾರ್ಮಿಕರು

ಮಂಗಳೂರಿನಲ್ಲಿ ವಿವಿಧ ಕೆಲಸ ಮಾಡಿಕೊಂಡಿದ್ದರು
Last Updated 9 ಮೇ 2020, 9:58 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಂಗಳೂರಿನಲ್ಲಿ ಕಟ್ಟಡ ನಿರ್ಮಾಣ, ಪ್ಲಂಬಿಂಗ್ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಿಕೊಂಡಿದ್ದ ಅಂದಾಜು 50 ಅಂತರರಾಜ್ಯ ಕಾರ್ಮಿಕರು ತಮ್ಮ ಊರುಗಳಿಗೆ ತೆರಳುವುದಕ್ಕಾಗಿ ಶನಿವಾರ ಹುಬ್ಬಳ್ಳಿಗೆ ಬಂದಿದ್ದಾರೆ. ಮಧ್ಯಪ್ರದೇಶ, ಉತ್ತರಪ್ರದೇಶ, ರಾಜಸ್ಥಾನಗಳ ಈ ಕಾರ್ಮಿಕರು ಮಂಗಳೂರಿನಿಂದ ನಡೆದುಕೊಂಡು ಹುಬ್ಬಳ್ಳಿಯತ್ತ ಪಯಣ ಬೆಳೆಸಿದ್ದಾರೆ. ಮಾರ್ಗ ಮಧ್ಯೆ ಸಿಕ್ಕ ವಾಹನಗಳನ್ನು ಹತ್ತಿಕೊಂಡು ಗೋಕುಲ ರಸ್ತೆಯಲ್ಲಿರುವ ಬಸ್ ನಿಲ್ದಾಣವನ್ನು ಬೆಳಿಗ್ಗೆ ತಲುಪಿಸಿದ್ದಾರೆ.

ಈ ಪೈಕಿ, ಕೆಲವರು ತಮ್ಮ ಊರಿಗೆ ಹೋಗಲು ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ಕೂಡ ನೋಂದಣಿ ಮಾಡಿಕೊಂಡಿದ್ದಾರೆ. ಕಾರ್ಮಿಕರನ್ನು ಅವರ ಊರುಗಳಿಗೆ ಕಳಿಸುವುದರ ಬಗ್ಗೆ ಜಿಲ್ಲಾಡಳಿತ ಚಿಂತನೆ ನಡೆಸುತ್ತಿದೆ. ಅಲ್ಲದೆ, ವಾಯವ್ಯ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಅವರನ್ನು ಕಳಿಸುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ. ಆದರೆ, ಅದಕ್ಕೆ ತಗುಲುವ ವೆಚ್ಚವನ್ನು ಕಾರ್ಮಿಕರಿಂದಲೇ ಭರಿಸಬೇಕೇ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ.

ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರ ಅಳಲು ಆಲಿಸಿದ ಕಾಂಗ್ರೆಸ್ ಮುಖಂಡ ಹಾಗೂ ಜೈನ್ ಅಸೋಸಿಯೇಷನ್ ಅಧ್ಯಕ್ಷರೂ ಆಗಿರುವ ಮಹೇಂದ್ರ ಸಿಂಘಿ, ‘ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವಿದೇಶಗಳಲ್ಲಿರುವವರನ್ನು ಸ್ವದೇಶಕ್ಕೆ ಕರೆಯಿಸಿಕೊಳ್ಳುವ ಕೇಂದ್ರ ಸರ್ಕಾರ, ವಿವಿಧೆಡೆ ಸಿಲುಕಿರುವ ಅಂತರರಾಜ್ಯ ಕಾರ್ಮಿಕರನ್ನು ಮಾತ್ರ ಅವರ ಊರುಗಳಿಗೆ ಕಳಿಸಲು ಅಗತ್ಯ ವ್ಯವಸ್ಥೆ ಮಾಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಹುಬ್ಬಳ್ಳಿಗೆ ಬಂದಿರುವ 50 ಕಾರ್ಮಿಕರನ್ನು ಅವರ ಊರಿಗೆ ಕಳಿಸಲು ನಮ್ಮ ರಾಜ್ಯ ಸರ್ಕಾರ, ಸಂಬಂಧಪಟ್ಟ ರಾಜ್ಯಗಳ ಜತೆ ಮಾತುಕತೆ ನಡೆಸಬೇಕು. ಕಾರ್ಮಿಕರನ್ನು ಅವರ ಊರಿಗೆ ಕಳಿಸಲು ತಗುಲುವ ವೆಚ್ಚವನ್ನು ಎರಡೂ ಸರ್ಕಾರಗಳು ಭರಿಸಬೇಕು’ ಎಂದು ಒತ್ತಾಯಿಸಿದರು.

ಸ್ಥಳಕ್ಕೆ ತಾಲ್ಲೂಕು ಆಡಳಿತದ ಅಧಿಕಾರಗಳು ಭೇಟಿ ನೀಡಿ ಕಾರ್ಮಿಕರ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೆ, ವೈದ್ಯಕೀಯ ಸಿಬ್ಬಂದಿ ಕಾರ್ಮಿಕರ ಥರ್ಮಲ್ ಸ್ಕ್ರೀನಿಂಗ್ ನಡೆಸಿದರು. ಬಳಿಕ, ಎಲ್ಲರನ್ನೂ ಪ್ರತ್ಯೇಕವಾಗಿ ಕೂರಿಸಲಾಗಿತ್ತು.

ಲಾಕ್‌ಡೌನ್ ಆದಾಗಿನಿಂದ ಮಾಲೀಕರೇ ನಮ್ಮನ್ನು ನೋಡಿಕೊಂಡಿದ್ದರು. ಇದೀಗ, ಲಾಕ್‌ಡೌನ್ ಸಡಿಲಿಕೆಯಾದ ನಂತರ ನಾವು ಊರಿಗೆ ಹೊರಟು ಬಂದೆವು. ಬಡವರಾದ ನಮ್ಮನ್ನು ಊರಿಗೆ ಕಳಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕಾರ್ಮಿಕರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT