ಬಂದ್‌: ವಿವಿಧ ಪಕ್ಷ, ಸಂಘಟನೆಗಳಿಂದ ಹಲವು ರೀತಿಯಲ್ಲಿ ಧರಣಿ

7

ಬಂದ್‌: ವಿವಿಧ ಪಕ್ಷ, ಸಂಘಟನೆಗಳಿಂದ ಹಲವು ರೀತಿಯಲ್ಲಿ ಧರಣಿ

Published:
Updated:
Deccan Herald

ಧಾರವಾಡ: ಸೋಮವಾರ ಜರುಗಿದ ಭಾರತ್‌ ಬಂದ್‌ನಲ್ಲಿ ವಿವಿಧ ಪಕ್ಷ ಹಾಗೂ ಸಂಘಟನೆಗಳು ತಮ್ಮದೇ ರಿತಿಯಲ್ಲಿ ಧರಣಿ ನಡೆಸಿ ಜನರ ಗಮನ ಸೆಳೆದವು.

ಎಸ್‌ಯುಸಿಐ, ಸಿಇಐಎಂ ಹಾಗೂ ಸಿಪಿಐ ಸೇರಿದಂತೆ ಎಡಪಕ್ಷಗಳು ಪ್ರತಿಭಟನಾ ರ‍್ಯಾಲಿ ನಡೆಸಿ, ಜ್ಯುಬಿಲಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರದ ದಮನಕಾರಿ ನೀತಿಯನ್ನು ಖಂಡಿಸಿದವು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಯುಸಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ‘ರೈತರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸುತ್ತೇವೆ ಎಂದಿದ್ದ ಕೇಂದ್ರ, ತನ್ನ ಮಾತನಂತೆ ನಡೆದುಕೊಂಡಿಲ್ಲ. ಜಿಎಸ್‌ಟಿಯನ್ನು ಅವೈಜ್ಞಾನಿಕವಾಗಿ ಜಾರಿಗೊಳಿಸಲಾಗಿದೆ. ನಿಯಂತ್ರಣವಿಲ್ಲದೆ ಏರುತ್ತಿರುವ ಬೆಲೆಯಿಂದಾಗಿ ಸಾಮಾನ್ಯ ಜನ ತತ್ತರಿಸಿದ್ದಾರೆ. ದೇಶದ ಸಂಪತ್ತು ಲೂಟಿ ಮಾಡುವವರಿಗೆ ಕಾನೂನುಗಳನ್ನು ರಚಿಸಿ ಕೇಂದ್ರ ಸರ್ಕಾರ ಅನುಕೂಲ ಮಾಡಿಕೊಡುತ್ತಿದೆ. ಈ ಎಲ್ಲದರ ಮೂಲಕ ತಾನು ಬಂಡವಾಳಶಾಹಿಗಳ ಸೇವಕ ಎಂಬುದನ್ನು ಪ್ರಧಾನಿ ತೋರಿಸಿಕೊಟ್ಟಿದ್ದಾರೆ’ ಎಂದು ಆರೋಪಿಸಿದರು.

‘ಏರಿರುವ ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯೇರಿಕೆಯನ್ನು ಕೇಂದ್ರ ಸರ್ಕಾರ ನಿಯಂತ್ರಿಸಬೇಕು. ಮುಂದಿನ ದಿನಗಳಲ್ಲಿ ಜನವಿರೋಧಿ ನೀತಿಗಳ ವಿರುದ್ಧ ಉಗ್ರ ಹೋರಾಟವನ್ನು ನಡೆಸಲು ಜನತೆ ಸಿದ್ದರಾಗಬೇಕು’ ಎಂದರು.

ಜಿ.ಎಚ್‌.ಕರಿಯಣ್ಣವರ್, ಉದಯ ಗದಗಕರ್, ಎ.ಎಂ.ಖಾನ್, ಪ್ಯಾಟಿ ಶೆಟ್ಟರ್, ಲಕ್ಷ್ಮಣ ಜಡಗನ್ನವರ, ಭುವನಾ, ದೀಪಾ, ಶರಣು ಗೋನವಾರ, ರಮೇಶ ಹೊಸಮನಿ ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. 

ಜಿಡಿಎಸ್ ಮುಖಂಡ ಎನ್.ಎಚ್.ಕೋನರಡ್ಡಿ ಟಾಂಗಾ ಹತ್ತಿ ನಗರದ ಮಾರುಕಟ್ಟೆ ಪ್ರದೇಶದಲ್ಲಿ ಸಂಚರಿಸಿ ಬೆಲೆ ಏರಿಕೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ವಿವಿಧಪಕ್ಷಗಳ ಮುಖಂಡರು ನಿಂತ ಕಾರು ಹಾಗೂ ಆಟೋರಿಕ್ಷಾಗಳನ್ನು ಹಗ್ಗದಿಂದ ಎಳೆಯುತ್ತಾ ಕೇಂದ್ರದ ಬೆಲೆ ಏರಿಕೆಯನ್ನು ಖಂಡಿಸಿ ವಿನೂತನವಾಗಿ ಪ್ರತಿಭಟಿಸಿ ಗಮನ ಸೆಳೆದರು.

ಕನ್ನಡಪರ ಸಂಘಟನೆಗಳಾದ ಕರ್ನಾಟಕ ನವನಿರ್ಮಾಣ ಸೇನೆ ಸೇರಿದಂತೆ ಹಲವು ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿದರು. ವಿನೂತನ ಮಾದರಿಯಲ್ಲಿ ಧರಣಿ ನಡೆಸುವಲ್ಲಿ ಇವರೂ ಹಿಂದೆ ಬೀಳಲಿಲ್ಲ. ಟೈಯರ್‌ಗೆ ಬೆಂಕಿ ಹಚ್ಚಿದ್ದರಿಂದ ದಟ್ಟ ಹೊಗೆ ಆವರಿಸಿತ್ತು. 

ಬೆಳಿಗ್ಗೆಯಿಂದ ಬಂದ್ ಇದ್ದ ಅಂಗಡಿಗಳು ಸಂಜೆ 5ರ ನಂತರ ತೆರೆದವು. ಬಸ್ಸುಗಳೂ ಸಂಜೆ ಸಂಚರಿಸಿದವು. ಬಂದ್‌ನಿಂದ ಪರ ಊರಿಗೆ ಹೋಗುವ ಸಾರ್ವಜನಿಕರು ಪರದಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !