ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಲೋಕಸಭಾ ಕ್ಷೇತ್ರ: ಮೋದಿ ಅಲೆಯಲ್ಲಿ ಕೊಚ್ಚಿ ಹೋದ ಜಾತಿ ಲೆಕ್ಕಾಚಾರ

ಪ್ರಹ್ಲಾದ ಜೋಶಿ ಗೆಲುವಿನ ಅಂತರ 2.05 ಲಕ್ಷ ಮತ: ವಿನಯ ಕುಲಕರ್ಣಿಗೆ ಮುಖಭಂಗ
Last Updated 24 ಮೇ 2019, 14:44 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಜಾತಿ ಆಧಾರದ ಮೇಲೆ ‘ಮತದಾರ ಪ್ರಭು’ ವೋಟ್ ಹಾಕುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ನಿರೀಕ್ಷೆಯಂತೆ ಬಿಜೆಪಿಯ ಪ್ರಹ್ಲಾದ ಜೋಶಿ ಸತತ 4ನೇ ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದು, ಕಾಂಗ್ರೆಸ್‌ನ ವಿನಯ ಕುಲಕರ್ಣಿ ಮತ್ತೆ ಮುಖಭಂಗ ಅನುಭವಿಸಿದ್ದಾರೆ.

2014ರ ಲೋಕಸಭೆ, 2018ರ ವಿಧಾನಸಭೆ ಹಾಗೂ ಈಗಿನ ಲೋಕಸಭಾ ಚುನಾವಣೆ– ಸತತ ಮೂರು ಚುನಾವಣೆಗಳಲ್ಲಿ ಸೋತಿದ್ದರ ಅನುಕಂಪ ಕೂಡ ವಿನಯ್ ಕೈಹಿಡಿದಿಲ್ಲರುವುದು ಅವರ ರಾಜಕೀಯ ಭವಿಷ್ಯ ಮಂಕು ಮಾಡಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ 1.14 ಲಕ್ಷ ಮತಗಳ ಅಂತರದಿಂದ ಜೋಶಿ ವಿರುದ್ಧ ಸೋತಿದ್ದ ವಿನಯ್‌ ಈ ಬಾರಿ ಸೋಲಿನ ಅಂತರವನ್ನು 2.05 ಲಕ್ಷ ಮತಗಳಿಗೆ ಹೆಚ್ಚಿಸಿಕೊಂಡಿರುವುದೇ ದೊಡ್ಡ ‘ಸಾಧನೆ’! ನರೇಂದ್ರ ಮೋದಿ ಅಲೆ ಮುಂದೆ ವಿನಯ್‌ ಅವರ ಲಿಂಗಾಯತ ಜಾತಿ ಲೆಕ್ಕಾಚಾರ ಮಕಾಡೆ ಮಲಗಿದೆ.

ವೀರಶೈವರು ಬಿಜೆಪಿ ಪರ ಇದ್ದಾರೆ ಎಂಬುದನ್ನು ಮನಗಂಡ ಕಾಂಗ್ರೆಸ್‌ ಮುಖಂಡರು ಅದರ ಮತಬ್ಯಾಂಕ್‌ಗೆ ಕೈಹಾಕಲು 2018ರ ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೆ ಚಾಲನೆ ನೀಡಿದರು. ಇದರ ನೇತೃತ್ವವಹಿಸಿದ್ದವರಲ್ಲಿ ವಿನಯ್‌ ಕೂಡ ಒಬ್ಬರು. ರಾಜ್ಯದ ಹಲವು ಕಡೆ ಸಭೆಗಳನ್ನು ಮಾಡಿ ಕಾಂಗ್ರೆಸ್‌ ಪರ ಲಿಂಗಾಯತರನ್ನು ಒಟ್ಟುಗೂಡಿಸುವ ಪ್ರಯತ್ನ ಮಾಡಿದರು. ಆದರೆ, ವಿಧಾನಸಭೆ ಚುನಾವಣೆ ಫಲಿತಾಂಶ ಬಂದಾಗ ಅದ್ಯಾವುದೂ ಕೆಲಸ ಮಾಡಲಿಲ್ಲ ಎಂಬುದು ಗೊತ್ತಾಯಿತು. ಹೋರಾಟದ ಮುಂಚೂಣಿಯಲ್ಲಿದ್ದ ವಿನಯ್‌ ಅವರೇ ಹೀನಾಯ ಸೋಲುಂಡರು. ಆ ನಂತರ ಆರೋಪ– ಪ್ರತ್ಯಾರೋಪಗಳು ಕಾಂಗ್ರೆಸ್‌ ಒಳಗೇ ಸದ್ದು ಮಾಡಿದವು. ‘ಪ್ರತ್ಯೇಕ ಧರ್ಮ ಹೋರಾಟ ಮಾಡಿದ್ದೇ ಕಾಂಗ್ರೆಸ್‌ ಗೆಲುವಿಗೆ ಮುಳುವಾಯಿತು’ ಎಂದು ಸಚಿವ ಡಿ.ಕೆ.ಶಿವಕುಮಾರ್‌ ಬಹಿರಂಗವಾಗಿ ಹೇಳಿದ್ದು ವಿವಾದದ ಕಿಡಿಹೊತ್ತಿಸಿತ್ತು. ನಂತರ ಅವರು ಈ ಸಂಬಂಧ ವೀರಶೈವರಲ್ಲಿ ಬಹಿರಂಗ ಕ್ಷಮೆ ಕೇಳಿ, ಮತ್ತೊಂದು ವಾಗ್ವಾದಕ್ಕೂ ಕಾರಣರಾದರು.

ಇಷ್ಟೆಲ್ಲ ಆಗು– ಹೋಗುಗಳ ಮಧ್ಯೆ ಕೊನೆ ಕ್ಷಣದಲ್ಲಿ ವಿನಯ ಕುಲಕರ್ಣಿ ಅವರಿಗೆ ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್‌ ನೀಡಲಾಯಿತು. ಹಾವೇರಿ ಕ್ಷೇತ್ರದಲ್ಲಿ ಮುಸ್ಲಿಮರಿಗೆ ಟಿಕೆಟ್‌ ನೀಡದ ಕಾರಣ ಕನಿಷ್ಠ ಧಾರವಾಡದಲ್ಲಿಯಾದರೂ ಅವರಿಗೆ ಟಿಕೆಟ್‌ ಕೊಟ್ಟು ಸಮಾಧಾನ ಮಾಡಬೇಕು ಎನ್ನುವ ಚರ್ಚೆಗಳು ನಡೆಯುತ್ತಿದ್ದಾಗಲೇ ‘ಲಿಂಗಾಯತ– ಪಂಚಮಸಾಲಿ’ ಎನ್ನುವ ಕಾರಣಕ್ಕೆ ವಿನಯ್‌ ಅವರಿಗೆ ಮಣೆ ಹಾಕಲಾಯಿತು. ಹೀಗಾಗಿ ಚುನಾವಣೆಯಲ್ಲಿ ಮುಸ್ಲಿಮರು ಕೂಡ ಕಾಂಗ್ರೆಸ್‌ ಕೈಹಿಡಿಯಲಿಲ್ಲ ಎಂಬುದು ಸ್ಥಳೀಯ ಮುಖಂಡರೊಬ್ಬರ ಅಭಿಪ್ರಾಯ.

ಧಾರವಾಡ ಕ್ಷೇತ್ರದಲ್ಲಿ ಲಿಂಗಾಯತರು ಗಣನೀಯ ಸಂಖ್ಯೆಯಲ್ಲಿರುವುದು ಸತ್ಯ. ಪ್ರಭಾವ ಬೀರುವಷ್ಟು ಪ್ರಬಲರೂ ಹೌದು. ಆದರೆ, ಕ್ಷೇತ್ರದ ಚುನಾವಣಾ ಇತಿಹಾಸವನ್ನು ಗಮನಿಸಿದರೆ, ಎಂದೂ ಇಲ್ಲಿ ಜಾತಿ ಎನ್ನುವುದು ಕೆಲಸ ಮಾಡಿಲ್ಲ. 1991ರ ಈದ್ಗಾ ವಿವಾದದ ನಂತರ ಇಲ್ಲಿ ಜಾತಿಗಿಂತ ದೇಶ ಮುಖ್ಯ ಎನ್ನುವ ಮಾತಿಗೆ ಮತದಾರರು ಹೆಚ್ಚು ಒತ್ತು ಕೊಟ್ಟಂತಿದೆ. 1996ರ ನಂತರ ಈ ಕ್ಷೇತ್ರದಲ್ಲಿ ಸತತವಾಗಿ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲುತ್ತಾ ಬಂದಿದ್ದಾರೆ. ವ್ಯಕ್ತಿ ಯಾರೇ ಇದ್ದರೂ ಪಕ್ಷ ಮುಖ್ಯ ಎಂದು ಇಲ್ಲಿನ ಮತದಾರರು ಬಿಜೆಪಿಯನ್ನು ಅಪ್ಪಿಕೊಂಡಿದ್ದಾರೆ. ವಿಜಯ ಸಂಕೇಶ್ವರ್‌ ಅವರು ಸತತ ಮೂರು ಬಾರಿ ಗೆದ್ದಿದ್ದರು. ಅವರು ಬಿಜೆಪಿ ಬಿಟ್ಟ ಮೇಲೆ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಪ್ರಹ್ಲಾದ ಜೋಶಿ ಬಿಜೆಪಿ ಅಭ್ಯರ್ಥಿಯಾದರು. ಅವರ ವಿರುದ್ಧ ಲಿಂಗಾಯತ ಸಮುದಾಯದವರನ್ನೇ ಪ್ರತಿಪಕ್ಷಗಳು ಕಣಕ್ಕೆ ಇಳಿಸಿದರೂ ಮತದಾರರು ಅದಕ್ಕೆ ಬೆಂಬಲ ನೀಡಲಿಲ್ಲ. ಬದಲಿಗೆ, ಜೋಶಿಯವರ ಗೆಲುವಿನ ಅಂತರ ಪ್ರತಿ ಬಾರಿಯೂ ಹೆಚ್ಚಾಯಿತು. ಇದು ಈ ಕ್ಷೇತ್ರದ ವಿಶೇಷ. ಇಂತಹ ಸನ್ನಿವೇಶದಲ್ಲೂ ಕಾಂಗ್ರೆಸ್‌ನವರು ಜಾತಿಯ ಗಾಳ ಉರುಳಿಸಲು ಹೋಗಿ ನೆಲಕ್ಕುರುಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT