ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

67 ಸಾಧಕರಿಗೆ ಧೀಮಂತ ಪ್ರಶಸ್ತಿ ಪ್ರದಾನ ಇಂದು

‘ಡೆಕ್ಕನ್‌ ಹೆರಾಲ್ಡ್‌’ ಮುಖ್ಯ ವರದಿಗಾರ ರಾಜು ಬಿಜಾಪೂರ ಸೇರಿ ಹಲವರಿಗೆ ಗೌರವ
Last Updated 1 ನವೆಂಬರ್ 2022, 6:27 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಶಿಕ್ಷಣ, ವೈದ್ಯಕೀಯ, ಮಾಧ್ಯಮ, ಕ್ರೀಡೆ, ಜಾನಪದ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 67 ಸಾಧಕರನ್ನು ಹು–ಧಾ ಮಹಾನಗರ ಪಾಲಿಕೆಗುರುತಿಸಿ, ಧೀಮಂತ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಪಾಲಿಕೆ ಆಯುಕ್ತರ ಸಭಾಭವನದಲ್ಲಿ ಸೋಮವಾರ ಆಯ್ಕೆ ಸಮಿತಿ ಅಧ್ಯಕ್ಷೆ, ಉಪಮೇಯರ್‌ ಉಮಾ ಮುಕುಂದ ಸೋಮವಾರ ಸುದ್ದಿಗೋಷ್ಠಿ ನಡೆಸಿ, ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಬಿಡುಗಡೆ ಮಾಡಿದರು. ನ. 1ರಂದು ಸಂಜೆ 5.30ಕ್ಕೆ ಇಂದಿರಾ ಗಾಜಿನ ಮನೆ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

‘ಅವಳಿನಗರದಲ್ಲಿ 10 ವರ್ಷಕ್ಕಿಂತ ಹೆಚ್ಚು ವಾಸವಿದ್ದು 50 ವರ್ಷ ಮೇಲ್ಪಟ್ಟ ಸಾಧಕರನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ. ವಿವಿಧ ಕ್ಷೇತ್ರಗಳಿಂದ 170ಕ್ಕೂ ಹೆಚ್ಚು ಸಾಧಕರನ್ನು ಗುರುತಿಸಿ, 24 ಕ್ಷೇತ್ರಗಳಲ್ಲಿನ 67 ಸಾಧಕರನ್ನು ಅಂತಿಮಗೊಳಿಸಲಾಗಿದೆ. ರಾಜಕೀಯೇತರ ವ್ಯಕ್ತಿಗಳನ್ನು ಆಯ್ಕೆ ಮಾಡಿದ್ದು, ಕ್ಷೇತ್ರಗಳಲ್ಲಿನ ಅವರ ಜನಪ್ರಿಯತೆ, ಸಾಧನೆ ಪರಿಗಣಿಸಿ ಆಯ್ಕೆ ಸಮಿತಿ ಆಯ್ಕೆ ಮಾಡಿದೆ’ ಎಂದು ಉಮಾ ಮುಕುಂದ ಹೇಳಿದರು.

ಆಯ್ಕೆ ಸಮಿತಿಯಲ್ಲಿದ್ದ ಪಾಲಿಕೆ ಸದಸ್ಯರಾದ ಕವಿತಾ ಕಬ್ಬೇರ, ವಹೀದಾ ಕಿತ್ತೂರ, ಸುನಿತಾ ಮಾಲ್ವಾಡ್ಕರ ಹಾಗೂ ಪಾಲಿಕೆ ಆರೋಗ್ಯಾಧಿಕಾರಿ ಶ್ರೀಧರ ದಂಡೆಪ್ಪನವರ ಇದ್ದರು.

ಪ್ರಶಸ್ತಿಗೆ ಆಯ್ಕೆಯಾದವರು

ಶಿಕ್ಷಣ: ಡಾ. ಅಜೀತ್ ಪ್ರಸಾದ, ನಾಗಪ್ಪ ಕೋಣಿ, ನಾರಾಯಣ ಬದ್ದಿ, ಸುರೇಶ ಕುಲಕರ್ಣಿ; ಸಂಶೋಧನೆ: ಆರ್‌.ಎಂ. ಷಡಕ್ಷರಯ್ಯ, ಸುಮಂಗಲಾ ದಾಂಡೇವಾಲೆ; ಅಂಗವಿಕಲ: ರೇವರಡ್ಡಿ ಶ್ರೀಹರ್ಷಾ, ಜ್ಯೋತಿ ಸಣ್ಣಕ್ಕಿ; ವೈದ್ಯಕೀಯ: ಡಾ.ಸುಧೀರ ಜಂಬಗಿ, ಡಾ. ಮಹ್ಮದ್‌ಇಕ್ಬಾಲ್‌ ಶೇಖ್‌, ಡಾ. ಗಣೇಶ ತಾನವಡೆ; ಮಾಧ್ಯಮ: ಬಂಡು ಕುಲಕರ್ಣಿ, ರವಿ ಕಗ್ಗನವರ, ಪುಂಡಲೀಕ ಹಡಪದ, ಲಕ್ಷ್ಮೀಕಾಂತ ಬಿಳಗಿ, ರಾಜು ಬಿಜಾಪೂರ; ಛಾಯಾಚಿತ್ರ: ಗುರು ಭಾಂಡಗೆ, ಬಿ.ಎಂ. ಕೇದಾರನಾಥ; ರಂಗಭೂಮಿ: ಮಾಲತಿ ಸರದೇಶಪಾಂಡೆ, ಸುನಂದ ಮಳ್ಳಪ್ಪಗೌಡ್ರ, ನಾರಾಯಣ ಪಾಂಡುರಂಗಿ, ಬಿ.ಐ. ಈಳಗೇರ; ನೃತ್ಯ: ಸುಜಾತಾ ರಾಜಗೋ‍ಪಾಲ, ಉತ್ಪಲಾ ಗಲಗಲಿ; ಸಂಗೀತ: ಕೃಷ್ಣರಾವಬುವಾ ಇನಾಮದಾರ, ರವೀಂದ್ರ ಯಾವಗಲ್, ನಾರಾಯಣ ಮಾಯಾಚಾರಿ; ಕೈಗಾರಿಕೆ: ಮಹಾದೇವ ಕರಮರಿ, ನಾಗರಾಜ ಎಲಿಗಾರ, ತಿಲಕ ವಿಕಂಶಿ; ಶಿಲ್ಪಕಲೆ/ಚಿತ್ರಕಲೆ: ಮೆಹಬೂಬ್‌ಅಲಿ ಬಂಗ್ಲೇವಾಲೆ, ಪ್ರಕಾಶ ಗಾಯಕವಾಡ; ನಮ್ಮನಗರ ಸ್ವಚ್ಛ ನಗರ: ರೆವೆಲ್ಯೂಷನ್‌ ಮೈಂಡ್‌, ಹಳೇ ವಿದ್ಯಾರ್ಥಿಗಳ ಸಂಘ; ಸೈನಿಕ: ಸಿ.ಎಸ್‌. ಹವಾಲ್ದಾರ, ಮಹಮ್ಮದ್‌ ಹನೀಫ್‌, ನಿಂಗನಗೌಡ ಪಾಟೀಲ; ಯೋಗ: ವಿನಾಯಕ ತೇಲಗೇರಿ, ಮನಿಶಾ ಹೂಲಿ, ಶೈಲಜಾ ಮಡಿಕರ, ರಘುನಾಥ ಪಾಟೀಲ; ಜಾನಪದ: ಪ್ರಭು ಕುಂದರಗಿ, ವೀರಭದ್ರಪ್ಪ ಹೂಲಿ; ಕ್ರೀಡೆ: ಭವಾನಿ ಭಂಡಾರಿ, ವಿಜಯ ಕಾಮತ್‌, ವಿಠ್ಠಲ ಮೂರ್ತುಗುಡ್ಡೆ; ಕೃಷಿ: ಈಶ್ವರಪ್ಪ ಮಾಳಣ್ಣವರ, ಶಿವಾನಂದ ಹೊಸೂರ, ಚಿದಾನಂದ ಮನ್ಸೂರ; ಸಾಮಾಜಿಕ: ಹುಸನಪ್ಪ ವಜ್ಜಣ್ಣವರ, ಫಾಸ್ಟರ್‌ ನಿಕೋಲಸ್‌, ಶಿವಪ್ಪ ನೇಕಾರ, ಈಶ್ವರಲಾಲ್‌ ಅಗ್ನಿಹೋತ್ರಿ; ಸಾಹಿತ್ಯ: ರಫಿಅಹಮ್ಮದ್‌ ಗೋಗೇರಿ, ಶರಣಮ್ಮ ಗೋರೇಬಾಳ, ಲಿಂಗರಾಜ ಅಂಗಡಿ, ಭೀಮಸೇನ ಬಡಿಗೇರ, ಗದಿಗಯ್ಯ ಹಿರೇಮಠ; ಹಸಿರು ಪರಿಸರ ನಿರ್ಮಾಣ: ಎ.ಜಿ. ದೇಶಪಾಂಡೆ, ಮೋಹನಲಾಲ್‌ ಭಂಡಾರಿ; ಕನ್ನಡಪರ ಹೋರಾಟ: ಈರಪ್ಪ ಎಮ್ಮಿ: ಸರ್ಕಾರೇತರ ಸಂಸ್ಥೆ: ರೋಟಿ ಘರ್, ಮಮತಾ ಸ್ಕೂಲ್; ಸೇವಾ ಕ್ಷೇತ್ರ: ಕುಸುಮವ್ವಾ ಕೇಲೂರ, ಕಾಶಪ್ಪ ಮೇಲಿನಮನಿ; ವಿವಿಧ ಕ್ಷೇತ್ರ: ಸುನೀಲ್‌ ನಲವಡಿ (ಸಾಮಾಜಿಕ ಜಾಲತಾಣ ನಿರ್ವಾಹಕರು), ಮಾನಸಿ ಜೋಶಿ (ಕಸೂತಿ ಪರಿಣಿತರು).

ರಾತ್ರೋರಾತ್ರಿ ಪಟ್ಟಿ ಬದಲಾವಣೆ: ಕವಿತಾ

ಆಯ್ಕೆ ಸಮಿತಿಯಲ್ಲಿದ್ದ ಪಾಲಿಕೆ ಸದಸ್ಯೆ ಕವಿತಾ ಕಬ್ಬೇರ ಅವರು ಪಟ್ಟಿ ಬಿಡುಗಡೆಯ ಸುದ್ದಿಗೋಷ್ಠಿಯಲ್ಲಿಯೇ, ‘ಧೀಮಂತರ ಆಯ್ಕೆಯ ಅಂತಿಮ ಪಟ್ಟಿಯಲ್ಲಿದ್ದವರ ಹೆಸರನ್ನು ರಾತ್ರೋರಾತ್ರಿ ಬದಲಾಯಿಸಲಾಗಿದೆ. ಆಯ್ಕೆ ಸಮಿತಿ ಅಂತಿಮಗೊಳಿಸಿದ ಪಟ್ಟಿಯಲ್ಲಿನ 30 ಮಂದಿ ಹೆಸರನ್ನು ಕೈಬಿಟ್ಟು, ಬೇರೆಯವರ ಹೆಸರನ್ನು ಸೇರ್ಪಡೆ ಮಾಡಲಾಗಿದೆ’ ಎಂದು ಆರೋಪಿಸಿದರು.

‘ಆಯ್ಕೆ ಸಮಿತಿ ರಚನೆ ಮಾಡಿದಾಗ, ಸಾಧಕರ ಆಯ್ಕೆಯ ಸಂಪೂರ್ಣ ಅಧಿಕಾರ ಸಮಿತಿಯದ್ದಾಗಿರುತ್ತದೆ. ಭಾನುವಾರ ತಡರಾತ್ರಿವರೆಗೂ ಸಮಿತಿಯಲ್ಲಿದ್ದ ಸದಸ್ಯರು ಪಾಲಿಕೆಯಲ್ಲಿ ಕೂತು ಪಟ್ಟಿ ಅಂತಿಮಗೊಳಿಸಿದ್ದರು. ಆದರೆ, ಮೇಯರ್‌ ಈರೇಶ ಅಂಚಟಗೇರಿ ಅವರು ಹಸ್ತಕ್ಷೇಪ ಮಾಡಿ, ತಮಗೆ ಬೇಕಾದವರ ಹೆಸರನ್ನು ಸೇರ್ಪಡೆಗೊಳಿಸಿ, ನಮ್ಮ ಸ್ವಾತಂತ್ರ್ಯ ಕಸಿದುಕೊಂಡಿದ್ದಾರೆ. ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸಿದ್ಧಪಡಿಸಿದ ಪಟ್ಟಿ ಬಿಡುಗಡೆ ಮಾಡಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕವಿತಾ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಉಮಾ ಮುಕುಂದ, ‘ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಪಟ್ಟಿ ಸಿದ್ಧಪಡಿಸಲಾಗಿದೆ. ಆದರೆ, ಅವರು ಹೇಳಿರುವ ವ್ಯಕ್ತಿಗಳನ್ನು ಆಯ್ಕೆ ಮಾಡಿಲ್ಲ ಎಂದು ಅಸಮಾಧಾನ ಆಗಿರಬಹುದು. ಇದೇ ಮೊದಲ ಬಾರಿಗೆ ಸಮಿತಿ ಮೂಲಕ ಆಯ್ಕೆ ಮಾಡಲಾಗಿದೆ. ನಮಗಿಂತಲೂ ದೊಡ್ಡವರು ಇರುವುದರಿಂದ ಅವರ ಮಾತನ್ನು ಸಹ ನಾವು ಕೇಳಬೇಕಾಗುತ್ತದೆ’ ಎಂದರು.

‘ದೊಡ್ಡವರು ಯಾರು?’ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಉಮಾ ಮುಕುಂದ, ಹಾರಿಕೆ ಉತ್ತರ ನೀಡಿ ಜಾರಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT