ಗುರುವಾರ , ಅಕ್ಟೋಬರ್ 22, 2020
21 °C
ಹುಬ್ಬಳ್ಳಿಯಲ್ಲಿ ಮುಂದುವರಿದ ಪೊಲೀಸ್‌ ಕಾರ್ಯಾಚರಣೆ

ಹುಬ್ಬಳ್ಳಿ: ಮತ್ತೆ 6 ಕೆ.ಜಿ. ಗಾಂಜಾ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಗಾಂಜಾ ಸಾಗಾಟ ಮತ್ತು ಮಾರಾಟದಲ್ಲಿ ತೊಡಗಿದ್ದವರ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ನಗರದ ಪೊಲೀಸರು ಮತ್ತೆ ಇಬ್ಬರನ್ನು ಬಂಧಿಸಿದ್ದು, ₹1.2 ಲಕ್ಷ ಮೌಲ್ಯದ ಆರು ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಪ್ರಕರಣ ಬಯಲಾಗುತ್ತಿದ್ದಂತೆ ಇಲ್ಲಿನ ಪೊಲೀಸರು ಚುರುಕಾಗಿದ್ದಾರೆ. ಶನಿವಾರ ನಗರದ ಕೇಶ್ವಾಪುರದಿಂದ ಘಂಟಿಕೇರಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.

ರಾಜಸ್ಥಾನ ಮೂಲದ 21 ವರ್ಷದ ಸುಮೇರಸಿಂಗ್‌ ಮದನಸಿಂಗ್‌ ಮತ್ತು ಸಮುಂದರ ಸಿಂಗ್‌ ನೇಪಾಲಸಿಂಗ್‌ ಬಂಧಿತರು. ಕೇಶ್ವಾಪುರದ ಆಜಾದ್‌ ಕಾಲೊನಿಯಲ್ಲಿ ವಾಸವಿದ್ದ ಸಮುಂದರ ಸಿಂಗ್‌ ಎಲೆಕ್ಟ್ರಿಕಲ್‌ ಕೆಲಸ ಮಾಡುತ್ತಿದ್ದ. ಆರೋಪಿಗಳಿಂದ ಒಂದು ದ್ವಿಚಕ್ರ ವಾಹನ, ₹420 ವಶಪಡಿಸಿಕೊಳ್ಳಲಾಗಿದೆ ಎಂದು ‍ಪೊಲೀಸರು ತಿಳಿಸಿದ್ದಾರೆ. 

ಮನಕ್ಕಾ ಮಾರಾಟ: ದಾಳಿ

ಹುಬ್ಬಳ್ಳಿಯ ರಾಧಾಕೃಷ್ಣ ಗಲ್ಲಿಯಲ್ಲಿರುವ ಪಾಶ್ವನಾಥ ಒಣಹಣ್ಣುಗಳ (ಡ್ರೈ ಫ್ರೂಟ್ಸ್‌) ಹೆಸರಿನ ಅಂಗಡಿಯಲ್ಲಿ ನಶೆ ಬರುವ ಮನಕ್ಕಾ ವಸ್ತುವನ್ನು ಮಾರಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಈ ಅಂಗಡಿ ಮೇಲೆ ಭಾನುವಾರ ದಾಳಿ ಮಾಡಿದ ಘಂಟಿಕೇರಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಶೀಲವಂತರ ಓಣಿಯ ಮುಕೇಶ ಜೈನ್‌ ಹಾಗೂ ಕಮಲೇಶ ಜೈನ್ ಬಂಧಿತರು. ಇವರಿಂದ 1,220 ಗ್ರಾಂ ತೂಕದ ಅಕ್ಕಿ ಮತ್ತು 360 ಮನಕ್ಕಾ ಪಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಾದಕ ವಸ್ತು ಪತ್ತೆ

ಸಿಬಿಟಿಯ ಕಿಲ್ಲಾ ಹತ್ತಿರದ ಬ್ರಾಡ್‌ ವೇ ಕಾಂಪ್ಲೆಕ್ಸ್‌ನ ಓಸಿಯಾ ಮಾರ್ಕೆಟಿಂಗ್‌ ಅಂಗಡಿಯಲ್ಲಿ ಆಯುರ್ವೇದ ಔಷಧಿ ಎಂದು ಮಾರಾಟ ಮಾಡುತ್ತಿದ್ದ ಮಾದಕ ವಸ್ತು 60 ಕೆ.ಜಿ. ಮಧುಮನಕ್ಕಾವನ್ನು ಹುಬ್ಬಳ್ಳಿ–ಧಾರವಾಡ ನಗರ ಆರ್ಥಿಕ ಮತ್ತು ಮಾದಕ ವಸ್ತುಗಳ ಅಪರಾಧ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದು ₹30 ಸಾವಿರ ಮೌಲ್ಯ ಹೊಂದಿದೆ.

38 ವರ್ಷದ ಪುಷ್ಪರಾಜ್‌ ಮೆಹತಾ, 30 ವರ್ಷದ  ಗಣೇಶಪೇಟೆಯ ಉಮೇಶ ಸವಣೂರ ಬಂಧಿತರು.

ಚಿನ್ನದಂಗಡಿಯಲ್ಲಿ ಕಳ್ಳತನ: ಇಬ್ಬರ ಬಂಧನ

ಹುಬ್ಬಳ್ಳಿ ನಗರದ ರೈಲು ನಿಲ್ದಾಣ ರಸ್ತೆಯ ಕಲ್ಯಾಣ ಜ್ಯುವೆಲರ್ಸ್‌‌ ಮಳಿಗೆಗೆ ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ವಿಜಯನಗರದ ವಿರಕ್ತಾನಂದ ಕಟಕಿ ಮತ್ತು ಗದುಗಿನ ಕಲಾಮಂದಿರ ರಸ್ತೆಯ ನಿವಾಸಿ ಶರತ್‌ ಕಾರಂತ ಬಂಧಿತರು. ಇವರು ಗ್ರಾಹಕರ ಸೋಗಿನಲ್ಲಿ ಹುಬ್ಬಳ್ಳಿ, ಬೆಳಗಾವಿ ಮತ್ತು ದಾವಣಗೆರೆಯ ಕಲ್ಯಾಣ ಜ್ಯುವೇಲರ್ಸ್‌ನಲ್ಲಿ ಕಳ್ಳತನ ಮಾಡಿದ ಆರೋಪ ಎದುರಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇವರಿಂದ ₹ 8.27 ಲಕ್ಷ ಮೌಲ್ಯದ 130 ಗ್ರಾಂ ತೂಕದ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನೊಬ್ಬ ಆರೋಪಿಯ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಆರೋಪಿಗಳು ಇಲ್ಲಿನ ಕಲ್ಯಾಣ ಜ್ಯುವೆಲರ್ಸ್‌ನಲ್ಲಿ ₹ 3.98 ಲಕ್ಷ ಮೌಲ್ಯದ 59 ಗ್ರಾಂ ಆಭರಣ ಕಳವು ಮಾಡಿ, ಪರಾರಿಯಾಗಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು