ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಂದ್ರೆ ಸಾರಿಗೆಗೆ ರಹದಾರಿ; ಒಕ್ಕೂಟ ಆಕ್ರೋಶ

Last Updated 30 ಸೆಪ್ಟೆಂಬರ್ 2022, 17:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಬ್ಬಳ್ಳಿ–ಗದಗ, ಹುಬ್ಬಳ್ಳಿ–ಬಾಗಲಕೋಟೆ–ವಿಜಯಪುರ ಹಾಗೂ ಬೆಳಗಾವಿ–ವಿಜಯಪುರ ಮಾರ್ಗದ ನಡುವೆ ಬೇಂದ್ರೆ ಸಾರಿಗೆ ವಾಹನಗಳಿಗೆ ನೀಡಿರುವ ರಹದಾರಿ ರದ್ದುಪಡಿಸಬೇಕು ಎಂದು ಆಗ್ರಹಿಸಿ ಕೆಎಸ್‌ಆರ್‌ಟಿಸಿ ನೌಕರರ ಸಂಘದ ಒಕ್ಕೂಟದ ಸದಸ್ಯರು ಶುಕ್ರವಾರ ನಗರದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ, ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

‘ಉತ್ತರ ಕರ್ನಾಟಕ ಭಾಗದ ಮಾರ್ಗಗಳು ರಾಷ್ಟ್ರೀಕೃತವಾಗಿದ್ದು, ಇಲ್ಲಿ ಖಾಸಗಿಯವರಿಗೆ ಸ್ಟೇಜ್‌ ಕ್ಯಾರೇಜ್‌ ಆಗಿ ವಾಹನಗಳನ್ನು ಓಡಿಸಲು ಅವಕಾಶವಿಲ್ಲ. ಹುಬ್ಬಳ್ಳಿ–ಗದಗ ಮಧ್ಯೆ ಈಗಾಗಲೇ ಐದು ನಿಮಿಷಕ್ಕೊಂದರಂತೆ 40 ತಡೆರಹಿತ ಬಸ್‌ಗಳು 132 ಬಾರಿ ಸಂಚರಿಸುತ್ತಿವೆ. ಬೆಳಗಾವಿ–ವಿಜಯಪುರ ಮಧ್ಯೆ 58 ಬಸ್‌ಗಳು ಹಾಗೂ ಹುಬ್ಬಳ್ಳಿ–ವಿಜಯಪುರ ಮಧ್ಯೆ 52 ಬಸ್‌ಗಳು ಸಂಚರಿಸುತ್ತಿವೆ. ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ಬಂದರೆ ಇನ್ನೂ ಹೆಚ್ಚಿನ ಬಸ್‌ ಸೌಲಭ್ಯ ಕಲ್ಪಿಸಿಕೊಡಲು ಸಂಸ್ಥೆ ಸಿದ್ಧವಿದೆ. ಹೀಗಿದ್ದಾಗಲೂ, ಬೇಂದ್ರೆ ಸಾರಿಗೆಗೆ ಹುಬ್ಬಳ್ಳಿ–ಧಾರವಾಡ ಮಧ್ಯೆ ನೀಡಲಾಗಿದ್ದ ರಹದಾರಿಯನ್ನು ರದ್ದು ಪಡಿಸಿ, ಈ ಮಾರ್ಗಗಳಲ್ಲಿ ಸಂಚರಿಸಲು ಅನುಮತಿ ನೀಡಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಆ ಮಾರ್ಗಗಳ ನಡುವೆ ಸರ್ಕಾರ ಬೇಂದ್ರೆ ಸಾರಿಗೆಗೆ ನೀಡಿರುವ 41 ಬಸ್‌ಗಳ ಕಾರ್ಯಾಚರಣೆ ಅನುಮತಿಯನ್ನು ರದ್ದು ಪಡಿಸಬೇಕು. ಕಾರ್ಮಿಕರಿಗೆ ಕಿರುಕುಳ ನೀಡುವುದನ್ನು ಕೂಡಲೇ ತಪ್ಪಿಸಬೇಕು. ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕ ಮಾಡಿಕೊಳ್ಳುವುದನ್ನು ಕೈ ಬಿಡಬೇಕು. ಚಾಲಕ, ನಿರ್ವಾಹಕ, ತಾಂತ್ರಿಕ ಹಾಗೂ ಇನ್ನುಳಿದ ಖಾಲಿಯಿರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿಕೊಳ್ಳಬೇಕು. ಹೊಸ ವಾಹನಗಳನ್ನು ಖರೀದಿಸಲು ಸರ್ಕಾರ ಅನುದಾನ ನೀಡಬೇಕು. ಬಾಕಿ ಇರಿಸಿಕೊಂಡಿರುವ ಹಣವನ್ನು ಸಾರಿಗೆ ನಿಗಮಗಳಿಗೆ ತಕ್ಷಣ ಬಿಡುಗಡೆ ಮಾಡಬೇಕು’ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಆರ್‌.ಎಫ್‌. ಕವಳಿಕಾಯಿ, ಎಂ.ಎಚ್‌. ನಾಯ್ಕರ್‌, ಪ್ರಕಾಶ ಭುಜನ್ನವರ, ಎಂ.ವಿ. ಭಗವತಿ, ಶಾಂತಣ್ಣ ರೇವಡಿಹಾಳ, ಎಸ್‌.ಆರ್‌. ಅದರಗುಂಚಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT