ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಾನಿ’ ಕಹಾನಿ ಹಂಚಿಕೊಂಡ ನಟ ಅಮೀರ್‌ ಖಾನ್‌

‘ಜನಾಂದೋಲನವಾಗಿ ರೂಪುಗೊಂಡ ಮಹಾರಾಷ್ಟ್ರದ ಜಲಜಾಗೃತಿ ಕಾರ್ಯಕ್ರಮ’
Last Updated 11 ಫೆಬ್ರುವರಿ 2021, 15:54 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಹಾರಾಷ್ಟ್ರದ ಸಾವಿರಾರು ಹಳ್ಳಿಗಳಲ್ಲಿ ನೀರಿನ ಅಭಾವ ನೀಗಿಸಲು ‘ಪಾನಿ’ ಫೌಂಡೇಷನ್‌ ಮಾಡಿದ ಪ್ರಯೋಗಾತ್ಮಕ ಕೆಲಸಗಳು ಜನಾಂದೋಲನವಾಗಿ ರೂಪುಗೊಂಡವು. ಈ ಕೆಲಸದಿಂದಾಗಿ ನೀರಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ದೊಡ್ಡ ಮಟ್ಟದಲ್ಲಿ ಸಾಧ್ಯವಾಯಿತು ಎಂದು ನಟ ಹಾಗೂ ಪಾನಿ ಫೌಂಡೇಷನ್‌ನ ಸಂಸ್ಥಾಪಕ ಅಮೀರ್ ಖಾನ್‌ ಅಭಿಪ್ರಾಯಪಟ್ಟರು.

ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಷನ್‌ ಬುಧವಾರ ವೆಬಿನಾರ್‌ ಮೂಲಕ ಆಯೋಜಿಸಿದ್ದ ಗ್ರಾಮೀಣ ಜನರ ಅಭ್ಯುದಯಕ್ಕಾಗಿ ಜನಾಂದೋಲನ ಮತ್ತು ಗ್ರಾಮೀಣ ಸ್ತಿತ್ಯಂತರ ಸಂಬಂಧಿತ ಸರಣಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ನೀರಿನ ಸಮಸ್ಯೆ ಪರಿಹರಿಸಲು ಒಬ್ಬ ವ್ಯಕ್ತಿ ಹಾಗೂ ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ. ಸ್ವಯಂಪ್ರೇರಣೆಯಿಂದ ಪ್ರತಿಯೊಬ್ಬರೂ ಮುಂದೆಬಂದು ಜಲಜಾಗೃತಿ ಮೂಡಿಸಬೇಕು’ ಎಂದರು.

‘ಮಹಾರಾಷ್ಟ್ರದ ಹಳ್ಳಿಗಳಲ್ಲಿದ್ದ ನೀರಿನ ಸಮಸ್ಯೆ ಬಗ್ಗೆ ಮೊದಲು ನಾವು ವೈಜ್ಞಾನಿಕ ಅಧ್ಯಯನ ಮಾಡಿದ್ದೆವು. ಪ್ರತಿ ಗ್ರಾಮದ ಐದು ಜನರಿಗೆ ತರಬೇತಿ ನೀಡಿ ನೀರಿನ ಸಮಸ್ಯೆ ಪರಿಹರಿಸಲು ಅವರ ನಡುವೆಯೇ ಸ್ಪರ್ಧೆ ಆಯೋಜಿಸಲಾಗುತ್ತಿತ್ತು. ಯಾರಿಗೂ ನಾವು ಯಂತ್ರ ಹಾಗೂ ಹಣ ಕೊಟ್ಟಿಲ್ಲ. ಇರುವ ಪ್ರಾಕೃತಿಕ ಸಂಪನ್ಮೂಲ ಸದ್ಬಳಕೆ ಮಾಡಿಕೊಳ್ಳುವ ಕೌಶಲ ಮತ್ತು ಭಾವನಾತ್ಮಕ ಬೆಂಬಲ ನೀಡಿದ್ದರಿಂದ ನೀರಿನ ಸಮಸ್ಯೆಗೆ ಪರಿಹಾರ ಲಭಿಸಿತು’ ಎಂದು ‘ಪಾನಿ’ ಕಹಾನಿ ಹಂಚಿಕೊಂಡರು.

‘ನಮ್ಮ ಪ್ರಯೋಗಗಳಿಗೆ ಪಶ್ಚಿಮ ಮಹಾರಾಷ್ಟ್ರ, ವಿದರ್ಭ ಮತ್ತು ಮರಾಠವಾಡದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸ್ವಯಂ ಪ್ರೇರಣೆಯಿಂದ ಜನ ಮುಂದೆ ಬಂದರು. ಗ್ರಾಮೀಣ ಜನರ ಪಾಲ್ಗೊಳ್ಳುವಿಕೆ ಕೂಡ ಹೆಚ್ಚಾಯಿತು. ನಾನು ನಡೆಸಿಕೊಳ್ಳುತ್ತಿದ್ದ ಸತ್ಯಮೇವ ಜಯತೆ ಕಾರ್ಯಕ್ರಮದ ಮೂಲಕ ಜನರ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು’ ಎಂದರು.

ಪಾನಿ ಫೌಂಡೇಷನ್‌ ಸಂಸ್ಥಾಪಕಿ ಹಾಗೂ ಅಮೀರ್‌ ಖಾನ್‌ ಪತ್ನಿ ಕಿರಣ್‌ ರಾವ್‌ ಮಾತನಾಡಿ, ‘ನಮ್ಮ ಫೌಂಡೇಷನ್‌ ಹಳ್ಳಿಗಳಲ್ಲಿ ಮಾಡಿದ ಕೆಲಸದಿಂದ ಸ್ಫೂರ್ತಿ ಪಡೆದು ನಗರ ಪ್ರದೇಶಗಳ ಜನ ಹಳ್ಳಿಗಳತ್ತ ಮುಖಮಾಡಿದರು. ಜಲಮಿತ್ರ ಯೋಜನೆ ಮೂಲಕ ಮಾಡಿದ ಕೆಲಸ ಸಾಕಷ್ಟು ಜನರಿಗೆ ಪ್ರೇರಣೆಯಾಯಿತು’ ಎಂದರು.

ಫೌಂಡೇಷನ್‌ ಸಿಇಒ ಸತ್ಯಜಿತ್ ಭಟ್ಕಳ್ ಮಾತನಾಡಿ ‘ಹಳ್ಳಿಗಳಲ್ಲಿ ಕೆಲಸಕ್ಕಿಂತ ಹೆಚ್ಚಾಗಿ ನಾಯಕತ್ವ ವಹಿಸಿಕೊಳ್ಳಲು ಜನ ಮುಂದೆ ಬರುತ್ತಾರೆ. ಆದ್ದರಿಂದ ಸಾಮೂಹಿಕ ನಾಯಕತ್ವಕ್ಕೆ ಒತ್ತು ಕೊಟ್ಟು ನೀರಿನ ಅಭಾವ ನೀಗಿಸಲು ರೂಪಿಸಿದ ಯೋಜನೆಗಳ ಅನುಷ್ಠಾನ ತಂಡದಲ್ಲಿ ಐದು ಜನರನ್ನು ನೇಮಿಸಿದ್ದೆವು. ಇದರಲ್ಲಿ ಇಬ್ಬರು ಮಹಿಳೆಯರು ಇರುವುದು ಕಡ್ಡಾಯವಾಗಿತ್ತು’ ಎಂದರು.

ಕ್ರಿಸ್‌ಮಸ್‌ಗೆ ಲಾಲ್‌ ಸಿಂಗ್‌ ಛಡ್ಡಾ...

ವೆಬಿನಾರ್‌ ಮೂಲಕ ನಡೆದ ಕಾರ್ಯಕ್ರಮದಲ್ಲಿ ಬಹುತೇಕ ವೀಕ್ಷಕರು ‘ಲಾಲ್‌ ಸಿಂಗ್‌ ಛಡ್ಡಾ’ ಸಿನಿಮಾ ಯಾವಾಗ ಬಿಡುಗಡೆ ಎನ್ನುವ ಪ್ರಶ್ನೆ ಮುಂದಿಟ್ಟಿದ್ದರು. ಇದನ್ನು ಕಾರ್ಯಕ್ರಮ ಆಯೋಜಿಸಿದ್ದ ದೇಶಪಾಂಡೆ ಫೌಂಡೇಷನ್‌ ಸಂಸ್ಥಾಪಕ ಗುರುರಾಜ ದೇಶಪಾಂಡೆ ಅವರು ಅಮೀರ್‌ ಖಾನ್‌ ಅವರಿಗೆ ಕೇಳಿದಾಗ ‘ಕೊರೊನಾ ಮತ್ತು ಕರೀನಾ (ಚಿತ್ರದಲ್ಲಿ ನಟಿಸಿರುವ ಕರಿನಾ ಕಪೂರ್‌) ನಿಂದ ಚಿತ್ರೀಕರಣ ತಡವಾಗಿದೆ. ಈ ವರ್ಷದ ಕ್ರಿಸ್‌ಮಸ್‌ಗೆ ತೆರೆ ಕಾಣಲಿದೆ’ ಎಂದು ಪ್ರತಿಕ್ರಿಯಿಸಿದರು.

‘ತಾಂತ್ರಿಕತೆಯೆಡೆಗೆ ಆಕರ್ಷಣೆ ನಿರಂತರ’

ಅಭಿವೃದ್ಧಿಗೆ ತಾಂತ್ರಿಕ ನೆರವು ಅಗತ್ಯವಾಗಿ ಬೇಕಾಗುತ್ತದೆ. ಇದರ ಮೇಲಿನ ಆಕರ್ಷಣೆ ನಿರಂತರ ಎಂದು ಗುರುರಾಜ ದೇಶಪಾಂಡೆ ಹೇಳಿದರು.

‘ನಮ್ಮ ಫೌಂಡೇಷನ್‌ ಗ್ರಾಮೀಣ ಪ್ರದೇಶದ ಜನರ ಅಭಿವೃದ್ಧಿಗೆ ಪೂರಕವಾಗಿ ದೂರದೃಷ್ಟಿಯ ಯೋಜನೆಗಳನ್ನು ಹಮ್ಮಿಕೊಂಡಿದೆ. ಮುಂಬರುವ ದಿನಗಳಲ್ಲಿ ಪಾನಿ ಸಂಸ್ಥೆ ಸಹಯೋಗದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ನಿಶ್ವಿತ ಆದಾಯಕ್ಕೆ ಹೊಂದಿಕೊಂಡಿರುವ ಜನ ಬದಲಾವಣೆಯಾದರೆ ಎಲ್ಲವೂ ಅಭಿವೃದ್ಧಿ ಸಾಧ್ಯ’ ಎಂದರು.

ಬದಲಾವಣೆಗಾಗಿ ಸಂವಹನ, ತಂತ್ರಜ್ಞಾನ ಪೂರಕವಾಗುವ ಬಗೆ, ಆರ್ಥಿಕ ಸಂಪನ್ಮೂಲಗಳನ್ನು ಅಭಿವೃದ್ಧಿಗೆ ವಿನಿಯೋಗಿಸುವ ಮಾದರಿಗಳು ಮತ್ತು ಅನ್ವೇಷಣೆ, ಸಹಭಾಗಿತ್ವ ಹಾಗೂ ಸುಸ್ಥಿರತೆಯ ಮೂಲಕ ಉಜ್ವಲ ಭವಿಷ್ಯ ರೂಪಿಸುವ ಯೋಜನೆಗಳ ಕುರಿತು ಅವರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT