ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರೂಣಹತ್ಯೆ ಶಿಕ್ಷೆಗೆ ಕಾರಣವಾಗುವ ಅಪರಾಧ

Last Updated 11 ಏಪ್ರಿಲ್ 2019, 12:15 IST
ಅಕ್ಷರ ಗಾತ್ರ

ಧಾರವಾಡ: ‘ಜನಿಸುವ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕು ಇದೆ. ಜನನದ ನಂತರ ಜೀವಕ್ಕೆ ತೊಂದರೆ ಉಂಟು ಮಾಡಿದರೆ ಅದು ಕೊಲೆ ಎನಿಸಿಕೊಳ್ಳುತ್ತದೆ. ಅದೇ ರೀತಿಯಲ್ಲಿ ತಾಯಿ ಗರ್ಭದಲ್ಲಿರುವ ಭ್ರೂಣದ ಹತ್ಯೆ ಮಾಡುವುದೂಕೂಡ ಅಷ್ಟೇ ಗಂಭೀರವಾದ ಅಪರಾಧ ಮತ್ತು ಮಹಾ ಅಪರಾಧ’ ಎಂದು ಜಿಲ್ಲಾ ನ್ಯಾಯಾಧೀಶ ಈಶಪ್ಪ ಭೂತೆ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ನಿಷೇಧ ಕಾಯ್ದೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಭ್ರೂಣ ಹತ್ಯೆಯು ಕಾನೂನು ಬಾಹಿರ ಕೃತ್ಯ. ತಾಯಿಯ ಪ್ರಾಣಕ್ಕೆ ತೊಂದರೆ ಉಂಟಾಗುವ ಪರಿಸ್ಥಿತಿಯಲ್ಲಿ ಮಾತ್ರ ನ್ಯಾಯಾಲಯದ ಅನುಮತಿ ಪಡೆದು ಭ್ರೂಣ ತೆಗೆಯಲು ಅವಕಾಶವಿದೆ.ಜನನದ ನಂತರ ಹತ್ಯೆಯಾದರೆ ಅದು ಕೊಲೆ ಎನಿಸಿಕೊಂಡು, ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಆದರೆ, ಭ್ರೂಣ ಹತ್ಯೆ ಕೂಡ ಅಷ್ಟೇ ಪಾಪದ ಮತ್ತು ನೀಚ ಕೃತ್ಯವಾಗಿದೆ. ಈ ಕುರಿತು ಅರಿವು ಇಲ್ಲದವರಿಗೆ ತಿಳಿವಳಿಕೆ ನೀಡುವ ಕಾರ್ಯವನ್ನು ಪ್ರಯೋಗಾಲಯ, ಸ್ಕ್ಯಾನಿಂಗ್ ಸೆಂಟರ್ ಗಳಿಂದಲೂ ಆಗಬೇಕು. ಕಾಯ್ದೆಯ ಸಫಲತೆಗಾಗಿ ಎಲ್ಲರೂ ಕೈಜೋಡಿಸಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಬಿ.ಸಿ. ಸತೀಶ ಮಾತನಾಡಿ, ‘ಭಾರತದಲ್ಲಿ ಪ್ರತಿ ಸಾವಿರ ಪುರುಷರಿಗೆ 943 ಮಹಿಳೆಯರ ಲಿಂಗಾನುಪಾತವಿದೆ. ಆದರೆ, ನಮ್ಮ ಜಿಲ್ಲೆಯ ಕೆಲವು ಮತಗಟ್ಟೆಗಳಲ್ಲಿ ಈ ಅನುಪಾತ 970 ರಷ್ಟಿದೆ. ಇನ್ನೂ ಕೆಲವೆಡೆ ಮಹಿಳಾ ಮತದಾರರ ಸಂಖ್ಯೆಯೇ ಪುರುಷರಿಗಿಂತ ಹೆಚ್ಚಾಗಿದೆ. ಆದರೆ ಕೆಲವೆಡೆ ಪುರುಷರು ಮದ್ಯದ ದಾಸರಾಗಿ ಬೇಗ ಮೃತಪಟ್ಟ ಘಟನೆಗಳೇ ಹೆಚ್ಚು. ಇದು ಆತಂಕ ತರುವ ಸಂಗತಿಯಾಗಿದೆ’ ಎಂದರು.

ಪಿಸಿ ಮತ್ತು ಪಿಎನ್‌ಡಿಟಿ ಕಾಯ್ದೆಯ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಡಾ. ವಿ.ಡಿ. ಕರ್ಪೂರಮಠ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ಎಸ್. ಚಿಣ್ಣನ್ನವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಂದ್ರ ದೊಡ್ಡಮನಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಬಿ. ನಿಂಬಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT