ಬುಧವಾರ, ಜನವರಿ 26, 2022
26 °C
ಮದುವೆ, ಸಿನಿಮಾ, ಉದ್ಯಾನ: ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಹೇಳಿಕೆ

ಎರಡು ಡೋಸ್‌ ಲಸಿಕೆ ಪಡೆದವರಿಗಷ್ಟೇ ಕಲ್ಯಾಣ ಮಂಟಪ, ಸಿನಿಮಾ ಮಂದಿರಗಳಿಗೆ ಪ್ರವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಧಾರವಾಡ ಜಿಲ್ಲೆಯಲ್ಲಿ ಕೋವಿಡ್‌ ಲಸಿಕೆ ಮೊದಲ ಡೋಸ್‌ ಅನ್ನು ಶೇ 90ರಷ್ಟು ಮಂದಿ ಪಡೆದಿದ್ದು, ಇನ್ನುಳಿದವರಿಗೆ ವಿಶೇಷ ಕಾರ್ಯಾಚರಣೆ ಮೂಲಕ ಲಸಿಕೆ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಹೇಳಿದರು.

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಆಯುಕ್ತರ ಸಭಾಭವನದಲ್ಲಿ ಭಾನುವಾರ ನಡೆದ ಸಿನಿಮಾ ಮಂದಿರ, ಜಿಮ್‌, ಈಜುಕೊಳ, ಕಲ್ಯಾಣ ಮಂಟಪಗಳ ಮಾಲೀಕರ ಹಾಗೂ ಧಾರ್ಮಿಕ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ಧಾರವಾಡ ನಗರ ಪ್ರದೇಶದಲ್ಲಿ ಶೇ 99ರಷ್ಟು ಮಂದಿ ಲಸಿಕೆ ಪಡೆದಿದ್ದಾರೆ. ಆದರೆ ಹುಬ್ಬಳ್ಳಿಯ ಬಾಣತಿಕಟ್ಟೆ, ಅಯೋಧ್ಯಾನಗರ, ಗಣೇಶಪೇಟೆ, ಚಲವಾದಿ ಓಣಿ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಅದರ ಪ್ರಮಾಣ ಕೇವಲ ಶೇ 40ರಷ್ಟು. ಈ ಭಾಗದ ಜನರಿಗೆ ಧಾರ್ಮಿಕ ಹಾಗೂ ಸಮಾಜದ ಮುಖಂಡರು ತಿಳಿವಳಿಕೆ ನೀಡಿ ಲಸಿಕೆ ಪಡೆಯಲು ಪ್ರೇರೇಪಿಸಬೇಕು’ ಎಂದರು.

‘ಲಸಿಕೆಯ ಎರಡನೇ ಡೋಸ್‌ ಅನ್ನು ಶೇ 51ರಷ್ಟು ಮಂದಿ ಪಡೆದಿದ್ದಾರೆ. ಮೊದಲ ಡೋಸ್‌ ಪಡೆದಾಗ ಎರಡನೇ ಡೋಸ್‌ ಪಡೆಯಲು ನಿಗದಿತ ಅವಧಿ ಇರುವುದರಿಂದ ಅದರ ಪ್ರಮಾಣ ಕಡಿಮೆಯಾಗಿದೆ. ಮನೆ ಮನೆಗೆ ತೆರಳಿ ಲಸಿಕೆ ನೀಡಲು ಸಿದ್ಧರಾಗಿದ್ದೇವೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಾನಗರ ಪಾಲಿಕೆ ಹಾಗೂ ತಾಲ್ಲೂಕು ಆಡಳಿತ ವೈದ್ಯರನ್ನೊಳಗೊಂಡ ಆರು ತಂಡಗಳನ್ನು ರಚಿಸಿ, ಕಾರ್ಯಾಚರಣೆ ನಡೆಸುತ್ತಿದೆ’ ಎಂದರು.

‘ಕಲ್ಯಾಣ ಮಂಟಪಗಳ ಮಾಲೀಕರು ಮದುವೆ ನಡೆಸುವವರಿಂದ ಕಡ್ಡಾಯವಾಗಿ ಎರಡು ಡೋಸ್‌ ಲಸಿಕೆ ಪಡೆದ ಅತಿಥಿಗಳಿಗೆ ಮಾತ್ರ ಸಮಾರಂಭಕ್ಕೆ ಅವಕಾಶ ನೀಡುತ್ತೇವೆ ಎನ್ನುವ ಮುಚ್ಚಳಿಕೆ ಬರೆಯಿಸಿಕೊಳ್ಳಬೇಕು. ಮದುವೆ ಸಂದರ್ಭದಲ್ಲಿ ಪಾಲಿಕೆ ಸಿಬ್ಬಂದಿ ಬಂದು ಅತಿಥಿಗಳನ್ನು ಪರಿಶೀಲಿಸಿದಾಗ, ಸೋಂಕು ಅಥವಾ ಲಸಿಕೆ ಪಡೆಯದಿರುವುದು ಪತ್ತೆಯಾದರೆ ಕಲ್ಯಾಣ ಮಂಟಪವನ್ನು ನಿಷೇಧಿತ ವಲಯ ಎಂದು ಘೋಷಿಸಲಾಗುವುದು’ ಎಂದು ಎಚ್ಚರಿಸಿದರು.

‘ಸಿನಿಮಾ ಮಂದಿರಗಳ ಪ್ರವೇಶ ದ್ವಾರದಲ್ಲಿ ಹಾಗೂ ಟಿಕೆಟ್‌ ಕೌಂಟರ್‌ನಲ್ಲಿ ಎರಡು ಡೋಸ್‌ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶ ಎಂದು ನಮೂದಿಸಬೇಕು. ಸಾರ್ವಜನಿಕ ಉದ್ಯಾನಕ್ಕೂ ಎರಡು ಡೋಸ್‌ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶ ನೀಡಬೇಕು. ಇಂತಹ ಪ್ರದೇಶಗಳಲ್ಲಿ ಪ್ರತಿದಿನ ಕಾರ್ಯಾಚರಣೆ ನಡೆಸಿ ಶೇ 10ರಷ್ಟು ಮಂದಿಯನ್ನು ಪರಿಶೀಲಿಸಲಾಗುವುದು. ಶನಿವಾರ ನಡೆಸಿದ ಕಾರ್ಯಾಚರಣೆಯಲ್ಲಿ ಮಾಸ್ಕ್‌ ಧರಿಸದವರಿಂದ ₹70 ಸಾವಿರ ದಂಡ ಸಂಗ್ರಹಿಸಲಾಗಿದೆ’ ಎಂದು ತಿಳಿಸಿದರು.

ಎಲ್ಲ ವಿದ್ಯಾರ್ಥಿಗಳ ಪರೀಕ್ಷೆ: ‘ಎಸ್‌ಡಿಎಂ ಕಾಲೇಜಿನಲ್ಲಿ ಇಬ್ಬರು ಕೇರಳ ಹಾಗೂ ಒಬ್ಬರು ಮಹಾರಾಷ್ಟ್ರದ ವಿದ್ಯಾರ್ಥಿ ಇದ್ದು, ಊರಿಗೆ ಹೋಗಿ ಬಂದಿರುವ ಮಾಹಿತಿ ಇದೆ. ಅವರನ್ನು ಬಿಟ್ಟು ಹೊಸದಾಗಿ ಯಾರೂ ಅಲ್ಲಿ ಪ್ರವೇಶ ಪಡೆದಿಲ್ಲ. ಕಾಲೇಜಿನ 240 ವಿದ್ಯಾರ್ಥಿಗಳ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಮುಂದಿನ ಹತ್ತು ದಿನಗಳಲ್ಲಿ ಎಲ್ಲ ಶಾಲಾ, ಕಾಲೇಜು, ವಸತಿ ನಿಲಯಗಳಲ್ಲಿನ ವಿದ್ಯಾರ್ಥಿಗಳನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುವುದು’ ಎಂದರು.

ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್‌, ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಸುಶೀಲಾ, ಉಪವಿಭಾಗಾಧಿಕಾರಿ ಡಾ. ಗೋಪಾಲಕೃಷ್ಣ, ಪಾಲಿಕೆ ಉಪ ಆಯುಕ್ತ ಅಜೀಜ್‌ ದೇಸಾಯಿ, ತಹಶೀಲ್ದಾರ್‌ ಶಶಿಧರ ಮಾಡ್ಯಾಳ, ಅಲ್ತಾಫ್‌ ಕಿತ್ತೂರ, ಯೂಸೂಫ್‌ ಸವಣೂರ ಇದ್ದರು.

‘ಅಗತ್ಯವಿದ್ದರೆ ಮಾರ್ಷಲ್‌ಗಳ ನೇಮಕ’:

‘ಕೋವಿಡ್‌ ಎರಡನೇ ಅಲೆ ಸಂದರ್ಭದಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲು ನೇಮಕ ಮಾಡಿಕೊಂಡಿರುವ ಮಾರ್ಷಲ್‌ಗಳು ಸರಿಯಾಗಿ ಕರ್ತವ್ಯ ನಿರ್ವಹಿಸಿಲ್ಲ. ಅವರ ಕೆಲಸ ನೋಡಿಕೊಂಡು 100 ಮಾರ್ಷ್‌ಗಳನ್ನು ನೇಮಕ ಮಾಡಿಕೊಳ್ಳುವ ಯೋಚನೆ ಇತ್ತು. ಈಗ ಪರಿಸ್ಥಿತಿ ನೋಡಿಕೊಂಡು ಅಗತ್ಯವಿದ್ದರೆ ಮಾತ್ರ ನೇಮಕಕ್ಕೆ ಮುಂದಾಗುತ್ತೇವೆ’ ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ್‌ ಹೇಳಿದರು.

ಲಸಿಕೆ ಪಡೆಯಲು ಹಿಂಜರಿಯುತ್ತಾರೆ: ನಿರಂಜನಯ್ಯ:

‘ಕೆಲವು ಪ್ರದೇಶಗಳ ಜನರು ತಪ್ಪು ತಿಳಿವಳಿಕೆಯಿಂದ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ. ಅವರಿಗೆ ಧಾರ್ಮಿಕ ಮುಖಂಡರಿಂದ ತಿಳಿ ಹೇಳುವ ಕೆಲಸ ಆಗಬೇಕಿದೆ. ಮಾರುಕಟ್ಟೆ ಪ್ರದೇಶದಲ್ಲಿ ಅಂತರವೂ ಇಲ್ಲ, ಮಾಸ್ಕ್‌ ಸಹ ಇಲ್ಲ. ಈ ನಿಟ್ಟಿನಲ್ಲಿ ತುರ್ತು ಕ್ರಮ ಅಗತ್ಯವಿದೆ. ಕೆಲವು ಪ್ರದೇಶದ ವಾಸಿಗಳು ಲಸಿಕೆ ಪಡೆಯಲು ಹೋದಾಗ, ಖಾಲಿಯಾಗಿದೆ ಎಂದು ಮರಳಿ ಕಳುಹಿಸಿದ ಉದಾಹರಣೆಯೂ ಇದೆ’ ಎಂದು ಪಾಲಿಕೆ ಸದಸ್ಯ ನಿರಂಜನಯ್ಯ ಹಿರೇಮಠ ಸಭೆಯ ಗಮನಕ್ಕೆ ತಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು