ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಾಂತರ ಆರೋಪ; ಡಿಸಿಪಿಗೆ ದೂರು

ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ
Last Updated 16 ನವೆಂಬರ್ 2022, 3:54 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹಳೇಹುಬ್ಬಳ್ಳಿಯ ಶಿವಶಂಕರ ಕಾಲೊನಿಯಲ್ಲಿ 20ಕ್ಕೂ ಹೆಚ್ಚು ಮಂದಿ ಸೇರಿ ಹಿಂದೂ ಧರ್ಮದವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಗುರುಭಜಕ ಶಿಕ್ಕಲಗಾರ ಸಮಾಜ ಸುಧಾರಣಾ ಹಾಗೂ ಸೇವಾ ಸಂಘ ಮಂಗಳವಾರ ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಡಿಸಿಪಿ ಸಾಹಿಲ್‌ ಬಾಗ್ಲಾ ಅವರಿಗೆ ದೂರು ಸಲ್ಲಿಸಿದೆ.

ಸಿದ್ಧಾರೂಢ ಮಠದ ಶಿವಶಂಕರ ಕಾಲೊನಿಯಲ್ಲಿ ಸಭೆ ನಡೆಸಿ, ಮೆರವಣಿಗೆ ಮೂಲಕ ಬಂದು ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಅವರನ್ನು ಠಾಣಾ ಮುಂಭಾಗದಿಂದ ಚದುರಿಸಿ, ಮುಖಂಡರನ್ನಷ್ಟೇ ಒಳಗೆ ಕರೆಸಿಕೊಂಡು ಚರ್ಚಿಸಿದರು. ಆರೋಪ ಮಾಡುವುದಕ್ಕಿಂತ ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದರಿಂದ, ಸಮಾಜದ ವತಿಯಿಂದ ದೂರು ಸಲ್ಲಿಸಿದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ವಿಶ್ವಹಿಂದೂ ಪರಿಷತ್‌ ಮುಖಂಡ ಜಯತೀರ್ಥ ಕಟ್ಟಿ, ‘ಹಲವಾರು ಬಡಾವಣೆಗಳಲ್ಲಿ ಕ್ರೈಸ್ತ ಮಿಷನರಿಗಳು ಆಮಿಷಗಳನ್ನು ತೋರಿಸಿ ಮತಾಂತರ ಮಾಡುತ್ತಿವೆ. ಅತ್ಯಂತ ಕಡಿಮೆ ಜನಸಂಖ್ಯೆ ಹಾಗೂ ಕಡುಬಡವರಾಗಿರುವ ಶಿಕ್ಕಲಿಗಾರ ಸಮಾಜದವರಿಗೆ ಹಣದ ಆಮಿಷ ತೋರಿಸಿ ಮತಾಂತರ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಅದರಿಂದ ಇಡೀ ಸಮಾಜದ ಜನ ರೊಚ್ಚಿಗೆದ್ದು ಠಾಣೆಗೆ ಬಂದಿದ್ದಾರೆ. ಸಂಬಂಧ ಪಟ್ಟವರ ವಿರುದ್ಧ ಮತಾಂತರ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಂಡು ಬಂಧಿಸಬೇಕು. ಹುಬ್ಬಳ್ಳಿಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಚರ್ಚ್‌ಗಳನ್ನು ಬಂದ್‌ ಮಾಡಬೇಕು. ಇಲ್ಲದಿದ್ದರೆ ವಿಶ್ವಹಿಂದೂ ಪರಿಷತ್‌ ವಿವಿಧ ಹಿಂದೂ ಸಂಘಟನೆಗಳ ಜೊತೆ ಸೇರಿ ಹೋರಾಟ ಮಾಡಿ ಬಂದ್‌ ಮಾಡಲಿದೆ’ ಎಂದು ಎಚ್ಚರಿಸಿದರು.

ಪ್ರತಿ ಭಾನುವಾರ ಬಂದು ಪ್ರಾರ್ಥನೆ ನಡೆಸುತ್ತ, ಸಮಾಜದ ಬಡವರಿಗೆ ₹500 ನೀಡಿ ಆಮಿಷ ತೋರುತ್ತಾರೆ. ಈಗಾಗಲೇ 30ಕ್ಕೂ ಹೆಚ್ಚು ಮಂದಿ ಮತಾಂತರವಾಗಿದ್ದಾರೆ. ಪೊಲೀಸ್‌ ಇಲಾಖೆ ಮತಾಂತರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.

ದುರ್ಗಪ್ಪ ಮುದ್ದಿ, ಪ್ರಕಾಶ ಕಟ್ಟಿಮನಿ, ಗುರು ವೀರಾಪುರ, ಹರೀಶ ಜಂಗಲಿ, ಸುನೀಲ್ ಜಿಲ್ಲಾಳ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಇದ್ದರು.

‘ಮತಾಂತರ ಮಾಡುತ್ತಿದ್ದಾರೆ ಎಂದು ಶಿಕ್ಕಲಿಗಾರ ಸಮಾಜದವರು ದೂರು ನೀಡಿದ್ದಾರೆ. ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಡಿಸಿಪಿ ಸಾಹಿಲ್‌ ಬಾಗ್ಲಾ ‘ಪ್ರಜಾವಾಣಿ’ಗೆ ತಿಳಿಸಿದರು.

ವಿದ್ಯಾರ್ಥಿ ಅಪಹರಣ; ಮೂವರ ಬಂಧನ: ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿಯೊಂದಿಗೆ ಮಾತನಾಡಿದ ವಿಷಯಕ್ಕೆ ಸಂಬಂಧಿಸಿ ನಾಲ್ವರು ವಿದ್ಯಾರ್ಥಿಗಳ ತಂಡ ಅವನನ್ನು ಅಪಹರಿಸಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿದ ಪ್ರಕರಣ ಗೋಕುಲ‌ರಸ್ತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಹಲ್ಲೆ ನಡೆಸಿದ ಆರೋಪಿಗಳಾದ ಮಹಮ್ಮದಗೌಸ್, ಸೋಹೆಲ್ ಹಾಗೂ ಪ್ರತೀಕ ಬಂಧಿತ ವಿದ್ಯಾರ್ಥಿಗಳು. ಮತ್ತೊಬ್ಬ ವಿದ್ಯಾರ್ಥಿ ಸೌರಭ ಪರಾರಿಯಾಗಿದ್ದಾನೆ.

ಗೋಕುಲ ರಸ್ತೆ ಅಕ್ಷಯ ಪಾರ್ಕ್‌ನ ಕಾಲೇಜ್‌ನಲ್ಲಿ ವಿದ್ಯಾರ್ಥಿ ಮಂಜುನಾಥ ಹುಡುಗಿಗೆ ಮಾತನಾಡಿಸಿದ್ದಾನೆ. ಈ ವಿಚಾರವಾಗಿ ಅದೇ ಕಾಲೇಜಿನ ವಿದ್ಯಾರ್ಥಿಗಳು ಅವನ ಜೊತೆ ಜಗಳ ಮಾಡಿದ್ದಾರೆ. ಮುಂದುವರಿದು ಮಂಜುನಾಥನನ್ನು ಅದೇ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಅಕ್ಷಯ ಪಾರ್ಕ್‌ನಿಂದ ಅವನನ್ನು ಒತ್ತಾಯ ಪೂರ್ವಕವಾಗಿ ಕುಸುಗಲ್ಲ ರಸ್ತೆಯ ಮಿಡ್ ಮ್ಯಾಕ್ ಹಿಂದೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT