ಭಾನುವಾರ, ಜುಲೈ 25, 2021
24 °C

ಹುಬ್ಬಳ್ಳಿ| ಚಿಕಿತ್ಸೆಗೆ ನಿರಾಕರಣೆ ಆರೋಪ; ವ್ಯಕ್ತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕಫ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಹಳೇ ಹುಬ್ಬಳ್ಳಿಯ ಇಸ್ಲಾಂಪುರ ಓಣಿಯ ಸರ್ಫರಾಜ ಖಾನ್‌ ಜಮಖಾನೆ (43) ಅವರಿಗೆ ನಗರದ ಎರಡು ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸಿದ ಕಾರಣ ಅವರು ಮೃತಪಟ್ಟಿದ್ದಾರೆ.

ಸರ್ಫರಾಜ್‌ ಎರಡು ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಮೊದಲು ಒಂದು ಖಾಸಗಿ ಆಸ್ಪತ್ರೆಗೆ ಹೋದಾಗ ಕೊರೊನಾ ಸೋಂಕಿನ ಶಂಕೆಯಿದ್ದು, ಆಸ್ಪತ್ರೆಯಲ್ಲಿ ದಾಖಲಿಸಲು ಅವಕಾಶ ಕೊಡುವುದಿಲ್ಲ ಎಂದು ಹೇಳಿದರು. ಇನ್ನೊಂದು ಆಸ್ಪತ್ರೆಯ ವೈದ್ಯರಿಗೆ ಕೈ ಮುಗಿದು ಪರಿಪರಿಯಾಗಿ ಬೇಡಿಕೊಂಡರೂ ಚಿಕಿತ್ಸೆ ಕೊಡಲು ಅವರು ಒಪ್ಪಲಿಲ್ಲ ಎಂದು ಸರ್ಫರಾಜ್ ಅವರ ಸಂಬಂಧಿ ಇಮ್ರಾನ್‌ಖಾನ್‌ ಮುಲ್ಲಾ ‘ಪ್ರಜಾವಾಣಿ’ಗೆ ತಿಳಿಸಿದರು.

ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಕಿಮ್ಸ್‌ ಆಸ್ಪತ್ರೆಗೆ ಹೋದಾಗ ಅಲ್ಲಿನ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದರು. ಕೆಲ ಹೊತ್ತಿನಲ್ಲಿಯೇ ಸರ್ಫರಾಜ್‌ ಮೃತಪಟ್ಟರು.

ಕೊರೊನಾ ಪರೀಕ್ಷೆಗೆ ಒಳಗಾದರೆ ಅದರ ವರದಿ ಬರಲು ಕನಿಷ್ಠ ಎರಡು ದಿನಗಳಾದರೂ ಬೇಕಾಗುತ್ತದೆ. ಅಲ್ಲಿಯ ತನಕವಾದರೂ ಚಿಕಿತ್ಸೆ ಕೊಡಿ ಎಂದು ಬೇಡಿಕೊಂಡರೂ ಖಾಸಗಿ ಆಸ್ಪತ್ರೆಯವರು ಕೇಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ‘ಮಾಧ್ಯಮದವರ ಮೂಲಕ ಈ ವಿಷಯ ಗೊತ್ತಾಗಿದೆ. ಮೃತ ವ್ಯಕ್ತಿಯ ಕುಟುಂಬದವರು ಲಿಖಿತವಾಗಿ ದೂರು ಕೊಟ್ಟರೆ ತಪ್ಪಿತಸ್ಥ ಆಸ್ಪತ್ರೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು