ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮ ಅಕಾಡೆಮಿ ಬೈಲಾ ತಿದ್ದುಪಡಿಗೆ ಕ್ರಮ: ಸಿಎಂ ಬಸವರಾಜ ಬೊಮ್ಮಾಯಿ ಭರವಸೆ

Last Updated 28 ಫೆಬ್ರುವರಿ 2023, 8:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಮಾಧ್ಯಮ ಅಕಾಡೆಮಿಯಲ್ಲಿ ರಾಜ್ಯದ ಎಲ್ಲಾ ಭಾಗಗಳಿಗೂ ಸೂಕ್ತ ಪ್ರಾತಿನಿಧ್ಯ ಸಿಗುವಂತೆ ಬೈಲಾ ತಿದ್ದುಪಡಿ ಹಾಗೂ ಅಕಾಡೆಮಿಯ ಪ್ರಶಸ್ತಿಗಳ ಆಯ್ಕೆಗೆ ಮಾನದಂಡ ನಿಗದಿಪಡಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಆದರ್ಶನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಂಗಳವಾರ ಉತ್ತರ ಕರ್ನಾಟಕ ಪತ್ರಕರ್ತರ ನಿಯೋಗದಿಂದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ‘ಬೈಲಾ ಮತ್ತು ಪ್ರಶಸ್ತಿಗೆ ಮಾನದಂಡ ನಿಗದಿಗೆ ಸಮಿತಿ ರಚಿಸುವಂತೆ ಸೂಚನೆ ನೀಡಲಾಗುವುದು’ ಎಂದರು.

‘ಅಕಾಡೆಮಿಯಲ್ಲಿ ಪ್ರಾತಿನಿಧ್ಯ ಮತ್ತು ಪ್ರಶಸ್ತಿ ಎರಡೂ ವಿಷಯದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಮೊದಲಿನಿಂದಲೂ ಅನ್ಯಾಯವಾಗುತ್ತಿದೆ. ಇಲ್ಲಿನ ಪತ್ರಕರ್ತರು ಈಗಲಾದರೂ ಎಚ್ಚೆತ್ತಿಕೊಂಡಿರುವುದು ಸ್ವಾಗತಾರ್ಹ. ಆ ನಿಟ್ಟಿನಲ್ಲಿ ಎರಡೂ ವಿಷಯದಲ್ಲಿ ಆಗಬೇಕಾದ ಬದಲಾವಣೆಯನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಲಾಗುವುದು. ಈ ದಿಸೆಯಲ್ಲಿ ಎಲ್ಲ ಭಾಗಗಳ ಪತ್ರಕರ್ತರ ಸಹಕಾರ ಅವಶ್ಯ’ ಎಂದು ಹೇಳಿದರು.

ಮನವಿಯಲ್ಲೇನಿದೆ?: ಅಕಾಡೆಮಿಯ ಸದಸ್ಯರಲ್ಲಿ ಶೇ 50ರಷ್ಟು ಸದಸ್ಯತ್ವವನ್ನು ಉತ್ತರ ಕರ್ನಾಟಕ ಭಾಗಕ್ಕೆ ನೀಡಬೇಕು. ಪ್ರಶಸ್ತಿ ಆಯ್ಕೆಯ ಮಾನದಂಡಗಳು ಬದಲಾವಣೆಯಾಗಬೇಕು. ಪತ್ರಕರ್ತೆಯರಿಗೆ ಆದ್ಯತೆ ಸಿಗಬೇಕು. ಫೋಟೊ/ ವಿಡಿಯೊ ಜರ್ನಲಿಸ್ಟ್‌, ಗ್ರಾಫಿಕ್ ಡಿಸೈನರ್/ವ್ಯಂಗ್ಯ ಚಿತ್ರಕಾರರನ್ನೂ ಪ್ರಶಸ್ತಿಗಳಿಗೆ ಪರಿಗಣಿಸಬೇಕು. ಈ ಅನ್ಯಾಯಗಳನ್ನು ಸರಿಪಡಿಸುವಂಥ ತಿದ್ದುಪಡಿ ಆಗಬೇಕು.

ಮಾರ್ಚ್ 13ರಂದು ಅಕಾಡೆಮಿಯು ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ನಿರ್ಧರಿಸಿದೆ. ಅದಕ್ಕೂ ಮೊದಲೇ ಈಗ ಘೋಷಿಸಿರುವ ನಾಲ್ಕು ವರ್ಷಗಳ ಪ್ರಶಸ್ತಿ ಪಟ್ಟಿಯನ್ನು ಆಯಾ ಪುರಸ್ಕೃತರು ಕೆಲಸ ಮಾಡುತ್ತಿರುವ ಜಿಲ್ಲೆಗಳ ಹೆಸರಿನ ಜೊತೆಗೆ ಮರು ಪ್ರಕಟಿಸಬೇಕು. ಹೀಗಾಗದಿದ್ದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಕಾಡೆಮಿ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ನಿಯೋಗ ಎಚ್ಚರಿಕೆ ನೀಡಿತು.

ಹಿರಿಯ ಪತ್ರಕರ್ತರಾದ ಮೋಹನ ಹೆಗಡೆ, ಬಂಡು ಕುಲಕರ್ಣಿ, ವೆಂಕಟೇಶ ಪ್ರಭು, ರಶ್ಮಿ ಎಸ್., ರಹಮತ್ ಕಂಚಗಾರ, ಬಸವರಾಜ ಕಟ್ಟಿಮನಿ, ಗಿರೀಶ ಪಟ್ಟಣಶೆಟ್ಟಿ, ಲೋಚನೇಶ ಹೂಗಾರ, ವಿಜಯ ಹೂಗಾರ, ಪ್ರಮೋದ ವೈದ್ಯ, ಸಂಗಮೇಶ ಮೆಣಸಿನಕಾಯಿ, ಅಬ್ಬಾಸ್ ಮುಲ್ಲಾ, ಗುರುರಾಜ ಹೂಗಾರ, ಶಿವಾನಂದ ಗೊಂಬಿ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT