ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಳಿನಗರದ 5 ವೃತ್ತ ಅಭಿವೃದ್ಧಿಗೆ ಕ್ರಮ: ಹೊರಟ್ಟಿ

ಸಂಚಾರ ದಟ್ಟಣೆ ನಿರ್ವಹಣೆ: ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಹೊರಟ್ಟಿ ಸಭೆ
Last Updated 29 ಡಿಸೆಂಬರ್ 2022, 5:17 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಅವಳಿನಗರದ ಸಂಚಾರ ದಟ್ಟಣೆ ತಗ್ಗಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ನಿಟ್ಟಿನಲ್ಲಿಹುಬ್ಬಳ್ಳಿಯ ಶಾರದಾ ಹೋಟೆಲ್, ಬಂಕಾಪುರ ಚೌಕ, ಅಕ್ಷಯ ಪಾರ್ಕ್, ಧಾರವಾಡದ ದಾಸನಕೊಪ್ಪ ಹಾಗೂ ಕೋರ್ಟ್ ವೃತ್ತ ಸೇರಿ ಒಟ್ಟು ಐದು ಪ್ರಮುಖ ವೃತ್ತಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಬೆಳಗಾವಿಯ ಸುವರ್ಣಸೌಧದ ಪರಿಷತ್ತಿನ ಸಮಿತಿ ಸಭಾಂಗಣದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಪೊಲೀಸ್ ಕಮಿಷನರ್‌ ಜೊತೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಬೆಂಗಳೂರು ರೀತಿಯಲ್ಲಿ ಸಂಚಾರಕ್ಕೆ ತೊಂದರೆಯಾಗದಂತೆ ಯೋಜನೆ ರೂಪಿಸಲಾಗುವುದು. ಅದಕ್ಕಾಗಿ, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಪೊಲೀಸ್ ಕಮಿಷನರ್ ಜೊತೆ ಮತ್ತೆ ಸಭೆ ನಡೆಸಲಾಗುವುದು’ ಎಂದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ‘ಸಂಚಾರ ದಟ್ಟಣೆ ಕುರಿತು ತಜ್ಞರ ವರದಿ ಪಡೆಯಲಾಗಿದ್ದು, ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ವ್ಯಾಪಾರಸ್ಥರ ಮನವೊಲಿಸಿ ಒಲಿಸಿ ವರದಿಯನ್ನು ಅನುಷ್ಠಾನಕ್ಕೆ ತರಲಾಗುವುದು. ನಗರದ ಮಧ್ಯಭಾಗದಲ್ಲಿ ವ್ಯಾಪಾರಸ್ಥರ ಸಗಟು ಮಾರಾಟ ಅಂಗಡಿಗಳಿರುವುದರಿಂದ ಹಾಗೂ ಸರಕು ಲಾರಿಗಳು ಪ್ರವೇಶಿಸುವುದಿಂದ ದಟ್ಟಣೆಯಾಗುತ್ತಿದೆ. ಸಗಟು ವ್ಯಾಪಾರಿಗಳು ಎಪಿಎಂಸಿಗೆ ಸ್ಥಳಾಂತರವಾಗಬೇಕು. ಪ್ರಮುಖ ವೃತ್ತಗಳು, ಪಾದಚಾರಿ ಮಾರ್ಗ ಹಾಗೂ ಪಾರ್ಕಿಂಗ್‌ ಸ್ಥಳವನ್ನು ಸರಿಪಡಿಸಬೇಕಿದೆ’ ಎಂದರು.

ಪೊಲೀಸ್ ಕಮಿಷನರ್ ಲಾಭೂ ರಾಮ್ ಮಾತನಾಡಿ, ‘ಅವಳಿನಗರದಲ್ಲಿ 17 ಸಂಚಾರ ವೃತ್ತಗಳನ್ನು ಅಭಿವೃದ್ಧಿಪಡಿಸಬೇಕಿದೆ. ಜೊತೆಗೆ, ಪಾಲಿಕೆಯು ಪಾವತಿ ಪಾರ್ಕಿಂಗ್‌ಗಳನ್ನು ಆರಂಭಿಸಬೇಕು. ಟ್ರಾನ್ಸ್‌ಪೋರ್ಟ್ ಕಚೇರಿಗಳನ್ನು ಹೊರವಲಯಕ್ಕೆ ಸ್ಥಳಾಂತರಿಸಬೇಕು. ಆಟೊರಿಕ್ಷಾ ನಿಲ್ದಾಣಗಳನ್ನು ನಿಯಂತ್ರಿಸಬೇಕು. ಬೀದಿ ವ್ಯಾಪಾರಿಗಳಿಗೆ ಪ್ರತ್ಯೇಕ ಮಾರುಕಟ್ಟೆ ನಿರ್ಮಿಸಬೇಕು. ರಸ್ತೆ ವಿಭಜಕ ಅಳವಡಿಸಬೇಕು. ಧಾರವಾಡದ ಕೋರ್ಟ್ ಬಳಿಯ ಬಿಆರ್‌ಟಿಎಸ್ ಬಸ್ ತಂಗುದಾಣ ತೆರವುಗೊಳಸಬೇಕು’ ಎಂದು ಹೇಳಿದರು.

ಶಾಸಕರಾದ ಪ್ರಸಾದ ಅಬ್ಬಯ್ಯ, ವಿಧಾನ ಪರಿಷತ್ ಸದಸ್ಯರಾದ ಎಸ್‌.ವಿ. ಸಂಕನೂರು, ಪ್ರದೀಪ ಶೆಟ್ಟರ್, ಗೃಹ ಇಲಾಖೆ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಡಿಸಿಪಿ ಗೋಪಾಲ ಬ್ಯಾಕೋಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT