ಮರಗಳಿಗೆ ಜಾಹೀರಾತು ಅಳವಡಿಸಿದರೆ ಕಠಿಣ ಕ್ರಮ

7

ಮರಗಳಿಗೆ ಜಾಹೀರಾತು ಅಳವಡಿಸಿದರೆ ಕಠಿಣ ಕ್ರಮ

Published:
Updated:
Deccan Herald

ಧಾರವಾಡ: ಮರಗಳಿಗೆ ಜಾಹೀರಾತು ಅಳವಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಲಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ವಿ.ಮಂಜುನಾಥ ಹೇಳಿದರು.

ಮರಗಳಿಗೆ ಅಳವಡಿಸಿದ್ದ ಜಾಹೀರಾತು ಫಲಕಗಳನ್ನು ಶನಿವಾರ ತೆರುವುಗೊಳಿಸುವ ಮೂಲಕ ಜಾಹೀರಾತು ಮುಕ್ತ ಮರ, ಗಿಡ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅನುಮತಿ ಇಲ್ಲದೆ ಮರಗಳಿಗೆ ಜಾಹೀರಾತು ಫಲಕ, ಪೋಸ್ಟರ್, ಬ್ಯಾನರ್‌ಗಳನ್ನು ಅಳವಡಿಸಲಾಗುತ್ತಿದೆ. ಇದು ಮರಗಳ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ರೀತಿ ಮಾಡುವವರ ವಿರುದ್ಧ ಅರಣ್ಯ ಹಾಗೂ ಪಾಲಿಕೆ ಕಾಯ್ದೆ ಅನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದು’  ಎಂದರು.

ನೈಸರ್ಗಿಕವಾಗಿ ಗಾಳಿ, ನೀರು, ಬೆಳಕು ಪಡೆದು ಸ್ವಚ್ಛಂದವಾಗಿ ಬೆಳೆಯಬೇಕು. ಅದಕ್ಕೆ ಯಾವುದೇ ರೀತಿಯಿಂದಲೂ ಧಕ್ಕೆ ತರಬಾರದು. ಅರಣ್ಯ ಹಾಗೂ ಮರಗಳ ಸಂಖ್ಯೆ ಕಡಿಮೆ ಆಗಿರುವುದು ಪ್ರಕೃತಿ ವಿಕೋಪಕ್ಕೆ ಕಾರಣವಾಗುತ್ತಿದೆ. ಇದರಿಂದ ಜೀವ ಸಂಕುಲ ಅಪಾಯಕ್ಕೆ ಸಿಲುಕಿದೆ ಎಂದು ಹೇಳಿದರು.

ನಗರ ವ್ಯಾಪ್ತಿಯಲ್ಲಿರುವ ಮರಗಳಿಗೆ ಅನಧಿಕೃವಾಗಿ ಅಳವಡಿಸಿರುವ ಎಲ್ಲ ರೀತಿಯ ಜಾಹೀರಾತುಗಳನ್ನು ವಿವಿಧ ಸಂಘ ಸಂಸ್ಥೆ ಮತ್ತು ಮಹಾನಗರ ಪಾಲಿಕೆ ಸಹಯೋಗದಲ್ಲಿ ತೆರವುಗೊಳಿಸುವ ಕಾರ್ಯ ಆರಂಭಿಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಮಹೇಶಕುಮಾರ ಹೇಳಿದರು.

ನೆಚರ್ ಫಸ್ಟ್ ಸಂಸ್ಥೆಯ ಮುಖ್ಯಸ್ಥ ಪಿ.ವಿ.ಹಿರೇಮಠ ಮಾತನಾಡಿ, ಆ.18 ರಿಂದ 10 ದಿನಗಳ ಕಾಲ ಮರದ ಮೇಲೆ ಅಳವಡಿಸಿರುವ ಜಾಹೀರಾತುಗಳನ್ನು ತೆರವುಗೊಳಿಸಲಾಗುವುದು. ನಾಲ್ಕು ಜನರ ತಂಡ ರಚಿಸಿ, ಪ್ರತಿ ತಂಡದಿಂದ ಪ್ರತಿಯೊಂದು ಓಣಿಗೆ ತೆರಳಿ ಕಾರ್ಯಾಚರಣೆ ನಡೆಸಲಾಗುವುದು ಎಂದರು.

ಪಾಲಿಕೆಯ ಸಹಾಯಕ ಆಯುಕ್ತ ರಂಜೀತಕುಮಾರ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !