ಧಾರವಾಡ: ಹುಬ್ಬಳ್ಳಿಯ ಅಮೂಲ್ಯ ಶಿಶು ಗೃಹದ ವಿಶೇಷ ಅಗತ್ಯವುಳ್ಳ ಇಬ್ಬರು ಬಾಲಕಿಯರು ದತ್ತು ಪ್ರಕ್ರಿಯೆ ಮೂಲಕ ಅಮೆರಿಕ ಸೇರಲಿದ್ದಾರೆ. 2024–25ರ ಸಾಲಿನಲ್ಲಿ ಅವರನ್ನು ಅಲ್ಲಿನ ಇಬ್ಬರು ದಂಪತಿಗಳು ದತ್ತು ಪಡೆದಿದ್ದಾರೆ.
2023–24ನೇ ಸಾಲಿನಲ್ಲಿ ಅಮೆರಿಕ ದಂಪತಿಗೆ ಒಂದು ಗಂಡು ಮಗು ಮತ್ತು 2022–23ನೇ ಸಾಲಿನಲ್ಲಿ ಕೆನಡಾ ಮತ್ತು ಅಮೆರಿಕ ದಂಪತಿಗೆ ತಲಾ ಒಂದು ಗಂಡು ಮಗುವನ್ನು ಈಗಾಗಲೇ ದತ್ತು ನೀಡಲಾಗಿದೆ.
‘ಅಮೆರಿಕಕ್ಕೆ ಇಬ್ಬರು ಮಕ್ಕಳನ್ನು ದತ್ತು ನೀಡುವ ನಿಟ್ಟಿನ ಪ್ರಕ್ರಿಯೆಗಳು ಬಹುತೇಕ ಪೂರ್ಣಗೊಂಡಿವೆ. ದತ್ತು ಪಡೆಯುವವರ ಸಮಗ್ರ ವಿವರ (ವಿದ್ಯಾರ್ಹತೆ, ಉದ್ಯೋಗ...) ಪರಿಶೀಲನೆ ನಡೆದಿದೆ. ದಂಪತಿಗಳು ಪವರ್ ಆಫ್ ಅಟಾರ್ನಿ ಪಡೆದಿದ್ದಾರೆ. ಮಕ್ಕಳ ಜನ್ಮ ದಿನ ದಾಖಲೆ ನೀಡಿದ ಬಳಿಕ ಅವರು ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವರು’ ಎಂದು ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಅಧಿಕಾರಿ ನೀತಾ ವಾಡ್ಕರ್ ‘ಪ್ರಜಾವಾಣಿ’ಗೆ ತಿಳಿಸಿದರು.
ದತ್ತು ಪಡೆದ ಮಗುವಿನ ನಿರ್ವಹಣೆ ಸರಿಯಾಗಿ ನಡೆದಿದೆಯೇ ಅಥವಾ ಇಲ್ಲವೇ ಎಂಬುದನ್ನು ವಿದೇಶಿ ದತ್ತು ಏಜೆನ್ಸಿಯವರು ಆಗಾಗ್ಗೆ ಮಾಹಿತಿ ಪಡೆಯುವರು. ಸಂಬಂಧಪಟ್ಟ ಸಂಸ್ಥೆಗೆ ನಿಯಮಿತವಾಗಿ ವರದಿಯನ್ನು ಏಜೆನ್ಸಿಯವರು ಸಲ್ಲಿಸುವರು.
ಜಿಲ್ಲೆಯ ಶಿಶು ಗೃಹದಿಂದ 2022–23, 2023–24 ಹಾಗೂ 2024–25ನೇ (ಈವರೆಗೆ) ಸಾಲಿನಲ್ಲಿ 17 ಮಕ್ಕಳನ್ನು ದೇಶದ ವಿವಿಧೆಡೆಯವರು ದತ್ತು ಪಡೆದಿದ್ದಾರೆ. ಕೇರಳಕ್ಕೆ ಎರಡು ಮತ್ತು ತಮಿಳುನಾಡಿಗೆ ಒಂದು , ಧಾರವಾಡ ಜಿಲ್ಲೆಯಲ್ಲಿ ಒಂದು, ಹೊರಜಿಲ್ಲೆಗಳಿಗೆ 13 ಮಕ್ಕಳನ್ನು ದತ್ತು ನೀಡಲಾಗಿದೆ.