ಭಾನುವಾರ, ಸೆಪ್ಟೆಂಬರ್ 19, 2021
23 °C
ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿರುವ ಆಫ್ಘನ್ ವಿದ್ಯಾರ್ಥಿಗಳು

ಧಾರವಾಡ: ಕುಟುಂಬದವರ ಸುರಕ್ಷತೆ ಬಗ್ಗೆ ಆತಂಕ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ‘ತಾಲಿಬಾನಿ ಉಗ್ರ ಪಡೆಗಳು ಆಫ್ಘಾನಿಸ್ತಾನವನ್ನು ಕೈವಶ ಮಾಡಿಕೊಂಡಿದ್ದರಿಂದ ಅಲ್ಲಿರುವ ತಮ್ಮ ಕುಟುಂಬಗಳ ಸುರಕ್ಷತೆ ಬಗ್ಗೆ ಚಿಂತೆಯಾಗುತ್ತಿದೆ’ ಎಂದು ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಆಫ್ಘನ್ ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದರು.

ಕೃಷಿ ವಿಷಯ ಕುರಿತು ಇಲ್ಲಿನ ಸ್ನಾತಕೋತ್ತರ ಪದವಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳಾಗಿ ಕಳೆದ ಕೆಲ ವರ್ಷಗಳಿಂದ ಓದುತ್ತಿರುವ ಈ ವಿದ್ಯಾರ್ಥಿಗಳು, ‘ಇಲ್ಲಿ ನಾವು ಸುರಕ್ಷಿತವಾಗಿದ್ದೇವೆ. ಆದರೆ ಅಲ್ಲಿ ಏನಾಗುತ್ತಿದೆಯೋ ಎಂಬ ಆತಂಕ ಕಾಡುತ್ತಿದೆ‘ ಎಂದು ತಮ್ಮ ಮನದಾಳವನ್ನು ಬಿಚ್ಚಿಟ್ಟಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ವಿದ್ಯಾರ್ಥಿ ನಿಲಯದ ನೋಡಲ್ ಅಧಿಕಾರಿ ಜೋನ್ಸ್, ‘ಆಫ್ಘಾನಿಸ್ತಾನದ ಒಟ್ಟು ಸುಮಾರು 15 ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ. ಇವರಲ್ಲಿ 4 ಜನ ಸಂಶೋಧನಾ ವಿದ್ಯಾರ್ಥಿಗಳು. ಉಳಿದವರು ಸ್ನಾತಕೋತ್ತರ ಕೋರ್ಸ್‌ ಕಲಿಯುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಐವರು ವಿದ್ಯಾರ್ಥಿಗಳು ಸ್ವದೇಶಕ್ಕೆ ಮರಳಿದ್ದಾರೆ. ಅಲ್ಲಿಂದಲೇ ಅವರು ಆನ್‌ಲೈನ್ ತರಗತಿಗಳಲ್ಲಿ ಪಾಲ್ಗೊಂಡಿದ್ದರು. ಸದ್ಯ ಇಲ್ಲಿರುವ ವಿದ್ಯಾರ್ಥಿಗಳು ಸಹಜವಾಗಿ ಆತಂಕದಲ್ಲಿದ್ದಾರೆ‘ ಎಂದರು.

ಆಫ್ಘನ್ ವಿದ್ಯಾರ್ಥಿ ಪಾಮೀರ್ ಪ್ರತಿಕ್ರಿಯಿಸಿ, ‘ಸ್ವದೇಶದಲ್ಲಿರುವ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ತಾಲಿಬಾನಿಗಳು ಇಡೀ ದೇಶವನ್ನೇ ತಮ್ಮ ವಶಕ್ಕೆ ಪಡೆದಿದ್ದಾರೆ. ನಮ್ಮ ಪಾಲಕರು, ಸೋದರ, ಸೋದರಿಯರು, ಮಕ್ಕಳು ಅಲ್ಲಿರುವುದರಿಂದ ಸಹಜವಾಗಿ ಆತಂಕದಲ್ಲಿದ್ದೇವೆ. ಆದರೆ ದೇಶದ ಪ್ರಜೆಗಳಿಗೆ ಯಾವುದೇ ತೊಂದರೆ ಕೊಡುವುದಿಲ್ಲ ಎಂಬ ತಾಲಿಬಾನಿಗಳ ಹೇಳಿಕೆ ಸಮಾಧಾನ ತಂದಿದೆ‘ ಎಂದರು.

ಮತ್ತೊಬ್ಬ ವಿದ್ಯಾರ್ಥಿ ನಸ್ರತ್‌ ಮಾತನಾಡಿ, ‘ಚುನಾಯಿತ ಸರ್ಕಾರ ಅಲ್ಲಿತ್ತು. ಎಲ್ಲವೂ ಸರಿಯಾಗಿ ನಡೆಯುತ್ತಿತ್ತು. ಆದರೆ ಇಂಥ ಪರಿಸ್ಥಿತಿ ಬರುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ. ಇದೊಂದು ಅನಿರೀಕ್ಷಿತ ಬೆಳವಣಿಗೆ. ಕುಟುಂಬದವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಅವರೂ ಆತಂಕದಲ್ಲಿದ್ದಾರೆ. ತಾಲಿಬಾನಿಗಳು ಯಾರ ಮೇಲೆಯೂ ಸೇಡು ತೀರಿಸಿಕೊಳ್ಳುವುದಿಲ್ಲ ಎಂದು ಹೇಳಿರುವುದರಿಂದ ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ ಭವಿಷ್ಯ ಕುರಿತು ಏನೂ ತಿಳಿಯುತ್ತಿಲ್ಲ. ವಿಮಾನಯಾನ ಸ್ಥಗಿತಗೊಂಡಿರುವುದರಿಂದ ಅಲ್ಲಿರುವ ಸಹಪಾಠಿಗಳು ಹೇಗೆ ಮರಳುವುರು ಎಂಬುದೂ ಅರ್ಥವಾಗುತ್ತಿಲ್ಲ‘ ಎಂದರು.

ಈ ವಿದ್ಯಾರ್ಥಿಗಳೊಂದಿಗೆ ಕುಲಪತಿ ಡಾ. ಎಂ.ಬಿ.ಚೆಟ್ಟಿ ಮಾತನಾಡಿ ಧೈರ್ಯ ತುಂಬಿದರು. ಈ ಭೇಟಿ ವೇಳೆ ವಿದ್ಯಾರ್ಥಿಗಳು ತಾವು ಭಾರತದಲ್ಲಿ ಸುರಕ್ಷಿತವಾಗಿದ್ದು, ಸ್ವದೇಶದಲ್ಲಿರುವ ಕುಟುಂಬದವರ ಕುರಿತು ಚಿಂತೆಯನ್ನು ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು