ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಕೃಷಿ ತ್ಯಾಜ್ಯ ಪುಡಿ ಮಾಡುವ ‘ಬಾಹುಬಲಿ’

Last Updated 19 ಜನವರಿ 2020, 9:59 IST
ಅಕ್ಷರ ಗಾತ್ರ

ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಶನಿವಾರ ಆರಂಭಗೊಂಡ ಕೃಷಿಮೇಳದ ಕೃಷಿ ಯಂತ್ರೋಪಕರಣಗಳ ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣೆಯಾಗಿ ಕಂಡಿದ್ದು ‘ಬಾಹುಬಲಿ’.

ಹೆಸರಿನಿಂದಲೇ ಗುರ್ತಿಸಿಕೊಂಡ ಈ ಯಂತ್ರ, ಕೃಷಿ ತ್ಯಾಜ್ಯಗಳನ್ನು ಪುಡಿ ಮಾಡಿ, ಮರುಬಳಕೆಗೆ ಯೋಗ್ಯವಾಗುವಂತೆ ಮಾಡುತ್ತದೆ. ಕೆಎಲ್‌ಇ ಟೆಕ್ನಾಲಜಿಕಲ್ ಯೂನಿವರ್ಸಿಟಿಯ ಸಿಐಪಿಡಿ ಹೆಸರಿನಲ್ಲಿ ತೆರೆಯಲಾಗಿದ್ದ ಮಳಿಗೆಯಲ್ಲಿ ಈ ವಿಶೇಷ ಯಂತ್ರ ಪ್ರದರ್ಶನಗೊಂಡಿತು.

‘6x5 ಅಡಿ ವಿಸ್ತೀರ್ಣದ ಈ ಬೃಹತ್ ಯಂತ್ರದ ಹೆಸರು ‘ಬಾಹುಬಲಿ ಎಂಪಿ25’. ಮತ್ತೊಂದು ವಿಶೇಷವೆಂದರೆ ಯಂತ್ರ ಮೊದಲು ಮಾರುಕಟ್ಟೆಗೆ ಪ್ರವೇಶಿಸಿದ್ದು ಶನಿವಾರದಂದೇ. ಭತ್ತದ ಒಣಪೈರು, ಕಬ್ಬಿನ ಎಲೆಯಂತಹ ಕೃಷಿ ತ್ಯಾಜ್ಯವನ್ನು ಈ ಯಂತ್ರದ ಬಾಯಿಗಿಟ್ಟರೆ, ಅದನ್ನು ಪುಡಿ ಮಾಡಿ ಹೊರಹಾಕುತ್ತದೆ. ಆ ಪುಡಿ ಗೊಬ್ಬರ ತಯಾರಿಕೆಗೆ ಹಾಗೂ ಬ್ರಿಕೇಟಿಂಗ್‌ನಂತಹ ಕಾರ್ಯಗಳಿಗೆ ಬಳಕೆಯಾಗುತ್ತದೆ. ರೈತರು ಹಾಗೂ ಉದ್ಯಮಿಗಳಿಗೆ ಇದರಿಂದ ಸಾಕಷ್ಟು ಅನುಕೂಲವಿದೆ’ ಎಂದು ಯಂತ್ರದ ಪ್ರಾಜೆಕ್ಟ್‌ ಎಂಜಿನಿಯರ್‌ ರಾಕೇಶ್‌ ಎಸ್‌. ಪಾಟೀಲ್ ತಿಳಿಸಿದರು.

‘ಬಾಹುಬಲಿಯಷ್ಟೇ ಬಲಶಾಲಿ ಹಾಗೂ ಉಪಯುಕ್ತವಾದ ಈ ಯಂತ್ರದ ಮೊತ್ತದ ₹1.05 ಲಕ್ಷ . ಇನ್ನು ‘ಬಾಹುಬಲಿ’ಯ ಪ್ರೇಯಸಿ ‘ಆವಂತಿ‘ ಹೆಸರಿನಲ್ಲೂ ಚಿಕ್ಕ ಗಾತ್ರದ ಯಂತ್ರ ತಯಾರಿಸಲಾಗಿದ್ದು, ಅದರ ಮೊತ್ತ ₹52 ಸಾವಿರ. ದೊಡ್ಡ ಯಂತ್ರ ಒಂದು ಗಂಟೆಗೆ 1.5 ಟನ್‌ನಷ್ಟು ತ್ಯಾಜ್ಯವನ್ನು ಪುಡಿಮಾಡುವ ಸಾಮರ್ಥ್ಯ ಹೊಂದಿದೆ. ಚಿಕ್ಕ ಯಂತ್ರ 500 ಕೆ.ಜಿಯಷ್ಟು ತ್ಯಾಜ್ಯವನ್ನು ಪುಡಿಮಾಡಬಲ್ಲದು’ ಎಂದರು.

‘ರೈತರು ಹಾಗೂ ಉದ್ಯಮಿಗಳಿಗೆ ನೆರವಾಗುವ ದೃಷ್ಟಿಯಿಂದ ಯಂತ್ರ ತಯಾರಿಸಲಾಗಿದೆ. ‘ಬಾಹುಬಲಿ’ ಚಿತ್ರದಿಂದ ಸ್ಫೂರ್ತಿ ಪಡೆದು ಯಂತ್ರಗಳಿಗೆ ಈ ಹೆಸರು ಇಡಲಾಗಿದೆ’ ಎಂದು ತಿಳಿಸಿದರು. ಹೊಸ ಯಂತ್ರವನ್ನು ಕಂಡು ವಿಚಾರಿಸುತ್ತಿದ್ದ ರೈತರಿಗೆ ಈ ಬಗ್ಗೆ ವಿವರವಾಗಿ ಹೇಳಿದರು. ಯಂತ್ರ ಪುಡಿ ಮಾಡಿದವುಗಳನ್ನೂ ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT