ಹುಬ್ಬಳ್ಳಿ: ಹೆಚ್ಚು ಪ್ರೋಟೀನ್ ಮತ್ತು ಕಡಿಮೆ ಗ್ಲುಟಿನ್ ಅಂಶ ಇರುವ ಗೋಧಿ ತಳಿಯನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಗೋಧಿ ಅಭಿವೃದ್ಧಿ ಯೋಜನೆಯಿಂದ ಅಭಿವೃದ್ಧಿಪಡಿಸಲಾಗಿದೆ. ಧಾರವಾಡದ ಕೃಷಿ ವಿ.ವಿ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ವಿವಿಧ ಗೋಧಿ ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಡಿಡಿಕೆ 1029, ಡಿಡಿಕೆ 1063 (ಜವೆ ಗೋಧಿ–ನೀರಾವರಿ), ಯುಎಎಸ್ 304, ಯುಎಎಸ್ 334 (ಚಪಾತಿ ಗೋಧಿ–ನೀರಾವರಿ), ಯುಎಎಸ್ 375, 347 (ಒಣ ಬೇಸಾಯ), ಯುಎಎಸ್ 446 (ರವೆ ಗೋಧಿ–ಒಣ ಬೆಸಾಯ), ಯುಎಎಸ್ 428 (ನೀರಾವರಿ) ತಳಿಗಳು ಪ್ರಮುಖವಾಗಿವೆ.
ಡಿಡಿಕೆ 1063 ಅತಿ ಹೆಚ್ಚು ಇಳುವರಿ ಕೊಡುವ ಸುಧಾರಿತ ತಳಿಯಾಗಿದ್ದು, ಇದು ನೀರಾವರಿ ಪ್ರದೇಶಕ್ಕೆ ಸೂಕ್ತವಾಗಿದೆ ಎನ್ನುತ್ತಾರೆ ವಿ.ವಿಯ ಗೋಧಿ ಅಭಿವೃದ್ಧಿ ಯೋಜನೆಯ ಪ್ರಧಾನ ವಿಜ್ಞಾನಿ ಡಾ.ಸುಮಾ ಬಿರಾದಾರ.
ಈ ಹಿಂದೆ ಡಿಡಿಕೆ 1029 ತಳಿಯ ಗೋಧಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು. ಅದಕ್ಕೆ ಹೋಲಿಸಿದರೆ ಡಿಡಿಕೆ 1063 ತಳಿಯಿಂದ ಜೋನ್ –3ರಲ್ಲಿ ಶೇ 15.95 ಮತ್ತು ಜೋನ್ –8ರಲ್ಲಿ 37.33ರಷ್ಟು ಹೆಚ್ಚು ಇಳುವರಿ ಬದಿಂದೆ. 2022–23ರ ಅವಧಿಯಲ್ಲಿ ಈ ತಳಿಯನ್ನು ರೈತರ ಜಮೀನಿನಲ್ಲಿ ಪ್ರಾಯೋಗಿಕವಾಗಿ ಬೆಳೆದಾಗಲೂ ಶೇ 21.76ರಷ್ಟು ಹೆಚ್ಚು ಇಳುವರಿ ದಾಖಲಾಗಿದೆ. ರೈತರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿಸಿದರು.
ಗೋಧಿಯಲ್ಲಿ ಗ್ಲುಟಿನ್ ಎಂಬ ರಾಸಾಯನಿಕ ಅಂಶ ಇರುತ್ತದೆ. ಇದು ಪ್ಯಾಂಕ್ರಿಯಾಸ್ ಜೀವಕಣಗಳನ್ನು ನೇರವಾಗಿ ಹಾನಿಗೊಳಿಸುತ್ತದೆ. ಕೆಲವರಲ್ಲಿ ಅಲರ್ಜಿ, ಸೆಲಿಯಾಕ್ ಕಾಯಿಲೆಗೂ ಕಾರಣವಾಗುತ್ತದೆ. ಚಪಾತಿ ಗೋಧಿ ತಳಿಗಳಿಗೆ ಹೋಲಿಸಿದರೆ ಜವೆ ಗೋಧಿ ತಳಿಗಳಾದ ಡಿಡಿಕೆ 1029, ಡಿಡಿಕೆ 1063ರಲ್ಲಿ ಕಬ್ಬಿಣ ಮತ್ತು ಸತುವಿನ ಅಂಶಗಳು ಹೇರಳವಾಗಿವೆ. ಗ್ಲುಟಿನ್ ಅಂಶ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಹೀಗಾಗಿ ಮಧುಮೇಹಿಗಳು ಕೂಡ ಇದನ್ನು ಸೇವಿಸಬಹುದಾಗಿದೆ ಎಂದರು.
ರೈತರು ಮಳಿಗೆಗೆ ಬಂದು ಗೋಧಿ ತಳಿಗಳನ್ನು ವೀಕ್ಷಿಸಿ ಮಾಹಿತಿ ಪಡೆದಿದ್ದಾರೆ. ಕೆಲವರು ಹೆಸರು, ದೂರವಾಣಿ ಸಂಖ್ಯೆಯನ್ನು ನೋಂದಾಯಿಸಿದ್ದಾರೆ. ಬೀಜ ಲಭ್ಯತೆ ನೋಡಿಕೊಂಡು ಅವರನ್ನು ಸಂಪರ್ಕಿಸಲಾಗುವುದು ಎಂದು ಹೇಳಿದರು.
ಡಿಡಿಕೆ 1063 (ಜವೆಗೋಧಿ) ವಿಶೇಷತೆಗಳು: ಇದು 102ರಿಂದ 105 ದಿನಗಳ ಬೆಳೆಯಾಗಿದ್ದು, ನವೆಂಬರ್ ಮೊದಲ ವಾರದಲ್ಲಿ ನೀರಾವರಿ ಪ್ರದೇಶದಲ್ಲಿ ಇದನ್ನು ಬಿತ್ತನೆ ಮಾಡುವುದು ಸೂಕ್ತ. ಹೆಕ್ಟೇರ್‌ಗೆ 46ರಿಂದ 50 ಕ್ವಿಂಟಲ್ ಇಳುವರಿ ಬರುತ್ತದೆ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು.
ಈ ತಳಿಯಲ್ಲಿ ಎಲೆಮಚ್ಚೆ ರೋಗ ನಿರೋಧಕ ಶಕ್ತಿ ಹೆಚ್ಚು ಇರುತ್ತದೆ. ಶಕ್ತಿದಾಯಕ ಮತ್ತು ಔಷದೀಯ ಗುಣಮಟ್ಟವನ್ನು ಇದು ಹೊಂದಿದೆ. ರವೆ, ರವಾ ಪದಾರ್ಥಗಳು, ಚಪಾತಿ, ದಾಲಿಯಾ ತಯಾರಿಸಲು ಇದು ಸೂಕ್ತವಾಗಿದೆ.
ಡಿಡಿಕೆ 1063 ತಳಿಯ ಪ್ರಯೋಗ ಯಶಸ್ವಿಯಾಗಿದ್ದು ಮಾರುಕಟ್ಟೆಗೆ ಬಿಡುಗಡೆ ಮಾಡಲು ವಿವಿಯಿಂದ ಅನುಮತಿ ಸಿಕ್ಕಿದೆ. ಮುಂದಿನ ಸೆಪ್ಟೆಂಬರ್ ವೇಳೆಗೆ ಇದರ ಬೀಜಗಳು ಮಾರುಕಟ್ಟೆಯಲ್ಲಿ ಲಭ್ಯ ಇರುತ್ತವೆ–ಡಾ.ಸುಮಾ ಬಿರಾದಾರ ಪ್ರಧಾನ ವಿಜ್ಞಾನಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.