ಬುಧವಾರ, ಆಗಸ್ಟ್ 21, 2019
28 °C
ದೇಶಪಾಂಡೆ ಫೌಂಡೇಷನ್‌ ಸ್ಟಾರ್ಟ್‌ ಅಪ್‌ನಲ್ಲಿ ಹೊಸ ಪ್ರಯೋಗಗಳು

ಹತ್ತಿಕಟ್ಟಿಗೆಯಿಂದ ನಾರು, ಪೈರುನಾಟಿಗೆ ಯಂತ್ರ

Published:
Updated:
Prajavani

ಹುಬ್ಬಳ್ಳಿ: ಹತ್ತಿಕಟ್ಟಿಗೆಯನ್ನು ಅನೇಕ ರೈತರು ಸುಟ್ಟುಹಾಕುತ್ತಾರೆ. ಇದರಿಂದ ನಯಾ ಪೈಸೆಯೂ ಸಿಗುವುದಿಲ್ಲ. ಆದರೆ, ಧಾರವಾಡದ ನವೀನ ಹಿರೇಮಠ ಇದೇ ಕಟ್ಟಿಗೆ ಬಳಸಿಕೊಂಡು ಗೋಣಿಚೀಲ ಹೊಲೆಯಲು ನಾರು ತಯಾರಿಸುತ್ತಾರೆ!

ದೇಶಪಾಂಡೆ ಫೌಂಡೇಷನ್‌ ಮಂಗಳವಾರ ಹಮ್ಮಿಕೊಂಡಿದ್ದ ಸ್ಟಾರ್ಟ್‌ ಅಪ್‌; ಹೊಸ ಶೋಧನೆಗಳ ಪರಿಚಯ ಕಾರ್ಯಕ್ರಮದಲ್ಲಿ ಅವರು ತಮ್ಮ ಪ್ರಾತ್ಯಕ್ಷಿಕೆ ತೋರಿಸಿದರು.

ಬೆಳಗಾವಿಯ ಗೋಗಟೆ ಕಾಲೇಜಿನಲ್ಲಿ ಓದಿರುವ ನವೀನ ಹತ್ತಿಕಟ್ಟಿಗೆಯಿಂದ ತೊಗಟೆ ಪ್ರತ್ಯೇಕಿಸಿ ನಾರು ತಯಾರಿಸುತ್ತಾರೆ. ಇದಕ್ಕಾಗಿ ಹೊಸ ಯಂತ್ರ ಸಂಶೋಧಿಸಿದ್ದಾರೆ.

‘ಕರ್ನಾಟಕದಲ್ಲಿ ವರ್ಷಕ್ಕೆ 30 ಲಕ್ಷ ಟನ್‌ ಹತ್ತಿಕಟ್ಟಿಗೆ ಸುಟ್ಟು ವ್ಯರ್ಥ ಮಾಡಲಾಗುತ್ತಿದೆ. ನಾವು ಅದನ್ನು ಬಳಸಿಕೊಂಡು ಗೋಣಿಚೀಲ ಹೊಲೆಯಲು ದಾರ ತಯಾರಿಸುತ್ತೇವೆ. ದಾರವನ್ನು ಭಾರತ, ಬಾಂಗ್ಲಾದೇಶದಿಂದ ಆಮದು ಮಾಡಿಕೊಳ್ಳುತ್ತದೆ. ಆದ್ದರಿಂದ ಹೊಲದಲ್ಲಿ ವ್ಯರ್ಥವಾಗಿ ಕಟ್ಟಿಗೆ ಸುಟ್ಟು ಹಾಕುವ ಬದಲು ಈ ರೀತಿ ಬಳಸಿಕೊಳ್ಳಬಹುದು’ ಎಂದು ನವೀನ ಹೇಳುತ್ತಾರೆ.

‘ಕಟ್ಟಿಗೆಯ ತೊಗಲಿನ ಭಾಗ ಬಿಟ್ಟು ಉಳಿದದ್ದೆಲ್ಲವನ್ನೂ ‍ಪಾರ್ಟಿಕಲ್‌ ಬೋರ್ಡ್‌ (ಕಣಫಲಕ) ತಯಾರಿಸಲು ಬಳಸಬಹುದು. ಭಾರತದಲ್ಲಿ ಸದ್ಯಕ್ಕೆ ನೀಲಗಿರಿಯಿಂದ ಇದನ್ನು ತಯಾರಿಸಲಾಗುತ್ತದೆ. ಪಾರ್ಟಿಕಲ್‌ ಬೋರ್ಡ್‌ಗೆ ಸಾಕಷ್ಟು ಬೇಡಿಕೆಯಿದೆ’ ಎಂದರು.

ಹಾಸಿಲೊಮಿಷನ್‌ ಪ್ರೈವೇಟ್‌ ಲಿಮಿಟೆಡ್‌ ಸ್ಟಾರ್ಟ್‌ ಅಪ್‌ ಸಿಇಒ ಮೈಸೂರಿನ ಎಂ. ಪ್ರಜ್ವಲ್ ಯಂತ್ರದ ಮೂಲಕ ಸುಲಭವಾಗಿ ಭತ್ತದ ಪೈರು ನಾಟಿ ಮಾಡುವ ವಿಧಾನ ಶೋಧಿಸಿದ್ದಾರೆ.

‘ಹೊಲಗಳಲ್ಲಿ ಕೆಲಸ ಮಾಡಲು ಕಾರ್ಮಿಕರ ಕೊರತೆಯಿದೆ. ಆದ್ದರಿಂದ ಯಂತ್ರದ ಮೂಲಕ ಪೈರು ನಾಟಿ ಮಾಡಲು ಯಂತ್ರ ಶೋಧಿಸಿದ್ದೇವೆ. ಈಗಾಗಲೇ ನಾಲ್ಕು ಯಂತ್ರಗಳನ್ನು ತಯಾರಿಸಿದ್ದು, ಪ್ರಾಯೋಗಿಕವಾಗಿಯೂ ಯಶಸ್ವಿಯಾಗಿವೆ. ಈ ಯಂತ್ರದಲ್ಲಿ ಎರಡು ಬ್ಯಾಟರಿಗಳಿರುತ್ತವೆ. ಪ್ರತಿ ಬ್ಯಾಟರಿ ಮೂರೂವರೆ ಗಂಟೆ ಕೆಲಸ ಮಾಡುತ್ತವೆ. ಯಂತ್ರದ ಮ್ಯಾಟಿನ ಮೇಲೆ ಪೈರು ಹಾಕಿ ನಾಟಿ ಮಾಡಬಹುದು. ಜಪಾನ್‌ ತಂತ್ರಜ್ಞಾನ ಮಾದರಿಯಲ್ಲಿ ನಿರ್ಮಿಸಲಾಗಿದೆ’ ಎಂದು ಪ್ರಜ್ವಲ್ ವಿವರಿಸಿದರು.

ಎಂಎಸ್‌ಎ ಕೃಷಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಧಾರವಾಡದ ರಾಕೇಶ, ರೈತರು ರಸಗೊಬ್ಬರ ಬಳಸದೇ ಬೆಳೆದ ಬೆಳೆಗಳನ್ನು ಆನ್‌ಲೈನ್‌ ಮತ್ತು ಆಫ್‌ಲೈನ್‌ನಲ್ಲಿ ಮಾರಾಟ ಮಾಡಿ ಉದ್ಯಮದ ಹಾದಿ ಕಂಡುಕೊಂಡಿದ್ದಾರೆ.

‘ಆನ್‌ಲೈನ್‌ ಮೂಲಕವೂ ವಹಿವಾಟು ನಡೆಸುವುದರಿಂದ ಹೊರರಾಜ್ಯಗಳಲ್ಲಿಯೂ ನಮ್ಮ ಮಾರಾಟಕ್ಕೆ ಸಾಕಷ್ಟು ಪ್ರತಿಕ್ರಿಯೆ ಸಿಗುತ್ತಿದೆ’ ಎಂದು ರಾಕೇಶ ಹೇಳಿದರು.

ಹುಬ್ಬಳ್ಳಿಯ ಲೈಫ್‌ ಟ್ರೋನ್ಸ್ ಸಂಸ್ಥೆಯ ಸದಸ್ಯೆ ರಶ್ಮಿ ಸಜ್ಜನವರ ಕಿರಿಯ ಫೋಟೊಥೆರಪಿ ಯೂನಿಟ್‌ನ ಪ್ರಾತ್ಯಕ್ಷಿಕೆ ತೋರಿಸಿದರು. ಒಟ್ಟು 14 ನವೋದ್ಯಮಿಗಳ ಪ್ರಾತ್ಯಕ್ಷಿಕೆಗೆ ಎಲಿವೇಟ್‌ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.

ಟೈ ಅಧ್ಯಕ್ಷ ಶಶಿಧರ್ ಶೆಟ್ಟರ್, ದೇಶಪಾಂಡೆ ಫೌಂಡೇಷನ್ ಸಿಇಓ ವಿವೇಕ ಪವಾರ, ಸ್ಯಾಂಡಬಾಕ್ಸ್ ಸಿಇಓ ಸಿ ಎಂ ಪಾಟೀಲ ಇದ್ದರು.

Post Comments (+)