ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಸಚಿವರು ನಟನೆಗಷ್ಟೇ ಲಾಯಕ್: ವಾಸುದೇವ ಮೇಟಿ ವಾಗ್ದಾಳಿ

ರೈತಸಂಘ ಮತ್ತು ಹಸಿರು ಸೈನ್ಯ ಅಧ್ಯಕ್ಷ ವಾಸುದೇವ ಮೇಟಿ ವಾಗ್ದಾಳಿ
Last Updated 27 ಆಗಸ್ಟ್ 2022, 2:57 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕೃಷಿ ಸಚಿವ ಬಿ.ಸಿ. ಪಾಟೀಲ ನಟನೆಗೆ ಮಾತ್ರ ಲಾಯಕ್ ಆಗಿದ್ದಾರೆ. ಹಾವೇರಿಗಷ್ಟೇ ಸೀಮಿತವಾಗಿರುವ ಅವರು, ಬೇರೆ ಜಿಲ್ಲೆಗಳಿಗೆ ಬಂದೇ ಇಲ್ಲ. ರೈತರ ಸಮಸ್ಯೆ ಆಲಿಸಿಲ್ಲ. ಸಚಿವರಾಗಿ ಒಂದಾದರೂ ರೈತಪರ ಯೋಜನೆ ಜಾರಿಗೆ ತಂದಿದ್ದಾರೆಯೇ?’ ಎಂದುರೈತಸಂಘ ಮತ್ತು ಹಸಿರು ಸೈನ್ಯ ಅಧ್ಯಕ್ಷ ವಾಸುದೇವ ಮೇಟಿ ವಾಗ್ದಾಳಿ ನಡೆಸಿದರು.

‘ಮಳೆಯಿಂದ ಹಾನಿಗೀಡಾಗಿರುವ ಪ್ರದೇಶಕ್ಕೆ ಸಚಿವರು ಭೇಟಿ ನೀಡಿಲ್ಲ. ರೈತರ ಅಳಲು ಆಲಿಸಿಲ್ಲ. ಪಾಟೀಲ ಒಬ್ಬರಷ್ಟೇ ಅಲ್ಲದೆ, ಬಹುತೇಕ ಸಚಿವರು ಮತ್ತು ಶಾಸಕರು‌ ಹಾನಿ ಪ್ರದೇಶಕ್ಕೆ ಹೋಗಿಲ್ಲ’ ಎಂದು ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

‘ಫಸಲ್‌ ಬಿಮಾ‌ ಯೋಜನೆಯಡಿ ರೈತರಿಂದ ₹24 ಸಾವಿರ ಕೋಟಿ ಪ್ರೀಮಿಯಂ ಸಂದಾಯವಾಗಿದೆ. ಆದರೆ, ₹890 ಕೋಟಿ‌ ವಿಮೆ ಮಾತ್ರ ಪಾವತಿಯಾಗಿದೆ. ಸರ್ಕಾರವೇ ರೈತರಿಗೆ ಮೋಸ ಮಾಡುತ್ತಿದೆ.ಮೊಬೈಲ್‌ನಲ್ಲಿ ರೈತರೇ ಬೆಳೆ ಸಮೀಕ್ಷೆ ಮಾಡುವುದರಲ್ಲಿ ಹಲವು ನ್ಯೂನತೆಗಳಿವೆ. ಹಾಗಾಗಿ, ಪಂಚಾಯಿತಿ ಸಿಬ್ಬಂದಿಯಿಂದ ಸಮೀಕ್ಷೆ ಮಾಡಿಸಬೇಕು’ ಎಂದು ಆಗ್ರಹಿಸಿದರು.

ಅಭಿವೃದ್ಧಿ ಕುಂಠಿತ: ‘ಬಿಜೆಪಿ ಸರ್ಕಾರದಲ್ಲಿಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ರೈತರನ್ನು ಮತ್ತು ಅವರ ಸಮಸ್ಯೆಗಳನ್ನು ಕಡೆಗಣಿಸಲಾಗಿದೆ. ಉತ್ತರ ಕರ್ನಾಟಕ ಭಾಗದ ಸಪ್ತನದಿಗಳ ಯೋಜನೆಗಳಿಗೆ ಹಣ ಮೀಸಲಿಟ್ಟಿಲ್ಲ. ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಲು ಕ್ರಮ ಕೈಗೊಂಡಿಲ್ಲ. ಕಾವೇರಿ ನದಿ ವಿಷಯದಲ್ಲಿ ಕಾಣುವ ಒಗ್ಗಟ್ಟು ನಮ್ಮ ಭಾಗದ ನದಿಗಳ ವಿಷಯದಲ್ಲಿ ಕಾಣುತ್ತಿಲ್ಲ’ ಎಂದರು.

‘ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು.ಗೋಮಾಳ‌ ಜಮೀನನ್ನು ಸಂಘ- ಸಂಸ್ಥೆಗಳು ಮತ್ತು ಕಂಪನಿಗಳಿಗೆ ನೀಡಬಾರದು.ಬೆಳೆ ಹಾನಿಯಾಗಿರುವ ಪ್ರತಿ ಹೆಕ್ಟೇರ್‌ಗೆ ₹65 ಸಾವಿರ ಪರಿಹಾರ ನೀಡಬೇಕು.ನೀರಾವರಿ ಯೋಜನೆಗಳಿಗೆ ಹಣ ಮೀಸಲಿಡಬೇಕು’ ಎಂದು ಆಗ್ರಹಿಸಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ, ರಾಜ್ಯ ಕಾರ್ಯದರ್ಶಿ ಸಂಗಣ್ಣ ಕಟಗಿ,ಧಾರವಾಡ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕುನ್ನೂರು,ಮಹಿಳಾ ಘಟಕದ ಅಧ್ಯಕ್ಷೆ ಅನ್ನಪೂರ್ಣ ಪಾಟೀಲ, ಹುಬ್ಬಳ್ಳಿ ತಾಲ್ಲೂಕು ಅಧ್ಯಕ್ಷ ಶಂಕರ ಆಚಾರಿ, ಕುಂದಗೋಳ ಅಧ್ಯಕ್ಷ ವೈ.ಎನ್.‌ ಪಾಟೀಲ, ನಾಗರತ್ನ‌ ಹುಬ್ಬಳ್ಳಿ, ಕಲಂದರ ನದಾಫ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT