ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಾಬ್: ಎಲ್ಲಾ ಪಕ್ಷಗಳು ನಿಲುವು ಸ್ಪಷ್ಟಪಡಿಸಲಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

Last Updated 15 ಫೆಬ್ರುವರಿ 2022, 12:08 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಹಿಜಾಬ್ ಕುರಿತು ವಿಧಾನಮಂಡಲದ ಅಧಿವೇಶನದಲ್ಲಿ ಬಿಜೆಪಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕರ್ನಾಟಕ ಕೋಮು ಸೌಹಾರ್ದತೆಗೆ ಹೆಸರಾಗಿದೆ. ಹಿಜಾಬ್ ವಿಷಯದಲ್ಲಿ ಗಲಾಟೆ ಆಗಬಾರದಿತ್ತು. ಶಾಲಾ–ಕಾಲೇಜುಗಳಲ್ಲಿರುವ ವಸ್ತ್ರ ಸಂಹಿತೆಯನ್ನು ಎಲ್ಲರೂ ಪಾಲಿಸಬೇಕು. ಹಾಗಾಗಿ, ಈ ಕುರಿತು ಎಲ್ಲಾ ಪಕ್ಷಗಳು ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಸಮವಸ್ತ್ರ ಧರಿಸಲು ಕರೆ ಕೊಡಬೇಕು’ ಎಂದರು.

‘ಮಿಲಿಟರಿ ಮತ್ತು ಪೊಲೀಸ್‌ ವ್ಯವಸ್ಥೆಯಲ್ಲಿರುವವರು ತಮಗೆ ಇಷ್ಟಬಂದ ಉಡುಪು ಧರಿಸುತ್ತೇನೆ ಎನ್ನಲಾಗುತ್ತದೆಯೇ? ಭಾರತದ ಹೆಸರನ್ನು ಹಾಳು ಮಾಡಬೇಕೆಂಬ ದುರುದ್ದೇಶದಿಂದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ರಾಜಕಾರಣಿಗಳು ಮಕ್ಕಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್‌ಗೆ ಸವಾಲು:

‘ಹಿಜಾಬ್ ಕುರಿತು ಕಾಂಗ್ರೆಸ್‌ನ ಯುವರಾಣಿ (ಪ್ರಿಯಾಂಕಾ ಗಾಂಧಿ) ನೀಡಿರುವ ಹೇಳಿಕೆಯನ್ನು ಆ ಪಕ್ಷದವರು ಪಾಲಿಸುತ್ತಾರೆಯೇ? ಅವರ ನಿಲುವೇನು? ನಾವು ಮಕ್ಕಳಿಗೆ ಸಮವಸ್ತ್ರ ಧರಿಸಿ ಶಿಕ್ಷಣ ಕಲಿಯಿರಿ ಎಂದು ಹೇಳುತ್ತೇವೆ. ಅವರು ಹಿಜಾಬ್ ಧರಿಸಿಕೊಂಡು ಹೋಗುವಂತೆ ಮುಸ್ಲಿಂ ಮಕ್ಕಳಿಗೆ ಕರೆ ಕೊಡುತ್ತಾರೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಸವಾಲು ಹಾಕಿದರು.

‘ಕೋರ್ಟ್ ತೀರ್ಪನ್ನು ಎಲ್ಲರೂ ಗೌರವಿಸಬೇಕು. ಈಮಧ್ಯಂತರ ತೀರ್ಪನ್ನು ಗೌರವಿಸದಿದ್ದರೆ ಹೇಗೆ? ಇದು ಸಂವಿಧಾನ ವಿರೋಧಿ ನಡೆಯಾಗುತ್ತದೆ. ಕೋಮು ಸೌಹಾರ್ದಕ್ಕೆ ವಿರುದ್ಧವಾದ ಸಂದೇಶ ನೀಡಿದಂತಾಗುತ್ತದೆ. ಕಾಂಗ್ರೆಸ್‌ನ ಕೋಮು ಭಾವನೆ ಮತ್ತು ತುಷ್ಟೀಕರಣದ ರಾಜಕಾರಣದಿಂದಾಗಿಯೇ ಹಿಂದೆ ಪಾಕಿಸ್ತಾನ ಸೃಷ್ಟಿಯಾಯಿತು. ನಮ್ಮ ಸರ್ಕಾರ ತುಷ್ಟೀಕರಣಕ್ಕೆ ಅವಕಾಶ ನೀಡುವುದಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಪ್ರಕರಣವನ್ನು ಸಂಯಮದಿಂದ ನಿಭಾಯಿಸುತ್ತಿದೆ’ ಎಂದು ಹೇಳಿದರು.

‘ನಮ್ಮ ಸರ್ಕಾರ ತ್ರಿಬಲ್ ತಲಾಖ್ ಎಂಬ ಕೆಟ್ಟ ವ್ಯವಸ್ಥೆಯನ್ನು ನಿಲ್ಲಿಸಿ ಮುಸ್ಲಿಂ ಮಹಿಳೆಯರಿಗೆ ಸ್ವಾತಂತ್ರ್ಯ ಕೊಟ್ಟಿದೆ. ಈಗ ಅದೇ ಮಹಿಳೆಯರು ಮುಖ ಮುಚ್ಚಿಕೊಂಡು ಬರಬೇಕು ಎಂದರೆ, ನಾವು ಯಾವ ಕಾಲದಲ್ಲಿದ್ದೇವೆ ಎಂಬುದನ್ನು ಅರಿಯಬೇಕು. ಕೆಲವರು ಇದಕ್ಕೆ ಕುಮ್ಮಕ್ಕು ಕೊಟ್ಟು ಖುಷಿಪಡುತ್ತಿದ್ದಾರೆ. ಮುಸ್ಲಿಮರನ್ನು ಉಪಯೋಗಿಸಿಕೊಂಡು ಕೋಮು ಭಾವನೆ ಕೆರಳಿಸಲು ಯತ್ನಿಸುತ್ತಿದ್ದಾರೆ. ಇಂತಹ ರಾಜಕಾರಣವನ್ನು ಸರ್ಕಾರ ಒಪ್ಪುವುದಿಲ್ಲ. ಈ ಕುರಿತು ಯಾರೇ ಗಲಾಟೆ ಮಾಡಿದರೂ ಪೊಲೀಸರು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ಶಾಸಕ ಜಮೀರ್ ಅಹ್ಮದ್ ಅವರು ಹಿಜಾಬ್ ಕುರಿತು ನೀಡಿರುವ ಹೇಳಿಕೆಯು ಅತ್ಯಂತ ಕೀಳುಮಟ್ಟದ್ದಾಗಿದೆ. ಈ ಬಗ್ಗೆ ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು’ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT