ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾಂಗೂನ್‌ನಲ್ಲಿ ಬುದ್ಧನದೇ ನಗು

Last Updated 28 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಅರೆ! ಗಗನಕ್ಕೆ ನೆಗೆದ ಕಟ್ಟಡಗಳು. ಮೋಜು, ಮಸ್ತಿಯಿಂದ ತುಯ್ದಾಡುವ ಬಿಡುಬೀಸಿನ ನಗರವೆಲ್ಲಿ? ಮುಗಿಲು ನೋಡಲು ಸ್ವಲ್ಪವೂ ಪ್ರಯಾಸವಿಲ್ಲದ, ತನಗೆ ಧಾರಾಳವಾಗಿಯೇ ಕೆಲಸವಿದೆ ಅನ್ನಿಸುವ ಊರೆಲ್ಲಿ? ಅಲ್ಲಿ ಐಷಾರಾಮಿ ಬದುಕು, ಇಲ್ಲಿ ಬೇಡುವವರ ನಿಟ್ಟುಸಿರು. ಎತ್ತಣಿಂದೆತ್ತಣ ಸಂಬಂಧವಯ್ಯ! ಥಾಯ್ಲೆಂಡ್‌ನ ರಾಜಧಾನಿ ಬ್ಯಾಂಕಾಕ್‌ನಿಂದ ಒಂದು ತಾಸು ವಿಮಾನದಲ್ಲಿ ಪ್ರಯಾಣಿಸಿ ಯಂಗೂನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಾಗ ಧುತ್ತನೆ ಆಗುವ ಅನುಭವವಿದು.

1989ಕ್ಕೂ ಮೊದಲು ಮ್ಯಾನ್ಮಾರ್, ಬರ್ಮಾ ಆಗಿತ್ತು. ರಂಗೂನ್ ಎಂಬ ಹೆಸರಿನಲ್ಲಿ ಯಾಂಗೂನ್‌ ಅದರ ರಾಜಧಾನಿಯಾಗಿತ್ತು. ಎರಡೂವರೆ ಸಾವಿರ ವರ್ಷಗಳ ಇತಿಹಾಸವುಳ್ಳ ಈ ನಗರಿ ಅನೇಕ ಪ್ರಾಚೀನ ಕಟ್ಟಡಗಳನ್ನು ಹೊಂದಿದೆ. ಬ್ರಿಟಿಷ್ ವಸಾಹತು ಆಡಳಿತದಲ್ಲಿ 19–20ನೇ ಶತಮಾನದಲ್ಲಿ ನಿರ್ಮಿಸಿದ ಪಾರಂಪರಿಕ ಕಟ್ಟೋಣಗಳನ್ನು ನೋಡುವುದೇ ಕಣ್ಣಿಗೆ ಹಬ್ಬ.

ಅಂದಹಾಗೆ ಮ್ಯಾನ್ಮಾರ್‌ನ ಈಗಿನ ರಾಜಧಾನಿ ನೇಪಿಡೊ. ಯಾಂಗೂನ್‌ನಲ್ಲಿ ವಿಶಿಷ್ಟ ರೀತಿಯಲ್ಲಿ ಲುಂಗಿ ಧರಿಸಿದವರು ವಿಶೇಷವಾಗಿ ಗಮನಸೆಳೆಯುತ್ತಾರೆ. ಅದು ಮ್ಯಾನ್ಮಾರ್‌ನ ಸಾಮಾನ್ಯ ದಿರಿಸು. ತಳಬುಡರಹಿತ ಉರುಳೆಯಂತಿರುವ ಲುಂಗಿಯೊಳಗೆ ಧುಮಿಕಿ ನಂತರ ಅದನ್ನು ಮಡಚಿ ಬಲಕ್ಕೆ ಗಿಣಿಯ ಕೊಕ್ಕಿನ ಹಾಗೆ ಗಂಟಿಕ್ಕುವ ಶೈಲಿ ಅದು. ಶರ್ಟ್ ಲುಂಗಿಯೊಳಗೆ ಇನ್ಸರ್ಟ್! ಆರಾಮವಾಗಿ ಓಡಾಡಲು ತಕ್ಕ, ಸರಳ ಉಡುಗೆ.

ಥಾಯ್ಲೆಂಡ್‌ನಿಂದ ಯಾಂಗನ್‌ಗೆ ಪ್ರವೇಶಿಸುವಾಗಲೂ, ಅಲ್ಲಿಂದ ಥಾಯ್ಲೆಂಡ್‌ಗೆ ವಾಪಸ್ಸಾಗುವಾಗಲೂ ಪ್ರವಾಸಿಗರು ಮ್ಯಾನ್ಮಾರ್ ದೇಶದ ವೀಸಾ ಪಡೆದುಕೊಳ್ಳಬೇಕು. ಜನ ಬಿಸಿಲಿನ ಝಳದಿಂದ ಶಮನ ಹೊಂದಲು ಮುಖಕ್ಕೆ ‘ತನಕಾ’ ಎಂಬ ಅಂಜನವನ್ನು ಹಣೆ, ತೋಳು, ಕೈ ಕಾಲುಗಳಿಗೆ ಲೇಪಿಸಿಕೊಳ್ಳುತ್ತಾರೆ. ಶ್ರೀಗಂಧದಂತೆ ಅದು ಹಳದಿ ಮತ್ತು ಬಿಳಿ ಮಿಶ್ರಿತ ಬಣ್ಣದ್ದು.

‘ತನಕಾ’ ವಿವಿಧ ಮರದ ತೊಗಟೆಗಳನ್ನು ಅರೆದು ತಯಾರಿಸುತ್ತಾರೆ. ಈ ಪೈಕಿ ‘ಶ್ವೇಬು’ ಎಂಬ ಹೆಸರಿನದು ಪ್ರಧಾನವಾದುದು. ಬಿಸಿಲಿನ ತಾಪ ಶಮನಕ್ಕೆ ಹಾಗೂ ಮೃದು ತ್ವಚೆಗೆ ಅದು ಪರಿಣಾಮಕಾರಿಯೆನ್ನಲಾಗುತ್ತದೆ. ಮ್ಯಾನ್ಮಾರ್ ಭಾರತದ ಐದನೇ ಒಂದು ಭಾಗದಷ್ಟು ವಿಸ್ತೀರ್ಣವಿದೆ. ಆದರೆ ಅದರ ಜನಸಂಖ್ಯೆ ಭಾರತದ ಇಪ್ಪತ್ತೈದನೇ ಒಂದರಷ್ಟು ಮಾತ್ರ.

ಶುದ್ಧ ಸಸ್ಯಾಹಾರಿ ಹೋಟೆಲ್ ಹುಡುಕಿಕೊಂಡೇ ಹೋಗಬೇಕು. ವಿಮಾನದಲ್ಲೂ ಸಸ್ಯಾಹಾರ ಒದಗಿಸುವುದಿಲ್ಲ. ಪರಿಚಾರಕರಿಂದ ‘ಇಲ್ಲ... ಕ್ಷಮಿಸಿ ಒಂದೇ ಆಯ್ಕೆ’ ಎಂಬ ನೇರ ಉತ್ತರ. ಮ್ಯಾನ್ಮಾರ್‌ನ ಕರೆನ್ಸಿ ಕ್ಯಾಟ್. ಅವರ 20 ಕ್ಯಾಟ್‌ಗಳು ನಮ್ಮ ಒಂದು ರೂಪಾಯಿಗೆ ಸಮ. ಹೌದು, ಈ ಲೆಕ್ಕದಲ್ಲಿ ಒಂದು ಸ್ನಾನದ ಸಾಬೂನಿನ ಬೆಲೆ ಐನೂರು ಕ್ಯಾಟ್ಸ್, ದೋಸೆ ಮತ್ತು ಚಾ 1200 ಕ್ಯಾಟ್ಸ್, ಕೈ ಗಡಿಯಾರ 20,000 ಕ್ಯಾಟ್ಸ್!

(ಬುದ್ಧ ಮಂದಿರದೊಳಗೆ ನಿಶ್ಯಬ್ದಕ್ಕೆ ಆದ್ಯತೆ)

ಹೋಟೆಲ್ಲಿನಲ್ಲಿ ಒಂದು ಪ್ಲೇಟ್ ಪೂರಿ ಹೇಳಿದಾಗ ಪರಿಚಾರಕ ಪೀಠಿಕೆಯೆನ್ನುವಂತೆ ಒಂದು ಚೊಂಬು ಬಿಸಿ ಬಿಸಿ ಕಷಾಯ ತಂದಿಟ್ಟ. ಶುಂಠಿ, ಬೆಲ್ಲ, ಮೆಣಸಿನ ಆಪ್ಯಾಯಮಾನ ಪೇಯವದು. ನಾವು ಅದನ್ನು ಬಹುಬೇಗನೆ ಖಾಲಿಯಾಗಿಸಿ ಇನ್ನೊಂದು ಚೊಂಬು ತರಿಸಿಕೊಂಡೆವು. ನಾವು ತಂಗಿದ್ದ ಹೋಟೆಲ್ಲಿನಲ್ಲಿ ಬೇಕೆಂದಾಗ ತಂಪು ಹಣ್ಣಿನ ರಸ ಉಪಚರಿಸುತ್ತಿದ್ದರು.

ಬಿಸಿಲ ಬೇಗೆ ಎದುರಿಸಲು ಕಷ್ಟವಾಗಲಿಲ್ಲ. ಹೊರಗಡೆ ನಿಂತಿದ್ದ ಭಿಕ್ಷುಕನೊಬ್ಬನಿಗೆ ನಾನು ನೂರರ ಕ್ಯಾಟ್ ನೋಟು ನೀಡಿದಾಗ ‘ಅಯ್ಯ, ಇದು ನಿಮ್ಮ ಬಳಿಯೇ ಇರಲಿ’ ಎನ್ನುವಂತೆ ಆತ ಮೋರೆ ತಿರುಗಿಸಿ ಮಾಯವಾದನೆಂದರೆ ನೀವು ನಂಬಲೇಬೇಕು. ಪಾದಚಾರಿ ರಸ್ತೆಯಲ್ಲಿ ತರಾವರಿ ಸಣ್ಣ ಪುಟ್ಟ ವ್ಯಾಪಾರಿಗಳು. ಒಬ್ಬ ಬುಟ್ಟಿಯ ತುಂಬ ಪುಟ್ಟ ಗುಬ್ಬಿಗಳನ್ನು ತೋರಿಸುತ್ತಿದ್ದ.

ಇದೇನು ಹಕ್ಕಿಯನ್ನು ಮಾರುತ್ತಿದೀಯಾ ಎಂದಾಗ ನಕ್ಕ. ಮರುಕ್ಷಣವೇ ‘ಒಂದು ಹಕ್ಕಿಗೆ ಇನ್ನೂರು ಕ್ಯಾಟ್ಸ್ ಕೊಟ್ಟು ಖರೀದಿಸಿ ಅದನ್ನು ಹಾರಿಬಿಡಿ ಎಂದ!’ ‘ನೀನೇ ಬಿಡಬಹುದಲ್ಲ’ ಎಂದಾಗ ಗಹಗಹಿಸಿ ಜೋರಾಗಿ ನಗತೊಡಗಿದ. ಒಬ್ಬಳು ಮಗುವನ್ನೆತ್ತಿಕೊಂಡೇ ವಿವಿಧ ಕಾಳುಗಳ ಪ್ಯಾಕೆಟ್ ಮಾರುತ್ತಿದ್ದಳು. ‘ಕೊಂಡುಕೊಳ್ಳಿ. ನಂತರ ಪಾರಿವಾಳಗಳಿಗೆ ಚೆಲ್ಲಿ’ ಎಂದಳು.

ಅಲ್ಲಲ್ಲಿ ಗಿರಾಕಿಗಳು ಮೇಜಿನಂತೆ ಆರಾಮವಾಗಿ ಬಳಸಿ ಕೂತು ತಿನ್ನಲೆಂದು ಮೋಟು ಸ್ಟೂಲುಗಳನ್ನಿರಿಸಿಕೊಂಡು ಕುರುಕಲು ತಿಂಡಿ, ಹುರಿದ ಮೀನು, ಏಡಿ, ಪಂದಿಕರಿ ಮುಂತಾದವನ್ನು ಮಾರುವವರುಂಟು.

ಬರ್ಮಿಸ್ ಭಾಷೆ ತಿಳಿಯದಲ್ಲ ಅಂತ ಎಂಟು ಮಂದಿ ಪ್ರವಾಸಿಗರಿದ್ದ ನಮ್ಮ ತಂಡದ ನೇತೃತ್ವ ವಹಿಸಿದ್ದ ಮಂಜುನಾಥ ಸಾಗರ್ ತಬ್ಬಿಬ್ಬಾಗಿದ್ದರು. ಕೊನೆಗೆ ತಮ್ಮ ವಾಟ್ಸ್‌ಆ್ಯಪ್ ಜಾಲಾಡಿ ಗೊತ್ತಾಯ್ತು ಬಿಡಿ. ಇಲ್ಲೇ ಶಿವರಾಜ್ ಅಂತ ಉತ್ತರ ಕರ್ನಾಟಕದವರಿದ್ದಾರೆ.

ಆತ ಯಾಂಗನ್‌ನ ಶಾಲೆಯಲ್ಲಿ ಗಣಿತದ ಮಾಸ್ತರು ಎಂದಾಗ ನಮಗೋ ಖುಷಿ. ಅವರಾದರೂ ಬರ್ಮಿಸ್ ಭಾಷೆಯಲ್ಲಿ ನಮ್ಮ ಪರವಾಗಿ ವ್ಯವಹರಿಸಿದರೆ ಶಾಪಿಂಗ್, ಪ್ರೇಕ್ಷಣೀಯ ತಾಣಗಳ ಭೇಟಿ ಸರಾಗ ಅನ್ನಿಸಿತು. ಆದರೆ ಶಿವರಾಜ್ ಕೂಡ ಹೊಸಬರೇ. ತಮ್ಮ ಇತಿಮಿತಿಯಲ್ಲೇ ಅವರು ಬಹಳವೇ ಸಹಕರಿಸಿದರು. ಈ ಲೆಕ್ಕದ ಮೇಷ್ಟ್ರಿಗೆ ತಿಂಗಳಿಗೆ ಅರ್ಧ ಲಕ್ಷ ಪಗಾರ.

‘ಬಹಳ ಶ್ರಮಪಟ್ಟು ಬರ್ಮಿಸ್ ಭಾಷೆ ಕಲಿತೇ ತೀರುತ್ತೇನೆ ಸಾರ್’ ಎಂದರು. ಮನೋಜ್ ಎಂಬುವರ ಹೆಸರನ್ನು ಅವರು ಸೂಚಿಸಿದ್ದರಿಂದ ಸಮಸ್ಯೆಯಾಗಲಿಲ್ಲ. ಅವರಂತೂ ಕಳೆದ ಹದಿನೆಂಟು ವರ್ಷಗಳಿಂದಲೂ ಯಾಂಗೂನ್‌ನಲ್ಲಿ ನೆಲೆಸಿದ್ದಾರೆ. ಮಾಲ್‌ಗಳಲ್ಲಿ ಮುತ್ತು, ರತ್ನ, ಹವಳ ಮಾರಾಟದ್ದೇ ಕಾರುಬಾರು. ಮನೋಜ್ ಪದೇ ಪದೇ ನೆಲದ ಮೇಲೆ ಎಲೆ ಅಡಿಕೆ ‘ರಂಗಿದೆ’, ಇತ್ತ ಬನ್ನಿ ಎಂದು ಕೈಹಿಡಿದು ದಾಟಿಸುತ್ತಿದ್ದರು.

ಹೌದು, ‘ಜೀವಂತ ಮಿಕ್ಸರ್’ಗಳು ಸಾಮಾನ್ಯ! ಯಾಂಗೂನ್‌ನಲ್ಲಿ ಮೂರು ಪಗೋಡಾ (ಬೌದ್ಧ ದೇಗುಲಗಳು)ಗಳು ನಮ್ಮ ಗಮನ ಸೆಳೆಯುತ್ತವೆ. ಆ ಪೈಕಿ ಶ್ವೇಡಗನ್ ಪಗೋಡ ಸಂಕೀರ್ಣ ಬಹು ಭವ್ಯವಾಗಿದ್ದು ಸ್ವರ್ಣ ಸೌಧದ ತುದಿ ನಗರದ ಎಲ್ಲೆಡೆಯಿಂದಲೂ ಗೋಚರ. ಪಗೋಡಾದಲ್ಲಿ ಪ್ರವೇಶ ಧನ ತುಸು ದುಬಾರಿಯೆನ್ನಿಸುವುದಾದರೂ ಪ್ರವೇಶ ದ್ವಾರದಲ್ಲಿ ನೀರು, ಕಾಫಿ, ತಂಪು ಪಾನೀಯ ನೀಡುತ್ತಾರೆ. ಅದೊಂದು ಭವ್ಯ ಬುದ್ಧ ದೇಗುಲ.

ಸ್ವಚ್ಛತೆಗೆ, ನಿಶ್ಯಬ್ದಕ್ಕೆ ಅಗ್ರ ಆದ್ಯತೆ. ಬುದ್ಧನ ಬಗೆ ಬಗೆ ರೂಪಗಳು ನಮ್ಮ ಗಮನ ಸೆಳೆಯುತ್ತವೆ. ಯಾಂಗಾನ್‌ಗೆ ವಿದಾಯ ಹೇಳುವಾಗ ಬುದ್ಧನ ನಗು ಮುಖ ನಮ್ಮ ಕಣ್ಣ ಮುಂದೆ ಬಂದು ನನ್ನ ನೋಡಲು ಮತ್ತೆ ಯಾವಾಗ ಬರುವಿರಿ ಎನ್ನುವಂತೆ ಅಗಲಿಕೆಯ ನೋವನ್ನು ಹೆಚ್ಚಿಸುವುದು ಖಂಡಿತ. ಬೆಂಗಳೂರಿನಿಂದ ಯಾಂಗೂನ್‌ಗೆ ನೇರ ವಿಮಾನವಿದೆ. ಆರೂವರೆ ತಾಸುಗಳ ಹಾರಾಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT