ಶುಕ್ರವಾರ, ನವೆಂಬರ್ 15, 2019
27 °C

ಅಂಬೇವಾಡಿ–ಧಾರವಾಡ ರೈಲಿನ ಉದ್ಘಾಟನೆ ಇಂದು

Published:
Updated:

ಹುಬ್ಬಳ್ಳಿ: ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಅಂಬೇವಾಡಿ–ಅಳ್ನಾವರ ಪ್ರಯಾಣಿಕರ ರೈಲು ಮಾರ್ಗದ ಉದ್ಘಾಟನೆ ಮತ್ತು ಅಂಬೇವಾಡಿ–ಧಾರವಾಡ ಚೊಚ್ಚಲ ಪ್ಯಾಸೆಂಜರ್‌ ರೈಲಿನ ಸೌಲಭ್ಯದ ಉದ್ಘಾಟನೆ ಭಾನುವಾರ ಅಂಬೇವಾಡಿಯಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ.

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅನಂತಕುಮಾರ ಹೆಗಡೆ, ಶಾಸಕರಾದ ಆರ್‌.ವಿ. ದೇಶಪಾಂಡೆ, ಅಂಜಲಿ ನಿಂಬಾಲ್ಕರ್‌, ಅಮೃತ ದೇಸಾಯಿ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.

ಶತಮಾನದ ಇತಿಹಾಸ ಹೊಂದಿರುವ ಅಂಬೇವಾಡಿ–ಅಳ್ನಾವರ ಮಾರ್ಗವನ್ನು ಇಷ್ಟು ದಿನ ಗೂಡ್ಸ್‌ ರೈಲುಗಳಿಗೆ ಮಾತ್ರ ಬಳಕೆ ಮಾಡಲಾಗುತ್ತಿತ್ತು. ಮೊದಲ ಬಾರಿಗೆ ಪ್ಯಾಸೆಂಜರ್‌ ರೈಲಿಗೂ ಸಮರ್ಪಿಸಲಾಗುತ್ತದೆ. ಪ್ರಥಮ ಮಹಾಯುದ್ಧದ ಸಂದರ್ಭದಲ್ಲಿ ಈ ಮಾರ್ಗದಲ್ಲಿ ಟಿಂಬರ್‌ಗಳನ್ನು ಸಾಗಿಸಲಾಗುತ್ತಿತ್ತು. ಇದು ಒಟ್ಟು 25 ಕಿ.ಮೀ. ದೂರದ ಮಾರ್ಗವಾಗಿದೆ. ಅಂಬೇವಾಡಿ ದಾಂಡೇಲಿಗೆ ಸಮೀಪವಿರುವ ಕಾರಣ ಪ್ರವಾಸೋದ್ಯಮ ಬೆಳವಣಿಗೆಗೂ ಅನುಕೂಲವಾಗಲಿದೆ.

ಧಾರವಾಡ–ಅಂಬೇವಾಡಿ ಪ್ಯಾಸೆಂಜರ್‌ ರೈಲು ನ. 4ರಿಂದ ಎರಡೂ ಕಡೆಯಿಂದ ಸಂಚಾರ ಆರಂಭಿಸಲಿದೆ. ಬೆಳಿಗ್ಗೆ 11.30ಕ್ಕೆ ಧಾರವಾಡದಿಂದ ಹೊರಡುವ ರೈಲು ಮಧ್ಯಾಹ್ನ 1 ಗಂಟೆಗೆ ಅಂಬೇವಾಡಿ ತಲುಪಲಿದೆ. ಅಂಬೇವಾಡಿಯಿಂದ ಮಧ್ಯಾಹ್ನ 3ಕ್ಕೆ ಹೊರಡುವ ರೈಲು 4.40ಕ್ಕೆ ಧಾರವಾಡಕ್ಕೆ ಬರಲಿದೆ. ಅಳ್ನಾವರ, ಕಂಬರಗಾಣ್ವಿ, ಮುಗದ್ ಮತ್ತು ಕ್ಯಾರಿಕೊಪ್ಪ ನಿಲ್ದಾಣಗಳಲ್ಲಿ ನಿಲುಗಡೆಯಾಲಿದೆ.

ಪ್ರತಿಕ್ರಿಯಿಸಿ (+)