ಅಮ್ಮಿನಬಾವಿ ಗ್ರಾಮದೇವಿಯರ ಜಾತ್ರೆ ಆರಂಭ

7
ಮುಗಿಲು ಮುಟ್ಟಿದ ಉಧೋ..ಉಧೋ.. ಶಕ್ತಿಮಾತೆಯ ಜಯಘೋಷ

ಅಮ್ಮಿನಬಾವಿ ಗ್ರಾಮದೇವಿಯರ ಜಾತ್ರೆ ಆರಂಭ

Published:
Updated:
ಧಾರವಾಡ ತಾಲ್ಲೂಕಿನ ಅಮ್ಮಿನಬಾವಿ ಗ್ರಾಮದೇವತೆಯರ ಜಾತ್ರಾ ಮಹೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು

ಧಾರವಾಡ: ಉಧೋ...ಉಧೋ.... ಎಂಬ ಶಕ್ತಿಮಾತೆಯ ಜಯಘೋಷ ಮುಗಿಲು ಮುಟ್ಟುತ್ತಿದ್ದಂತೆ ಉತ್ತರ ಕರ್ನಾಟಕ ಭಾಗದ ಐತಿಹಾಸಿಕ ಜಾತ್ರೆಗಳಲ್ಲಿ ಒಂದಾದ ಅಮ್ಮಿನಭಾವಿ ಗ್ರಾಮದೇವಿ ರಥೋತ್ಸವ ಗುರುವಾರ ಸಂಜೆ 4ಕ್ಕೆ ಅಪಾರ ಭಕ್ತಸ್ತೋಮದ ಸಂಭ್ರಮದ ಮಧ್ಯೆ ಅತ್ಯಂತ ವೈಭವದಿಂದ ಜರುಗಿತು.

₹15 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಅಲಂಕೃತ ಗಡ್ಡಿ ತೇರಿನಲ್ಲಿ ಗ್ರಾಮದೆಲ್ಲೆಡೆ ಹೊನ್ನಾಟ ಆಡಿ ಬಂದ ದ್ಯಾವವ್ವ, ದುರ್ಗವ್ವ ದೇವತೆಯರ ಮೂರ್ತಿಗಳನ್ನು ಅಕ್ಕ-ಪಕ್ಕದಲ್ಲಿ ಕೂಡಿಸಿ ಶೃಂಗರಿಸಲಾಗಿತ್ತು.

ಬೂದಿಹಾಳ ಮನೆತನದಿಂದ ರಥವನ್ನು ಎಳೆಯಲು ಉದ್ದವಾದ ಹಗ್ಗವನ್ನು ಮೆರವಣಿಗೆ ಮೂಲಕ ತರಲಾಯಿತು. ದೇವಾಲಯದಿಂದ ಆರಂಭವಾದ ರಥೋತ್ಸವ ಮಾರುಕಟ್ಟೆ ರಸ್ತೆಯ ಮೂಲಕ ಸಾಗಿ ದೊಡ್ಡೋಣಿಯಲ್ಲಿ ಹಾಯ್ದು ಪಾದಗಟ್ಟಿಯಲ್ಲಿ ಸಂಪನ್ನಗೊಂಡಿತು. ಭಕ್ತರು ದಾರಿ ಉದ್ದಕ್ಕೂ ರಥಕ್ಕೆ ಉತ್ತತ್ತಿ, ನಿಂಬೆಹಣ್ಣು, ಬಾಳೆಹಣ್ಣು ಎಸೆಯುವುದರ ಮೂಲಕ ತಮ್ಮ ಭಕ್ತಿಯ ಸೇವೆ ಸಲ್ಲಿಸಿದರು.

ರಥೋತ್ಸವದ ಸಂದರ್ಭದಲ್ಲಿ ನಿರಂತರ ಭಂಡಾರದ ಸಿಂಚನ ಇಡೀ ಜಾತ್ರಾ ಮಹೋತ್ಸವವು ಹಳದಿಮಯವಾಗಿ ಗೋಚರಿಸಿತು. ಅಮ್ಮಿನಬಾವಿ ಹಾಗೂ ಸಮೀಪದ ಗ್ರಾಮಗಳ ಹಲವಾರು ಡೊಳ್ಳು, ಜಾಂಜ್, ಕರಡಿ ಮಜಲು, ಕಹಳೆ ಮುಂತಾದ ಜನಪದ ವಾದ್ಯ ಮೇಳಗಳ ಝೇಂಕಾರ ರಥೋತ್ಸವದ ಮೆರುಗನ್ನು ಇಮ್ಮಡಿಗೊಳಿಸಿದ್ದವು.

ಗ್ರಾಮದ ಭಕ್ತರ ಜತೆಗೆ ಸುತ್ತಲಿನ ಕರಡಿಗುಡ್ಡ, ಮರೇವಾಡ, ತಿಮ್ಮಾಪುರ, ಕವಲಗೇರಿ ಸೇರಿದಂತೆ ರಾಜ್ಯದ ನಾನಾ ಮೂಲೆಗಳಿಂದ ಬಂದಿದ್ದ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ಶ್ರೀಶಕ್ತಿದೇವಿಯರ ಕೃಪೆಗೆ ಪಾತ್ರರಾದರು.

ಸೆಲ್ಪಿ ಸಂಭ್ರಮ: ಜಾತ್ರೆಯಲ್ಲಿ ಪಾಲ್ಗೊಂಡ ಬಹುತೇಕರು ತಮ್ಮ ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. 30 ವರ್ಷಕ್ಕೊಮ್ಮೆ ಜರುಗುವ ಜಾತ್ರಾ ಮಹೋತ್ಸವದ ಕ್ಷಣಗಳನ್ನು ಸೆರೆಹಿಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !