ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಪರ್‌ಸಾನಿಕ್‌ ಜೆಟ್‌ ಎದುರು ಬಿಲ್ಲು–ಬಾಣ ನಡೆಯಲ್ಲ: ಸಚಿವ ಅನಂತಕುಮಾರ್‌ ಹೆಗಡೆ

Last Updated 16 ಡಿಸೆಂಬರ್ 2018, 11:27 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿದೇಶಿ ಶತ್ರುಗಳು ನಮ್ಮ ಮೇಲೆ ಸೂಪರ್‌ ಸಾನಿಕ್‌ ಜೆಟ್‌ ಬಳಸಿ ದಾಳಿ ಮಾಡುವಾಗ ನಾವು ಹಳೇ ಕಾಲದವರಂತೆ ಬಿಲ್ಲು–ಬಾಣಗಳನ್ನು ಬಳಸಿ ಯುದ್ಧ ಗೆಲ್ಲಲು ಆಗುವುದಿಲ್ಲ. ಕಾಲಕ್ಕೆ ತಕ್ಕಂತೆ ನಾವೂ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಇದು ಪ್ರಧಾನಿ ಮೋದಿಯವರೂ ಚಿಂತನೆಯೂ ಹೌದು ಎಂದು ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ್‌ ಹೆಗಡೆ ಅಭಿಪ್ರಾಯಪಟ್ಟರು.

ನಗರದಲ್ಲಿ ಬಿಜೆಪಿ ಅಂಗ ಸಂಸ್ಥೆ ಲಘು ಉದ್ಯೋಗ ಭಾರತಿ ಏರ್ಪಡಿಸಿದ್ದ ಎರಡು ದಿನಗಳ ಮಧ್ಯಮ, ಸಣ್ಣ ಹಾಗೂ ಸೂಕ್ಷ್ಮ ಕೈಗಾರಿಕೆಗಳಲ್ಲಿನ (ಎಂಎಸ್‌ಎಂಇ) ಅವಕಾಶಗಳ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಕಾಲಕ್ಕೆ ತಕ್ಕಂತೆ ನಾವೂ ಬದಲಾಗಬೇಕು. ನಿಂತ ನೀರು ಕೊಳೆತುನಾರುತ್ತದೆ. ಆದರೆ, ಹರಿಯುವ ನೀರು ಸ್ವಚ್ಛವಾಗಿರುತ್ತದೆ. ಉತ್ತರ ಪ್ರದೇಶದಲ್ಲಿ ಮುಟ್ಟಲೂ ಯೋಗ್ಯವಲ್ಲದ ಗಂಗಾ ನದಿ ಕೊಲ್ಕತ್ತಾದಲ್ಲಿ ಹರಿದು ಶುದ್ಧವಾಗಿರುತ್ತದೆ. ಹಾಗೆಯೇ ನಮ್ಮ ಎಂಎಸ್‌ಎಂಇ ಕ್ಷೇತ್ರದಲ್ಲಿಯೂ ಅಮೂಲಾಗ್ರ ಬದಲಾವಣೆ ತರಬೇಕಾಗಿದೆ ಎಂದರು.

‘120 ಕೋಟಿ ಜನರಿಗೆ ಉದ್ಯೋಗ ಕೊಡಬೇಕು ಎಂಬುದು ಹಳೆಯ ಕಮ್ಯುನಿಸ್ಟ್‌ ಮಾದರಿ. ಅದರ ಬದಲು 120 ಕೋಟಿ ಜನರನ್ನು ಬಳಸಿಕೊಳ್ಳುವ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆಯ ರೋಬೊಟ್‌ಗಳನ್ನು ಉಪಯೋಗಿಸಿಕೊಂಡು ಜಗತ್ತಿನ 500 ಕೋಟಿ ಜನರನ್ನು ಸಾಕುತ್ತೀವಿ ಎಂಬುದು ನಮ್ಮ ಗುರಿಯಾಗಬೇಕು’ ಎಂದು ಹೇಳಿದರು.

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ರಾಜ್ಯ ಸಚಿವ ಸಿ.ಆರ್‌.ಚೌಧರಿ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ಬಳಿಕ ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕಾ ವಲಯವು ಸಾಕಷ್ಟು ಉನ್ನತಿ ಸಾಧಿಸಿದೆ. ಈ ಕ್ಷೇತ್ರದಲ್ಲಿ ಉದ್ಯಮ ಸ್ಥಾಪಿಸುವವರಿಗೆ ಅಗತ್ಯವಾದ ಭೂಮಿ, ನೀರು, ವಿದ್ಯುತ್‌ ನೀಡಲು ನಿಯಮಾವಳಿಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಾಗಿದೆ’ ಎಂದರು.

ವಿದೇಶಿ ವಿನಿಮಯಕ್ಕೆ ಎಂಎಸ್‌ಎಂಇ ಕ್ಷೇತ್ರವು ಶೇ 8ರಷ್ಟು ಕೊಡುಗೆ ನೀಡುತ್ತಿದ್ದು, ದೇಶದಾದ್ಯಂತ 17 ಕೋಟಿ ಜನರು ಇಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ. 25 ಜನರಿಗೆ ಉದ್ಯೋಗ ಕೊಡುವ ಹಾಗೂ 2025ರ ವೇಳೆಗೆ 5 ಟ್ರಿಲಿಯನ್‌ ಅಮೆರಿಕನ್‌ ಡಾಲರ್‌ ವಹಿವಾಟನ್ನು ಈ ಕ್ಷೇತ್ರದಿಂದ ನಿರೀಕ್ಷಿಸಲಾಗುತ್ತಿದೆ ಎಂದು ತಿಳಿಸಿದರು.

ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ‘ಜಿಎಸ್‌ಟಿ ಜಾರಿಗೆ ಬಂದು ಎರಡು ವರ್ಷ ಮುಕ್ತಾಯವಾಗಿದ್ದು, ಇದರಿಂದ ಉದ್ಯಮಿಗಳಿಗೆ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಈ ಬಗ್ಗೆ ಶೀಘ್ರವೇ ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಗಮನಕ್ಕೆ ತರಲಿದ್ದೇವೆ’ ಎಂದರು.

ಕಾರ್ಯಕ್ರಮದಲ್ಲಿ ಕೆಎಲ್‌ಇ ಸಂಸ್ಥೆಯ ತಾಂತ್ರಿಕ ನೆರವಿನಿಂದ ಅಭಿವೃದ್ಧಿಪಡಿಸಲಾದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ಡ್ರೋಣ್ ಕ್ಯಾಮೆರಾವನ್ನು ಸಚಿವದ್ವಯರ ಎದುರು ಶ್ರೀನಿವಾಸ್‌ ರೆಡ್ಡಿ ಹಾಗೂ ತಂಡದವರು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT