ಬುಧವಾರ, ಆಗಸ್ಟ್ 17, 2022
28 °C
ಎಪಿಎಂಸಿ ಶುಲ್ಕ ಹೆಚ್ಚಳ: ವಿವಿಧ ಜಿಲ್ಲೆಗಳ ವರ್ತಕರ ಸಭೆ

‘ಎಪಿಎಂಸಿ ವ್ಯವಸ್ಥೆ ನಶಿಸುವ ಆತಂಕ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಹಿಂದೆ ಶೇ 1.50ರಷ್ಟಿದ್ದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಶುಲ್ಕವನ್ನು ರಾಜ್ಯ ಸರ್ಕಾರ ಇತ್ತೀಚೆಗೆ ಶೇ 0.35 ಪೈಸೆಗೆ ಇಳಿಕೆ ಮಾಡಿತ್ತು. ಇದೀಗ ಏಕಾಏಕಿ ಶೇ 1ಕ್ಕೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದು ಸರಿಯಲ್ಲ’ ಎಂದು ಹುಬ್ಬಳ್ಳಿ ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಬಸವರಾಜ ಯಕಲಾಸಪುರ ಬೇಸರ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಎಪಿಎಂಸಿ ಶುಲ್ಕ ಹೆಚ್ಚಳ ಮಾಡಿದ್ದರಿಂದ ಮುಂದೆ ಕೈಗೊಳ್ಳಬೇಕಾದ ನಿರ್ಧಾರದ ಕುರಿತು ಶುಕ್ರವಾರ ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಎಪಿಎಂಸಿ ವ್ಯಾಪಾರಸ್ಥರು ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯ ಎಪಿಎಂಸಿ ಕ್ರಿಯಾ ಸಮಿತಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ನೇತೃತ್ವದಲ್ಲಿ ಸಭೆ ನಡೆಯಿತು.

‘ಎಪಿಎಂಸಿಯ ಮೂಲಸೌಲಭ್ಯ, ನಿರ್ವಹಣೆ ಕಾರಣ ನೀಡಿ ಶುಲ್ಕ ಹೆಚ್ಚಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಎಪಿಎಂಸಿ ಪ್ರಾಂಗಣದ ವರ್ತಕರಿಗೆ ಮಾತ್ರ ಇದು ಅನ್ವಯವಾಗಲಿದೆ. ಹೊರಗಿನ ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರ ನಡೆಸುವವರಿಗೆ ಯಾವುದೇ ಶುಲ್ಕ ಇಲ್ಲ. ಇದರಿಂದ ಎಪಿಎಂಸಿ ರೈತ ಹಾಗೂ ವರ್ತಕರ ನಡುವಿನ ಸಂಪರ್ಕ ಕಡಿದುಹೋಗುವ ಸಾಧ್ಯತೆಯಿದೆ. ಅಲ್ಲದೆ, ಮುಂಬರುವ ದಿನಗಳಲ್ಲಿ ಎಪಿಎಂಸಿಗಳು ನಶಿಸಿಹೋಗಲಿದ್ದು, ಜಿಎಸ್‌ಟಿ ತೆರಿಗೆ ಮೇಲೆಯೂ ಪರಿಣಾಮ ಬೀರಲಿದೆ’ ಎಂದು ಯಕಲಾಸಪುರ ಆತಂಕ ವ್ಯಕ್ತಪಡಿಸಿದರು.

‘ಸರ್ಕಾರ ವರ್ತಕರ ಜೊತೆ ಚರ್ಚಿಸದೆ ಏಕಮುಖವಾಗಿ ಶುಲ್ಕ ಹೆಚ್ಚಳ ಮಾಡಿದೆ. ಇದರಿಂದ ಎಪಿಎಂಸಿಗಳು ನಶಿಸಿಹೋಗಲಿದ್ದು, ಜಿಎಸ್‌ಟಿ ತೆರಿಗೆ ಮೇಲೆಯೂ ಪರಿಣಾಮ ಬೀರಲಿದೆ. ಈ ಕುರಿತು ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕು’ ಎಂದು ಶಂಕರಣ್ಣ ಮುನವಳ್ಳಿ ಒತ್ತಾಯಿಸಿದರು.

ಧಾರವಾಡ ವರ್ತಕರ ಸಂಘದ ಶಿವಶಂಕರ ಹಂಪಣ್ಣವರ ಮಾತನಾಡಿ ‘ಈ ಹಿಂದೆಯೂ ಎಪಿಎಂಸಿ ಬಂದ್‌ ಮಾಡಿದ್ದೇವೆ. ಆದರೆ, ಕಾಟಾಚಾರಕ್ಕೆ ಎನ್ನುವಂತೆ ಬಂದ್‌ ನಡೆದಿತ್ತು. ನಮ್ಮಲ್ಲಿ ಒಗ್ಗಟ್ಟು ಇಲ್ಲದಿರುವುದು ದೊಡ್ಡ ಸಮಸ್ಯೆ. ಈ ನಿಟ್ಟಿನಲ್ಲಿ ಎಲ್ಲ ವರ್ತಕರು ಒಮ್ಮತದ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಹೇಳಿದರು.

ಬೆಂಗಳೂರಿನ ಎಫ್‌ಕೆಸಿಸಿಐ ಅಧ್ಯಕ್ಷ ಪಿ.ಡಿ. ಶಿರೂರ, ಕೆಸಿಸಿಐ ಅಧ್ಯಕ್ಷ ಮಹೇಂದ್ರ ಲದ್ದಡ, ವಿಜಯ ಜವಳಿ, ಅಶೊಕ ಗಡಾದ, ಶೇಖಣ್ಣ ಗದ್ದಿಕೇರಿ, ವಿ.ಪಿ. ಲಿಂಗನಗೌಡರ, ವಿಕಾಸ ಸೊಪ್ಪಿನ ಇದ್ದರು.

ಕೆಸಿಸಿಐ ಹಾಗೂ ಎಫ್‌ಕೆಸಿಸಿಐ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಧಾರವಾಡ, ವಿಜಯಪುರ, ಗದಗ, ಬ್ಯಾಡಗಿ, ರಾಣೆಬೆನ್ನೂರು, ಕೊಪ್ಪಳ, ದಾವಣಗೆರೆ, ಹುಬ್ಬಳ್ಳಿ ಸೇರಿದಂತೆ ವಿವಿಧ ಜಿಲ್ಲೆಗಳ 30ಕ್ಕೂ ಹೆಚ್ಚು ಎಪಿಎಂಸಿ ವರ್ತಕ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

ವಿಜಯಪುರದಲ್ಲಿ ವ್ಯಾಪಾರ ಸ್ಥಗಿತ

‘ಸರ್ಕಾರದ ನಿರ್ಧಾರ ಎಪಿಎಂಸಿ ಪ್ರಾಂಗಣದಲ್ಲಿ ವ್ಯಾಪಾರ ನಡೆಸುವ ವರ್ತಕರ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ವಿಜಯಪುರ ಎಪಿಎಂಸಿಯಲ್ಲಿ ಈಗಾಗಲೇ ವ್ಯಾಪಾರ ಸ್ಥಗಿತಗೊಳಿಸಿದ್ದೇವೆ. ಅಲ್ಲದೆ, ಸರ್ಕಾರ ಶುಲ್ಕ ಇಳಿಕೆ ಮಾಡುವವರೆಗೂ ವ್ಯಾಪಾರ ನಡೆಸುವುದಿಲ್ಲ ಎಂದು ನಿರ್ಧಾರ ತೆಗೆದುಕೊಂಡಿದ್ದೇವೆ’ ಎಂದು ವಿಜಯಪುರ ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಪಾರಸ್ಮಲ್‌ ಬೋತ್ರ ಸಭೆಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.