ಶುಕ್ರವಾರ, ಜೂನ್ 18, 2021
27 °C
ಹುಬ್ಬಳ್ಳಿಯಲ್ಲಿ ಸರಳವಾಗಿ ನಡೆದ ಸ್ವಾತಂತ್ರ್ಯ ದಿನಾಚರಣೆ, ಮೊಳಗಿದ ರಾಷ್ಟ್ರಗೀತೆ, ನಾಡಗೀತೆ

ಹುಬ್ಬಳ್ಳಿ | ಕೋವಿಡ್‌ ವಾರಿಯರ್‌ಗಳ ಶ್ರಮಕ್ಕೆ ಶ್ಲಾಘನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಪ್ರತಿವರ್ಷದ ಸ್ವಾತಂತ್ರ್ಯ ದಿನದ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ನೆನಪಿಸಿಕೊಳ್ಳಲಾಗುತ್ತಿತ್ತು. ಈ ಬಾರಿ ಯೋಧರ ಸ್ಮರಣೆಯ ಜೊತೆಗೆ ಕೋವಿಡ್‌ 19 ಹಿಮ್ಮೆಟ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ವಾರಿಯರ್‌ಗಳ ಕೆಲಸಕ್ಕೆ ಪ್ರಶಂಸೆಯ ಮಹಾಪೂರ ಹರಿದು ಬಂತು.

ಹುಬ್ಬಳ್ಳಿ ತಾಲ್ಲೂಕು ಆಡಳಿತದಿಂದ ನಗರದ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಧ್ವಜಾರೋಹಣ ನೆರವೇರಿಸಿ ’ಅನೇಕ ಸಂಘ, ಸಂಸ್ಥೆಗಳ ನೆರವಿನೊಂದಿಗೆ ತಾಲ್ಲೂಕು ಆಡಳಿತದ ಸಿಬ್ಬಂದಿ ಕೋವಿಡ್ ಹಾಗೂ ಲಾಕ್‌ಡೌನ್‌ ಅವಧಿಯಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಸಾರ್ವಜನಿಕರು ಹಾಗೂ ಮಾಧ್ಯಮದವರು ಕೂಡ ಇದಕ್ಕೆ ಕೈ ಜೋಡಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ವಾರಿಯರ್‌ಗಳು ತಮ್ಮ ಜೀವ ಪಣಕ್ಕಿಟ್ಟು ಜನರ ಜೀವ ಉಳಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

’ಲಾಕ್‌ಡೌನ್‌ ಸಮಯದಲ್ಲಿ ಸಿದ್ಧಾರೂಢ ಮಠದ ಆಡಳಿತ ಮಂಡಳಿ, ಯುನೈಟೆಡ್‌ ಫಸ್ಟ್‌ ಸಂಜಯ ಗೋಡಾವತ್‌ ಗ್ರೂಪ್, ಇನ್ಫೋಸಿಸ್ ಫೌಂಡೇಷನ್ ಸೇರಿದಂತೆ ಅನೇಕ ಸಂಸ್ಥೆಗಳು ನೆರವಾಗಿವೆ. ಸಾಂಸ್ಥಿಕ ಕ್ವಾರಂಟೈನ್‌ಗಾಗಿ ಅನೇಕ ಮಾಲೀಕರು ಸ್ವಯಂಪ್ರೇರಿತರಾಗಿ ಹೋಟೆಲ್‌ಗಳನ್ನು ನೀಡಿದ್ದಾರೆ. ಹುಬ್ಬಳ್ಳಿ ತಾಲ್ಲೂಕಿನಲ್ಲಿ ಇದುವರೆಗೆ 3,510 ಸೋಂಕಿತರು ಕಂಡು ಬಂದಿದ್ದು, 2,332 ಜನ ಗುಣಮುಖರಾಗಿದ್ದಾರೆ. 121 ವ್ಯಕ್ತಿಗಳು ಮೃತಪಟ್ಟಿದ್ದಾರೆ’ ಎಂದರು.

ವಿಧಾನ ಪರಿಷತ್‌ ಸದಸ್ಯರಾದ ಬಸವರಾಜ ಹೊರಟ್ಟಿ, ಪ್ರದೀಪ ಶೆಟ್ಟರ್, ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್‌ ಪ್ರಕಾಶ ನಾಶಿ, ಭೂದಾಖಲೆ ಸಹಾಯಕ ನಿರ್ದೇಶಕ ಅನಿಲ್ ಕುಮಾರ್ ಜಾಲಗೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ, ಗ್ರಾಮೀಣ ಸಿ.ಪಿ.ಐ ಸಿ.ವಿ. ಪಾಟೀಲ, ಅಪರ ಜಿಲ್ಲಾ ಖಜಾನೆಯ ಅಧಿಕಾರಿ ಉಲ್ಲಾಸ್ ವಿ. ನಿಂಗರೆಡ್ಡಿ, ಹೆಚ್ಚುವರಿ ತಹಶೀಲ್ದಾರ್ ವಿಜಯಕುಮಾರ್ ಕಡಕೋಳ ಇದ್ದರು.

ಮಿನಿ ವಿಧಾನಸೌಧ ಮುಂದೆ ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್‌ ಪ್ರಕಾಶ ನಾಶಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಸಂಸ್ಥೆ ಅಧ್ಯಕ್ಷ ವಿ.ಎಸ್‌. ಪಾಟೀಲ ಧ್ವಜಾರೋಹಣ ನೆರವೇರಿಸಿದರು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ಮಾತನಾಡಿ ‘ಕೊರೊನಾ ಕಷ್ಟದ ಕಾಲದಲ್ಲಿಯೂ ಸಾರಿಗೆ ಸಿಬ್ಬಂದಿ ತೋರಿದ ವೃತ್ತಿಬದ್ಧತೆ ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜಂಟಿ ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಪಿ.ವೈ. ನಾಯಕ್, ಶಶಿಧರ ಚನ್ನಪ್ಪಗೌಡರ, ಸುನೀಲ ಪತ್ರಿ ಪಾಲ್ಗೊಂಡಿದ್ದರು. ಕೋವಿಡ್‌ ಸಮಯದಲ್ಲಿ ಉತ್ತಮ ಕೆಲಸ ಮಾಡಿದ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಲಾಯಿತು.

24x7 ನೀರಿನ ವ್ಯವಸ್ಥೆಗೆ ₹1206.97 ಕೋಟಿ ಟೆಂಡರ್‌

ಅವಳಿ ನಗರಗಳ ಜನರಿಗೆ 24X7 ಕುಡಿಯುವ ನೀರು ಪೂರೈಕೆಗೆ ವಿಶ್ವ ಬ್ಯಾಂಕ್‌ ನೆರವಿನೊಂದಿಗೆ ಕರ್ನಾಟಕ ನಗರ ನೀರು ಸರಬರಾಜು ಅಧುನೀಕರಣ ಯೋಜನೆಯ ಟೆಂಡರ್‌ ಮುಗಿದಿದೆ. ಚೆನ್ನೈನ ಎಲ್‌ ಅಂಡ್‌ ಟಿ ಕಂಪನಿ ₹1206.97 ಕೋಟಿಗೆ ಗುತ್ತಿಗೆ ಪಡೆದುಕೊಂಡಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಹೇಳಿದರು.

ಮಹಾನಗರ ಪಾಲಿಕೆ ಮತ್ತು ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ‘ಈ ಕಾಮಗಾರಿಗೆ ಜೂನ್‌ 12ರಂದು ಕಾರ್ಯಾದೇಶ ನೀಡಲಾಗಿದ್ದು, ಪ್ರಾಥಮಿಕ ಹಂತದ ಸಮೀಕ್ಷಾ ಕಾರ್ಯ ನಡೆಯುತ್ತಿದೆ. ನಾಲ್ಕೂವರೆ ವರ್ಷಗಳಲ್ಲಿ ಕೆಲಸ ಪೂರ್ಣಗೊಳ್ಳಲಿದ್ದು, ಮುಂದಿನ ಏಳು ವರ್ಷಗಳವರೆಗೆ ನಿರ್ವಹಣೆ ಜವಾಬ್ದಾರಿ ಕಂಪನಿಯೇ ನಿರ್ವಹಿಸಲಿದೆ’ ಎಂದರು. ಕಾಮಗಾರಿಗೆ ₹763 ಕೋಟಿ, ಉಳಿದ ₹383 ಕೋಟಿ ನಿರ್ವಹಣೆಗೆ ನಿಗದಿ ಮಾಡಲಾಗಿದೆ.

ಮಾಜಿ ಮೇಯರ್‌ ಸುಧೀರ ಸರಾಫ್‌, ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ವಲಯ ಆಯುಕ್ತ ಎಸ್‌.ಸಿ. ಬೇವೂರ, ಜೆಡಿಎಸ್‌ ಮುಖಂಡ ರಾಜಣ್ಣ ಕೊರವಿ ಇದ್ದರು.

ತಾಲ್ಲೂಕು ಆಡಳಿತದಿಂದ ಸನ್ಮಾನಿತ ವಾರಿಯರ್ಸ್‌

ಕಿಮ್ಸ್‌ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ವೈದ್ಯಕೀಯ ಅಧೀಕ್ಷಕ ಅರುಣ ಕುಮಾರ್‌, ಗುರುನಾನಕ್ ದೇವಸ್ಥಾನ ಸಮಿತಿಯ ಜಸ್ಮೀಲ್‌ ಸಿಂಗ್‌ ಗಿಲ್‌, ನಿವೃತ್ತ ಡಿವೈಎಸ್‌ಪಿ ಡಿ.ಡಿ. ಮಾಳಗಿ, ಯುನೈಟೆಡ್‌ ಫಸ್ಟ್ ಸಂಜಯ ಗೋಡಾವತ್‌ ಗ್ರೂಪ್‌ನ ಆಡಳಿತ ಮಂಡಳಿ ಸದಸ್ಯ ಧ್ರುವ ಬೋಹ್ರಾ, ಇನ್ಫೋಸಿಸ್‌ ಫೌಂಡೇಷನ್‌, ಹುಬ್ಬಳ್ಳಿಯ ಮೆಟ್ರೊ ಪೊಲೀಸ್ ಹೋಟೆಲ್‌ ಮಾಲೀಕ ಅಶ್ರಫ್‌ ಅಲಿ ಬಶೀರ್‌ ಅಹ್ಮದ್‌, ಚಿಟಗುಪ್ಪಿ ಆಸ್ಪತ್ರೆಯ ಸಿಬ್ಬಂದಿ ಡಾ. ಪ್ರಕಾಶ ನರಗುಂದ, ಅಂಕಮ್ಮಾ ಆನಂದರಾಮ್‌ ಮೀರಿಯಾಲ್‌, ಹೀನಾ ಕೌಸರ್‌, ಹನುಮಂತಪ್ಪ, ಆಂಬುಲೆನ್ಸ್‌ ಚಾಲಕ ರಮೇಶ ನರಗುಂದ, ಹುಬ್ಬಳ್ಳಿ ತಾಲ್ಲೂಕು ಕಾರ್ಯಾಲಯದ ಸಿಬ್ಬಂದಿ ಡಾ. ಮಹಮ್ಮದ್ ಫಾರೂಕ್‌ ಉಪ್ಪಿನ, ಸುನೀತಾ ಬಾಕಳೆ, ಸುಧೀರ ದೇಸಾಯಿ, ಎಲೀಷ ಅಶೋಕ ಸಾವನಗೌಡ್ರ ಮತ್ತು ಆಂಬುಲೆನ್ಸ್‌ ಚಾಲಕ ಅಂದಾನಪ್ಪ ದೊಡ್ಡಮನಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು